ಜಮೀರ್ ಅಹ್ಮದ್‌ರನ್ನು ಬಂಧಿಸಿ: ಶಾಸಕ ಸಿಮೆಂಟ್ ಮಂಜುನಾಥ್
ಬೆಂಗಳೂರು, ಆಗಸ್ಟ್ 20: ಘನತೆವೆತ್ತ ರಾಜ್ಯಪಾಲರಿಗೆ ಧಮ್ಕಿ ಹಾಕುವ ಕೆಲಸವನ್ನು ಸಚಿವ ಜಮೀರ್ ಅಹ್ಮದ್ ಅವರು ಮಾಡಿದ್ದಾರೆ ಎಂದು ಬಿಜೆಪಿ ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷ ಮತ್ತು ಶಾಸಕ ಸಿಮೆಂಟ್ ಮಂಜುನಾಥ್ ಅವರು ಆಕ್ಷೇಪಿಸಿದರು. ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಇಂದು ಭೇಟಿ ನೀಡಿ ದೂರು ನೀಡಿದ ಸಂದರ್ಭದಲ್ಲಿ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದರು. ಆಡಳಿತ ಪಕ್ಷವಾದ ಕಾಂಗ್ರೆಸ್ಸಿನವರು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಮಾಡಲು ಅವರಿಗೆ ನಾಚಿಕೆ ಆಗುವುದಿಲ್ಲವೇ ಎಂದು ಪ್ರಶ್ನಿಸಿದರು.
ರಾಜ್ಯಪಾಲರದು ಸಾಂವಿಧಾನಿಕ ಹುದ್ದೆ. 3 ಜನ ಕೊಟ್ಟ ದೂರಿನ ಹಿನ್ನೆಲೆಯಲ್ಲಿ ಕಾನೂನು ತಜ್ಞರ ಸಲಹೆ ಪಡೆದು ತನಿಖೆ ಮಾಡಲು ಅವರು ಅವಕಾಶ ಕೊಟ್ಟಿದ್ದಾರೆ. ರಾಜ್ಯಪಾಲರ ಭಿತ್ತಿಪತ್ರಕ್ಕೆ ಚಪ್ಪಲಿಯಲ್ಲಿ ಹೊಡೆದ ಇವರು ಸಂವಿಧಾನಕ್ಕೆ ಗೌರವ ಕೊಡುತ್ತಾರಾ ಎಂದು ಪ್ರಶ್ನಿಸಿದರು.

ಕಾನೂನು ಸುವ್ಯವಸ್ಥೆ ಹದಗೆಟ್ಟರೆ ರಾಜ್ಯಪಾಲರೇ ಕಾರಣ ಎಂದು ಜಮೀರ್ ಅಹ್ಮದ್ ಅವರು ಹೇಳಿದ್ದು, ಅವರ ವಿರುದ್ಧ ದೂರು ಕೊಡಲಾಗಿದೆ ಎಂದರು. ಜಮೀರ್ ಅಹ್ಮದ್ ಅವರನ್ನು ಬಂಧಿಸಲು ಕೋರಿದ್ದಾಗಿ ಹೇಳಿದರು. ಐವಾನ್ ಡಿಸೋಜಾ, ರಕ್ಷಿತ್ ಶಿವರಾಂ ವಿರುದ್ಧವೂ ದೂರು ನೀಡಿದ್ದಾಗಿ ಅವರು ತಿಳಿಸಿದರು.
ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷದ ನಾಯಕರ ಹೇಳಿಕೆಗಳನ್ನು ಗಮನಿಸಿದರೆ ಅವರು ಅರಾಜಕತೆಯನ್ನು ಸೃಷ್ಟಿಸುವ ಹುನ್ನಾರದಲ್ಲಿ ಇದ್ದಂತಿದೆ ಎಂದು ಆಕ್ಷೇಪಿಸಿದರು. ಕೇಂದ್ರದ ಮಾಜಿ ಸಚಿವ ಸಲ್ಮಾನ್ ಖುರ್ಷಿದ್ ಅವರು ಇದೇ ಮಾದರಿಯ ಹೇಳಿಕೆ ನೀಡಿದ್ದರು. ಈಗ ಕರ್ನಾಟಕದಲ್ಲಿ ಎಲ್ಲ ಕಾಂಗ್ರೆಸ್ ನಾಯಕರು ಇದೇ ಮಾತನ್ನು ಆಡುತ್ತಿದ್ದಾರೆ ಎಂದು ಟೀಕಿಸಿದರು.
ಹತಾಶವಾದ ಕಾಂಗ್ರೆಸ್ ಪಕ್ಷವು ಈ ರೀತಿಯ ಹೇಳಿಕೆಗಳನ್ನು ಕೊಡುತ್ತಿದೆ. ರಕ್ಷಿತ್ ಶಿವರಾಂ, ಐವಾನ್ ಡಿಸೋಜಾ ಅವರಿಬ್ಬರೂ ವಕೀಲರಾಗಿದ್ದಾರೆ. ಅವರೇನು ಜನಸಾಮಾನ್ಯರಲ್ಲ ಎಂದು ಗಮನಕ್ಕೆ ತಂದರು. ಅವರ ಮಾತುಗಳು ಜನಸಾಮಾನ್ಯರನ್ನು ದಂಗೆಗೆ ಪ್ರಚೋದಿಸುವಂತಿದೆ ಎಂದು ಆರೋಪಿಸಿದರು. ಮಂಗಳೂರಿನಲ್ಲಿ ಬಸ್ಸಿಗೆ ಕಲ್ಲೆಸೆದು ಜನಸಾಮಾನ್ಯರಾದ ಮಹಿಳೆಗೆ ಗಾಯವಾಗಿದೆ ಎಂದು ತಿಳಿಸಿದರು.
ರಾಜ್ಯ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಅವರು ಮಾತನಾಡಿ, ಕಾಂಗ್ರೆಸ್ಸಿನವರದು ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯೇ ಅಥವಾ ಸರಕಾರಿ ಪ್ರಾಯೋಜಿತ ಬೆದರಿಕೆಯೇ ಎಂದು ಪ್ರಶ್ನಿಸಿದರು. ಪ್ರಾಸಿಕ್ಯೂಶನ್‍ಗೆ ರಾಜ್ಯಪಾಲರು ಅನುಮತಿ ಕೊಟ್ಟದ್ದನ್ನೇ ಅಪರಾಧ ಎಂದು ಬಿಂಬಿಸಿ ಸರಕಾರವೇ ನೇತೃತ್ವ ವಹಿಸಿ ದಂಗೆ ಎಬ್ಬಿಸುವ ಮಾತು ದುರುದೃಷ್ಟಕರ ಮತ್ತು ಸಂವಿಧಾನವಿರೋಧಿ ಎಂದು ಆಕ್ಷೇಪಿಸಿದರು.
ಒಬ್ಬ ಎಂಎಲ್‍ಸಿ ಐವಾನ್ ಡಿಸೋಜ ಅವರು ಬಾಂಗ್ಲಾ ಮಾದರಿ ದಾಳಿ ಮಾಡಬೇಕಾಗುತ್ತದೆ ಎನ್ನುತ್ತಾರೆ. ಇದರರ್ಥ ಏನು? ಇನ್ನೊಬ್ಬರು ರಾಜ್ಯಪಾಲರು ಹಾಸಿಗೆ ದಿಂಬು ಕಟ್ಟಿಕೊಂಡು ಓಡಬೇಕಾಗುತ್ತದೆ ಎನ್ನುತ್ತಾರೆ. ರಾಜ್ಯಪಾಲರ ತೀರ್ಮಾನ ಸರಿಯೇ ತಪ್ಪೇ ಎಂದು ಪ್ರಶ್ನಿಸಲು ಸಂವಿಧಾನ ಅವಕಾಶ ಮಾಡಿಕೊಟ್ಟಿದೆ. ಪ್ರಶ್ನಿಸಲು ಅವಕಾಶವಿದೆ. ನ್ಯಾಯಾಲಯಕ್ಕೆ ಹೋದಾಗ ಅಲ್ಲಿ 29ರವರೆಗೆ ಅಂದರೆ 10 ದಿನ ತಡೆಯಾಜ್ಞೆ ನೀಡಿದ್ದಾರೆ. ಹಾಗಿದ್ದರೆ ಈ ದೂರುದಾರರು ನ್ಯಾಯಾಧೀಶರ ಮೇಲೆ ಸ್ಟ್ರೈಕ್ ಮಾಡಿದರೆ ಹೇಗಿದ್ದೀತು ಎಂದು ಕೇಳಿದರು.
ಒಂದು ವೇಳೆ ನ್ಯಾಯಾಧೀಶರು ಸಿದ್ದರಾಮಯ್ಯನವರ ವಿರುದ್ಧ ತೀರ್ಪು ಕೊಟ್ಟರೆ ನ್ಯಾಯಾಧೀಶರ ವಿರುದ್ಧ ಇವರು ದಂಗೆ ಏಳಿಸ್ತಾರಾ? ಅವರ ಪ್ರತಿಕೃತಿ ದಹನ ಮಾಡುವರೇ? ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಾರಾ? ಎಂದು ಸಿ.ಟಿ.ರವಿ ಅವರು ಪ್ರಶ್ನೆಗಳನ್ನು ಮುಂದಿಟ್ಟರು.
ರಾಜ್ಯಪಾಲರದು ಸಾಂವಿಧಾನಿಕ ಹುದ್ದೆ. ಸಂವಿಧಾನದತ್ತ ಅಧಿಕಾರ ಬಳಸಿ ಅವರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷ ತನಿಖೆಯನ್ನೇ ಯಾಕೆ ವಿರೋಧಿಸುತ್ತಿದೆ ಎಂದು ಕೇಳಿದರು. ರಾಜ್ಯಪಾಲರು ಸಿದ್ದರಾಮಯ್ಯನವರು ಅಪರಾಧಿ ಎಂದು ಹೇಳಿಲ್ಲ ಎಂದರು.
ಪ್ರತಿಭಟನೆ ವೇಳೆ ಕಲ್ಲು ತೂರಾಟ ಮಾಡಿದ್ದಾರೆ. ಟೈರ್‍ಗಳನ್ನೂ ಸುಟ್ಟಿದ್ದಾರೆ. ಇವರು ಕರ್ನಾಟಕವನ್ನು ಏನು ಮಾಡಲು ಹೊರಟಿದ್ದಾರೆ ಎಂದು ಕೇಳಿದರು. ಈ ದೇಶದಲ್ಲಿ ಎರಡು ಬಾರಿ ಸಿಎಂ ಆದ, ಅಗಾಧ ಅನುಭವವುಳ್ಳ ಸಿದ್ದರಾಮಯ್ಯನವರು ಸೇರಿ ಯಾರು ಕೂಡ ಸಂವಿಧಾನಕ್ಕಿಂತ ಮೇಲಲ್ಲ ಎಂದು ನೆನಪಿಸಿಕೊಟ್ಟರು. ಸಿದ್ದರಾಮಯ್ಯನವರು ಸಂವಿಧಾನಕ್ಕಿಂತ ಮೇಲೆ ಎಂದು ತಿಳಿದುಕೊಳ್ಳುವುದು ಅಹಂಕಾರದ ಭಾವನೆ ಎಂದು ತಿಳಿಸಿದರು.
ಐವಾನ್ ಡಿಸೋಜ ಸೇರಿದಂತೆ ಯಾರ್ಯಾರು ರಾಜ್ಯಪಾಲರಿಗೆ ಬೆದರಿಕೆ ಹಾಕಿದ್ದರೋ, ಯಾರ್ಯಾರು ದಾಳಿ ಮಾಡುವುದಾಗಿ ಬೆದರಿಸಿದ್ದಾರೋ, ಭಯೋತ್ಪಾದಕರ ಥರ ಮಾತನಾಡಿದ್ದಾರೋ ಅವರ ವಿರುದ್ಧ ಪೊಲೀಸ್ ಮಹಾ ನಿರ್ದೇಶಕರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಬೇಕಿತ್ತು. ಎಷ್ಟೋ ಪ್ರಕರಣಗಳಲ್ಲಿ ದೂರುದಾರರೇ ಇಲ್ಲದೆ, ನೀವು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ್ದೀರಿ. ಆದರೆ, ಇಲ್ಲಿ ಇನ್ನೂ ಯಾಕೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಲ್ಲ ಎಂದು ಕೇಳಿದರು.












Click it and Unblock the Notifications