ಮೋದಿ @ 70 ವಿಷನ್ ಡಾಕ್ಯುಮೆಂಟ್ ಪುಸ್ತಕ ಬಿಡುಗಡೆ
ಬೆಂಗಳೂರು, ಜ 20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಇಂದು 'ಮೋದಿ @ 70 ವಿಷನ್ ಡಾಕ್ಯುಮೆಂಟ್' ಪುಸ್ತಕ, ಮೈಸೂರಿನಲ್ಲಿ ನಡೆದ ಬೃಹತ್ ಉದ್ಯೋಗ ನೊಂದಾವಣಿ ಮತ್ತು ಸ್ವಯಂ ಉದ್ಯೋಗ ನೊಂದಾವಣಿ ಕಾರ್ಯಕ್ರಮದ ಸಮರ್ಥ ಕರ್ನಾಟಕ ಎಂಬ ಹೊತ್ತುಗೆ, ಕೇಂದ್ರ - ರಾಜ್ಯ ಸರ್ಕಾರದ ಮತ್ತು ಕೆ.ಆರ್ ಕ್ಷೇತ್ರದ ಅಭಿವೃದ್ಧಿಯ ಕುರಿತು ಒಂದು ವೆಬ್ ಸೈಟ್ ಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ್ ಬೊಮ್ಮಾಯಿ, "ಕೃಷ್ಣರಾಜ ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಅವರು ಬಿಜೆಪಿಗೆ ಹಾಗೂ ರಾಜ್ಯಕ್ಕೆ ಥಿಂಕ್ ಟ್ಯಾಂಕರ್ ಇದ್ದಂತೆ. ಸಾರ್ವಜನಿಕ ಸೇವೆಯನ್ನು ಮಾಡುವ ಮೂಲಕ ಜನೋಪಯೋಗಿ ಶಾಸಕರಲ್ಲಿ ರಾಮದಾಸ್ ಅವರು ಅಗ್ರಗಣ್ಯರಾಗಿ ನಿಲ್ಲುತ್ತಾರೆ" ಎಂದು ರಾಮದಾಸ್ ಕಾರ್ಯವೈಖರಿಯನ್ನು ಸಿಎಂ ಶ್ಲಾಘಿಸಿದರು.
"ತಮ್ಮ ಕ್ಷೇತ್ರದಲ್ಲಿ ಎಲ್ಲಾ ಇಲಾಖೆಗಳಿಂದ ಅರ್ಹ ಫಲಾನುಭವಿಗಳಿಗೆ ಹಲವಾರು ಯೋಜನೆಗಳನ್ನು ತಲುಪಿಸುವಲ್ಲಿ ಹಾಗೂ ಅದರ ಪೂರ್ಣ ವಿವರವನ್ನು ದಾಖಲಿಸುವ ಮೂಲಕ ಎಲ್ಲಾ ರಾಜಕಾರಣಿಗಳಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳನ್ನ ಸಾರ್ವಜನಿಕರಿಗೆ ತಲುಪಿಸುವಲ್ಲಿ ಇವರಷ್ಟು ಕಾರ್ಯ ಸಾಧನೆ ಯಾರು ಮಾಡಿಲ್ಲ ಎಂದು ಹೇಳಿದರೂ ತಪ್ಪಿಲ್ಲ" ಎಂದು ರಾಮದಾಸ್ ಅವರನ್ನು ಬೊಮ್ಮಾಯಿ ಹೊಗಳಿದ್ದಾರೆ.

"ಎಲ್ಲಾ ಯೋಜನೆಗಳ ಮಾಹಿತಿಗಳ ಪೂರ್ಣ ವಿವರಗಳನ್ನುಳ್ಳ ಪುಸ್ತಕ ಆಡಳಿತ ಮಾಡುವವರಿಗೆ ಬಹು ಉಪಕಾರಿಯಾಗಿದೆ. ನಾನು ಮುಖ್ಯಮಂತ್ರಿ ಆದ ಸಂದರ್ಭದಲ್ಲಿ ಮಾರ್ಗದರ್ಶಕರ ರೀತಿಯಲ್ಲಿ ರಾಮದಾಸ್ ಅವರು ಈ ರೀತಿಯ ಶ್ಲಾಘನೀಯ ಕೆಲಸವನ್ನು ಮಾಡಿದ್ದಾರೆ. 200ಕ್ಕೂ ಹೆಚ್ಚು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆಗಳುಳ್ಳ ವೆಬ್ ಸೈಟ್ ಅನ್ನು ಕೂಡಾ ನಾವು ಬಿಡುಗಡೆ ಮಾಡಿದ್ದು, ಅದು ದೊಡ್ಡ ಪ್ರಮಾಣದಲ್ಲಿ ಜನರನ್ನು ತಲುಪಲಿ" ಎಂದು ಸಿಎಂ ಬೊಮ್ಮಾಯಿ ಆಶಿಸಿದರು.
"ಈ ಸದರಿ ವೆಬ್ ಸೈಟ್ ಅನ್ನು ಸರ್ಕಾರದ ವೆಬ್ ಸೈಟ್ ಜೊತೆಗೆ ಲಿಂಕ್ ಮಾಡುವ ಮೂಲಕ ಸರ್ಕಾರದಲ್ಲಿ ಸಾರ್ವಜನಿಕರ ಸಹಭಾಗಿತ್ವ ತರಲು ಸಹಾಯವಾಗುತ್ತದೆ. ಬೆಳಗ್ಗೆ ನಾವು ಹಾಗೂ ರಾಮದಾಸ್ ಅವರು ಕುಳಿತು ಚರ್ಚಿಸುವ ಸಂದರ್ಭದಲ್ಲಿ ದುಡಿಯುವ ಜನತೆಗೆ ಏನಾದರೂ ಕೊಡುಗೆ ನೀಡಬೇಕೆಂದು ಚರ್ಚಿಸಿದ್ದೇವೆ. ಮುಂದಿನ ದಿನಗಳಲ್ಲಿ ಕಾರ್ಯಪ್ರವೃತ್ತರಾಗುವ ನಿಟ್ಟಿನಲ್ಲಿ ಮುನ್ನಡೆಯುತ್ತೇವೆ" ಎಂದು ಸಿಎಂ ಹೇಳಿದರು.
ಈ ಕಾರ್ಯಕ್ರಮದಲ್ಲಿ ಶಾಸಕರಾದ ಎಸ್.ಎ.ರಾಮದಾಸ್, ಮೈಸೂರಿನ ಮಹಾಪೌರರಾದ ಸುನಂದಾ ಪಾಲನೇತ್ರ, ನಗರಪಾಲಿಕಾ ಆಡಳಿತ ಪಕ್ಷದ ನಾಯಕರಾದ ಶಿವಕುಮಾರ್, ಕೆ.ಆರ್ ಕ್ಷೇತ್ರದ ಬಿಜೆಪಿ ಅಧ್ಯಕ್ಷರಾದ ಎಂ. ವಡಿವೇಲು ಮುಂತಾದವರು ಹಾಜರಿದ್ದರು.












Click it and Unblock the Notifications