'ಸಿಎಂ ಬಂದ್ರೆ ನಂಗೇನು..' ಅಂತ ಡಿವೈಡರ್ ಮೇಲೆ ಕಾರು ಹತ್ತಿಸಿದ ಜನಾರ್ದನ ರೆಡ್ಡಿ!
ರಾಜಕೀಯ ವಿರೋಧಿಗಳಾದ ಸಿಎಂ ಸಿದ್ದರಾಮಯ್ಯ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ನಿನ್ನೆ ಮುಖಾಮುಖಿಯಾಗಿದ್ದಾರೆ. ಈ ವೇಳೆ ಅಪರೂಪದ ಬೆಳವಣಿಗೆಯೊಂದು ನಡೆದಿದೆ. ಈ ವೇಳೆ ಜನಾರ್ದನ್ ರೆಡ್ಡಿ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಕ್ಯಾರೇ ಎನ್ನದೆ, ತಮ್ಮ ಕಾರನ್ನು ಡಿವೈಡರ್ ಮೇಲೆ ಹತ್ತಿಸಿ ಒನ್‌ವೇಲಿ ಹೋಗಿದ್ದಾರೆ ಎಂದು ವರದಿಯಾಗಿದೆ.
ನಿನ್ನೆ ರಾಯಚೂರು ಸೇರಿದಂತೆ ಹಲವೆಡೆ ವಿವಿಧ ಕಾರ್ಯಕ್ರಮಗಳಲ್ಲಿ ಸಿಎಂ ಸಿದ್ದರಾಮಯ್ಯ ಭಾಗವಹಿಸಿದ್ದರು. ಇದನ್ನು ಮುಗಿಸಿ ಬೆಂಗಳೂರಿಗೆ ವಾಪಸ್ ಆಗುವಾಗ ಕೊಪ್ಪಳ ಮಾರ್ಗವಾಗಿ ಗಂಗಾವತಿಗೆ ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.

ಮೊದಲಿಗೆ ಸಿಎಂ ಸಿದ್ದರಾಮಯ್ಯ ಅವರು ಬರುತ್ತಿದ್ದ ಕಾರಣ ಗಂಗಾವತಿ ಬಳಿ ಝೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ರಸ್ತೆಯಲ್ಲಿ ವಾಹನ ಸವಾರರನ್ನು ತಡೆಯಲಾಗಿತ್ತು. ಇದೇ ಮಾರ್ಗದಲ್ಲಿ ಶಾಸಕ ಜನಾರ್ದನ್ ರೆಡ್ಡಿ ಅವರಿದ್ದ ಕಾರು ಕೂಡ ಇತ್ತು ಎನ್ನಲಾಗಿದೆ. ಹಾಗಾಗಿ ಪೊಲೀಸರು ಇವರ ಕಾರನ್ನು ಕೂಡ ತಡೆದಿದ್ದರು.
ತುಂಬಾ ಹೊತ್ತಾದರೂ ಸಂಚಾರಕ್ಕೆ ಅಡ್ಡಿಪಡಿಸಿದ ಕಾರಣ ಜನಾರ್ದನ್ ರೆಡ್ಡಿ ಅವರು ಕೋಪಗೊಂಡಿದ್ದರು. ಕೊನೆಗೆ ಸಿಎಂ ಆದ್ರೆ ನನಗೇನು ಎನ್ನುತ್ತಾ ನೇರವಾಗಿ ಡಿವೈಡರ್ ಮೇಲೆಯೇ ಕಾರ್ ಹತ್ತಿಸಿ, ಒನ್‌ವೇಯಲ್ಲಿ ಕಾರು ಚಲಾಯಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇನ್ನು ರಾಂಗ್ ರೂಟ್‌ನಲ್ಲಿ ಜನಾರ್ದನ್ ರೆಡ್ಡಿ ಕಾರು ಬರುತ್ತಿದ್ದನ್ನು ಕಂಡ ಸಿಎಂ ಬೆಂಗಾವಲು ಸಿಬ್ಬಂದಿ, ತಮ್ಮ ವಾಹನಗಳನ್ನೇ ನಿಲ್ಲಿಸಿದ್ದಾರೆ. ರೆಡ್ಡಿ ಅವರ ಕಾರು ಪಾಸ್ ಆದ ಬಳಿಕ ಮತ್ತೆ ಅಲ್ಲಿಂದ ಪ್ರಯಾಣ ಮುಂದುವರಿಸಿದರು ಎಂದು ಹೇಳಲಾಗಿದೆ.

ಒಂದೆಡೆ ಭದ್ರತೆಯ ನೆಪದಲ್ಲಿ ಜನರಿಗೆ ತೊಂದರೆ ಮಾಡೋದು ಸರಿಯಲ್ಲ. ಸಿಎಂ ಅವರು ಝೀರೋ ಟ್ರಾಫಿಕ್ ಮೂಲಕ ಸಾರ್ವಜನಿಕರಿಗೆ ತೊಂದರೆ ಕೊಡ್ತಿದ್ದಾರೆ ಎಂದು ಜನಾರ್ದನರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಜನಪ್ರತಿನಿಧಿಯಾದವರೇ ಈ ರೀತಿ ಡಿವೈಡರ್ ಮೇಲೆ ಕಾರು ಹತ್ತಿಸಿ, ತಪ್ಪು ಮಾರ್ಗದಲ್ಲಿ ಕಾರು ಚಲಾಯಿಸುವುದು ಎಷ್ಟರಮಟ್ಟಿಗೆ ಸರಿ ಎಂದು ಸಹ ಹೇಳಲಾಗುತ್ತಿದೆ.
ಇನ್ನು ಇತ್ತೀಚೆಗೆ ಜನಾರ್ದನ ರೆಡ್ಡಿ ಅವರಿಗೆ ಬಳ್ಳಾರಿ ಪ್ರವೇಶಕ್ಕೆ ವಿಧಿಸಿದ್ದ ನಿರ್ಬಂಧವನ್ನು ಸುಪ್ರೀಂ ಕೋರ್ಟ್ ತೆರವುಗೊಳಿಸಿತ್ತು. ಈ ವೇಳೆ ಮಾತನಾಡಿದ್ದ ರೆಡ್ಡಿ, ನಾನು ಜೈಲಿಗೆ ಹೋಗಲು ಸಿಎಂ ಸಿದ್ದರಾಮಯ್ಯನವರೇ ಕಾರಣ. ನನ್ನನ್ನು ಬರೋಬ್ಬರಿ 13 ವರ್ಷಗಳ ಕಾಲ ಹುಟ್ಟೂರಿನಿಂದ ದೂರ ಇರುವಂತೆ ಮಾಡಿದರು. ದೇವರ ಆಶೀರ್ವಾದದಿಂದ ನಾನು ಬಳ್ಳಾರಿಗೆ ವಾಪಸ್ ಬಂದಿದ್ದೇನೆ. ನಮ್ಮ ಹುಟ್ಟೂರೇ ನಮಗೆ ಸ್ವರ್ಗ ಎಂದು ಹೇಳಿದ್ದರು.
ನಾನು ಹೆಲಿಕಾಪ್ಟರ್ ಖರೀದಿಸ ಮಾಡಿದ್ದಕ್ಕೆ ಸಿದ್ದರಾಮಯ್ಯ ಅವರು ನನ್ನನ್ನು ವಿಲನ್ ಎಂಬಂತೆ ಬಿಂಬಿಸಿದ್ದರು. ಈಗ ಅವರ ಕಥೆ ಏನಾಗಿದೆ ಎಂದು ರಾಜ್ಯದ ಜನ ನೋಡುತ್ತಿದ್ದಾರೆ. ಕರ್ಮ ಯಾರನ್ನೂ ಬಿಡುವುದಿಲ್ಲ ಅನ್ನೋದಕ್ಕೆ ಸಿದ್ದರಾಮಯ್ಯ ಅವರ ಸದ್ಯದ ಪರಿಸ್ಥಿತಿ ಕೂಡ ಉತ್ತಮ ಉದಾಹರಣೆ. ಈಗ ನಾನು ನನ್ನೂರಿಗೆ ಬಂದಿದ್ದೇನೆ. ಸಿಎಂ ಸಿದ್ದರಾಮಯ್ಯ ಅವರೂ ತನ್ನ ಊರು ತೊರೆಯುವ ಸಮಸ್ಯೆ ಸದ್ಯದಲ್ಲೇ ಇದೆ ಎಂದು ಎಚ್ಚರಿಸಿದ್ದರು.












Click it and Unblock the Notifications