ನೆರೆಯಿಂದಾದ ನಷ್ಟವೆಷ್ಟು? ಸರ್ಕಾರ ಕೊಟ್ಟಿರುವುದೆಷ್ಟು? ಕೊಡುವುದೆಷ್ಟು?
ಬೆಂಗಳೂರು, ಅಕ್ಟೋಬರ್ 11: ನೆರೆ ಸಂತ್ರಸ್ತರ ಕುರಿತು ಎರಡನೇ ದಿನವೂ ಚರ್ಚೆ ನಡೆದಿದ್ದು, ವಿಪಕ್ಷಗಳು ಕೇಳಿದ ಪ್ರಶ್ನೆಗಳಿಗೆ ಸರ್ಕಾರದ ಸಚಿವರುಗಳು ಉತ್ತರ ನೀಡಿದರು. ಕಂದಾಯ ಸಚಿವ ಆರ್.ಅಶೋಕ್ ಅವರು ಅಂಕಿ-ಅಂಶಗಳ ಸಮೇತ ಪರಿಹಾರದ ಲೆಕ್ಕವನ್ನು ಸದನಕ್ಕೆ ಒಪ್ಪಿಸಿದರು.
ರಾಜ್ಯ ಹಿಂದೆಂದೂ ಕಾಣದಿದ್ದಂತಹಾ ಪ್ರವಾಹ ಈ ಬಾರಿ ಕಂಡಿತು. ಕೇವಲ ಏಳೇ ದಿನದಲ್ಲಿ ರಾಜ್ಯದ ಬಹುತೇಕ ಅಣೆಕಟ್ಟೆಗಳು ತುಂಬಿಬಿಟ್ಟವು. 107 ವರ್ಷದಲ್ಲಿ ಈ ರೀತಿಯ ಪ್ರವಾಹವನ್ನು ರಾಜ್ಯ ಕಂಡಿರಲಿಲ್ಲ. ಕೃಷ್ಣಾ-ಭೀಮಾ ನದಿಯಿಂದ ಆರು ಲಕ್ಷ ಕ್ಯೂಸೆಕ್ ನೀರು ಒಳಹರಿವು ಬಂದಿತ್ತು ಎಂದು ಅಶೋಕ್ ಹೇಳಿದರು.
ಪ್ರವಾಹದಿಂದ ತೊಂದರೆಗೊಳಗಾಗಿದ್ದ ಏಳು ಲಕ್ಷ ಜನರನ್ನು ರಕ್ಷಿಸಲಾಯಿತು. ವಾಯುಸೇನೆ, ಎನ್‌ಡಿಆರ್ಎಫ್ ಸಿಬ್ಬಂದಿ, ರಾಜ್ಯ ಪೊಲೀಸರು, ಭೂಸೇನೆ ಸಿಬ್ಬಂದಿ ಒಟ್ಟಾಗಿ ಕೆಲಸ ಮಾಡಿ ಜನರನ್ನು ರಕ್ಷಿಸಿದರು. ಆದರೂ ಸಹ ಈ ಪ್ರವಾಹದಲ್ಲಿ 91 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ, 4 ಮಂದಿ ಕಾಣೆಯಾಗಿದ್ದಾರೆ ಎಂದು ಮಾಹಿತಿ ನೀಡಿದರು.
ಸರ್ಕಾರದ 15 ಮಂತ್ರಿಗಳು ನೆರೆ ಪೀಡಿತ ಪ್ರದೇಶ ಪ್ರವಾಸ ಮಾಡಿದರು. 1465 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿತ್ತು. ಕಾಳಜಿ ಕೇಂದ್ರಗಳಲ್ಲಿ ಗುಣಮಟ್ಟದ ಇಲ್ಲದ ಯಾವುದೇ ವಸ್ತು ಬಳಸಬೇಡಿ ಎಂದು ಸೂಚನೆ ನೀಡಿ, ಅದರಂತೆ ಶುಚಿಯಾದ ಆಹಾರ, ಮೂಲಸೌಲಭ್ಯ ದೊರಕುವಂತೆ ವ್ಯವಸ್ಥೆ ಮಾಡಲಾಗಿತ್ತು ಎಂದು ಅಶೋಕ್ ಹೇಳಿದರು.

10 ಸಾವಿರ ಶೀಘ್ರ ಪರಿಹಾರ ನೀಡಿದ್ದೇವೆ: ಅಶೋಕ್
ನೆರೆ ಬಂದ ಕೂಡಲೇ ಪ್ರವಾಹಕ್ಕೆ ತುತ್ತಾದ ಎಲ್ಲ ಕುಟುಂಬಕ್ಕೆ 10,000 ಹಣವನ್ನು ತಕ್ಷಣದಲ್ಲೇ ಕೊಟ್ಟಿದ್ದೇವೆ. ಇದರ ಜವಾಬ್ದಾರಿ ಜಿಲ್ಲಾಧಿಕಾರಿಗಳು, ತಹಶೀಲ್ದಾರ್ ಅವರಿಗೆ ಕೊಟ್ಟಿದ್ದೆವು ಅದರ ಪೂರ್ಣ ಮಾಹಿತಿಯನ್ನು ತರಿಸಿಕೊಂಡಿದ್ದೇವೆ. ಶೀಘ್ರ ಪರಿಹಾರವಾದ 10,000 ಹಣ ಕೊಡುವುದರಲ್ಲಿ ಯಾವುದೇ ಮೋಸವಾಗದಂತೆ ಎಚ್ಚರ ವಹಿಸಿದ್ದೇವೆ ಎಂದು ಅಶೋಕ್ ಹೇಳಿದರು.

2.56 ಲಕ್ಷ ಆಹಾರ ಕಿಟ್ ವಿತರಣೆ ಮಾಡಿದ್ದೇವೆ: ಅಶೋಕ್
ಅಕ್ಕಿ, ರಾಗಿ, ಜೋಳ, ಎಣ್ಣೆ, ಸಾಂಬಾರು ಪದಾರ್ಥ ಸೀಮೆ ಎಣ್ಣೆ ಇನ್ನೂ ಹಲವು ಅಡುಗೆ ಸಾಮಗ್ರಿಗಳಿದ್ದ ಆಹಾರ ಕಿಟ್ ಅನ್ನು 2.56 ಲಕ್ಷ ಜನರಿಗೆ ಹಂಚಿದ್ದೇವೆ. 3,400 ಜಾನುವಾರುಗಳು ಪ್ರಾಣ ಕಳೆದುಕೊಂಡಿದ್ದು ಒಂದಕ್ಕೆ 30 ಸಾವಿರದಂತೆ ಹಣ ನೀಡಿದ್ದೇವೆ ಎಂದು ಅಶೋಕ್ ಮಾಹಿತಿ ನೀಡಿದರು.

ಕೋಟ್ಯಂತರ ರೂಪಾಯಿ ಬೆಳೆ ಹಾನಿ
7.44 ಲಕ್ಷ ಹೆಕ್ಟೇರ್ ಕೃಷಿ ಬೆಳೆ ಹಾನಿ ಆಗಿದೆ, 1.49 ಲಕ್ಷ ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದೆ, 1.45 ಲಕ್ಷ ಹೆಕ್ಟೇರ್ ಕಾಫಿ ಬೆಳೆ ಹಾನಿ ಆಗಿದೆ, 254 ಹೆಕ್ಟೇರ್ ರೇಷ್ಮೆ ಬೆಳೆ ಹಾನಿಯಾಗಿದೆ, ಒಂದು ಲಕ್ಷ ರೂಪಾಯಿಗಳನ್ನು ಪ್ರಾಥಮಿಕ ಪರಿಹಾರವಾಗಿ ಈಗಾಗಲೇ 40-50% ಜನರ ಖಾತೆಗಳಿಗೆ ತಲುಪಿಸಿಯಾಗಿದೆ ಎಂದು ಅಶೋಕ್ ಹೇಳಿದರು.

ಸಾವಿರಾರು ಕಿ.ಮೀ ರಸ್ತೆ ಹಾನಿಯಾಗಿದೆ
4119 ಕಿ.ಮೀ ರಾಜ್ಯ ರಸ್ತೆ ಹಾನಿಯಾಗಿದೆ, ಗ್ರಾಮೀಣ ಭಾಗದ 14,920 ಕಿಮೀ, ನಗರ ಭಾಗದ 2770 ಕಿ.ಮೀ ರಸ್ತೆ ಹಾನಿಯಾಗಿದೆ. 2915 ಸೇತುವೆಗಳು ಹಾನಿ ಆಗಿದೆ. 1062 ಸರ್ಕಾರಿ ಕಟ್ಟಡಗಳು ಹಾನಿಯಾಗಿದೆ, 1500 ಕ್ಕೂ ಹೆಚ್ಚು ಕೆರೆಗಳಿಗೆ ಹಾನಿಯಾಗಿದೆ ಎಂದು ಅಶೋಕ್ ಹೇಳಿದರು. ಇದೇ ವರದಿಯನ್ನು ಕೇಂದ್ರಕ್ಕೆ ಕಳಿಸಿರುವುದಾಗಿ ಅವರು ಹೇಳಿದರು.

ಈ ವರೆಗೆ ಸರ್ಕಾರದಿಂದ 2949 ಕೋಟಿ ಬಿಡುಗಡೆ
ಕಂದಾಯ ಇಲಾಖೆಯಿಂದ 417.93 ಕೋಟಿ ಬಿಡುಗಡೆ, ವಿಪತ್ತು ನಿರ್ವಹಣೆ ಇಲಾಖೆಯಿಂದ 500 ಕೋಟಿ ಬಿಡುಗಡೆ, ವಸತಿಯಿಂದ 1000 ಕೋಟಿ, ದುರಸ್ಥಿಗೆ 231 ಕೋಟಿ, ಲೋಕೋಪಯೋಗಿ ಇಲಾಖೆಯಿಂದ ರಸ್ತೆ ರಿಪೇರಿಗೆ 500 ಕೋಟಿ, ಒಟ್ಟಾರೆ ಸರ್ಕಾರದಿಂದ 2949 ಕೋಟಿ ಹಣವನ್ನು ಈವರೆಗೆ ಬಿಡುಗಡೆ ಮಾಡಲಾಗಿದೆ ಎಂದು ಅಂಕಿ-ಅಂಶ ಮುಂದಿಟ್ಟರು.

ಸರ್ಕಾರದ ಖಜಾನೆ ಖಾಲಿಯಾಗಿಲ್ಲ: ಅಶೋಕ್
ಸರ್ಕಾರದ ಖಜಾನೆ ಖಾಲಿಯಾಗಿಲ್ಲ ನಮ್ಮಲ್ಲಿ ಹಣವಿದೆ. ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಖಾತೆಗಳಲ್ಲಿ ಒಟ್ಟು 1900 ಕೋಟಿಗಿಂತಲೂ ಹೆಚ್ಚು ಹಣವಿದ್ದು, ಈ ಹಣವನ್ನು ಖರ್ಚು ಮಾಡಿರೆಂದು ಹೇಳಿದ್ದೇವೆ ಎಂದು ಅಶೋಕ್ ಹೇಳಿದರು. ಕೇಂದ್ರ ಕೊಟ್ಟಿರುವ 1200 ಕೋಟಿ ಹಣಕ್ಕೆ ಹೆಚ್ಚಿನದನ್ನು ಸೇರಿಸಿ ಬೆಳೆ ನಷ್ಟ ಪರಿಹಾರವಾಗಿ ಕೊಡುವುದಾಗಿಯೂ ಪ್ರಕಟಿಸಿದರು.

ಮಳೆಯಿಂದ ಬಿದ್ದಿರುವ ಶಾಲಾ ಕೊಠಡಿಗಳೆಷ್ಟು?
ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಾತನಾಡಿ, 2791 ಶಾಲಾ ಕಟ್ಟಡಗಳು ಉರುಳಿವೆ, 6900 ಕೊಠಡಿಗಳು ತೀವ್ರ ಹಾನಿ, 3400 ಕೊಠಡಿಗಳು ಭಾಗಶಃ ಹಾನಿ, ಇದಕ್ಕೆ 500 ಕೋಟಿ ಬೇಕಾಗಿದೆ. ಹಣಕಾಸು ಸಚಿವಾಲಯಕ್ಕೆ ಈ ಬಗ್ಗೆ ಮನವಿ ಮಾಡಿದ್ದು ಹಣಕಾಸು ಬಿಡುಗಡೆ ಆಗಲಿದೆ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
-
Copra Price: ಇದೇ ಮೊಟ್ಟ ಮೊದಲ ಬಾರಿ ತಿಪಟೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ -
KSRTC ನೌಕರರ ಹಿಂಬಾಕಿ 1271 ರೂ ಬಿಡುಗಡೆ; ವೇತನ ಹೆಚ್ಚಳಕ್ಕೆ ಮುಹೂರ್ತ ಫಿಕ್ಸ್: ಏ.17ಕ್ಕೆ ನಿರ್ಣಾಯಕ ಸಭೆ -
ಕರ್ನಾಟಕ ದ್ವಿತೀಯ PUC ಫಲಿತಾಂಶಕ್ಕೆ ತಟ್ಟಿದ ಚುನಾವಣಾ ನೀತಿ ಸಂಹಿತೆ ಬಿಸಿ: ಏಪ್ರಿಲ್ 8ಕ್ಕೂ ರಿಸಲ್ಟ್ ಬರೋದು ಡೌಟ್? -
Viral: ಕಚೇರಿಗೆ ಬಂದ ಪೋಷಕರು, ಮ್ಯಾನೇಜರ್ ಬಳಿ ಮಗಳ ವರ್ತನೆ ಬಗ್ಗೆ ವಿಚಾರಣೆ: ಶಾಲಾ ದಿನಗಳನ್ನು ನೆನಪಿಸಿದ ವಿಡಿಯೋ -
Divorce Celebration: ಡಿವೋರ್ಸ್ ಪಡೆದ ಮಗಳಿಗೆ ಸಿಹಿ ತಿನ್ನಿಸಿ ಅದ್ದೂರಿ ಸ್ವಾಗತ: ತಂದೆಯ ಸಂಭ್ರಮಾಚರಣೆ ವಿಡಿಯೋ ವೈರಲ್ -
Gold Rate April 7: ಚಿನ್ನ - ಬೆಳ್ಳಿ ಬೆಲೆ ಸತತ 3ನೇ ದಿನವೂ ಇಳಿಕೆ; ಚಿನ್ನ ಪ್ರಿಯರಿಗೆ ಗುಡ್ನ್ಯೂಸ್ -
Viral Video: ಆರ್ಸಿಬಿ Vs ಸಿಎಸ್ಕೆ ಪಂದ್ಯ; ಕರ್ನಾಟಕ Vs ತಮಿಳುನಾಡು ಮಾಡಬೇಡಿ ಎಂದ ಸಿಎಸ್ಕೆ ಫ್ಯಾನ್ -
Viral Video: ನಾಳೆಯೇ ನಿಮ್ಮ ಕೆಲಸ ಹೋದರೆ ಏನು ಮಾಡುವಿರಿ? ಮಾಜಿ ಗೂಗಲ್ ಉದ್ಯೋಗಿಯ ಪ್ರಶ್ನೆಗೆ ದಂಗಾದ ನೆಟ್ಟಿಗರು -
Karnataka Rain Updates: ಚಂಡಮಾರುತ ಪ್ರಸರಣ ಪ್ರಭಾವ: ಬೆಂಗಳೂರು ಸೇರಿ ಕರ್ನಾಟಕದ 8 ಜಿಲ್ಲೆಗಳಲ್ಲಿ 3ದಿನ ಮಳೆ -
Horoscope April 8: ಕೆಲವರಿಗೆ ಯಶಸ್ಸು, ಕೆಲವರಿಗೆ ಜಾಗ್ರತೆ ಸೂಚಿಸುವ ದಿನ ಭವಿಷ್ಯ -
April 7 Horoscope: ಸ್ಪರ್ಧೆಯಲ್ಲಿ ಜಯ ಮತ್ತು ಹೊಸ ಉದ್ಯೋಗ ಅವಕಾಶಗಳು -
Job Resignation: ಇರೋ ಕೆಲಸಕ್ಕೆ ರಾಜೀನಾಮೆ ಕೊಡುವ ಮೊದಲು ಕೇಳಿಕೊಳ್ಳಬೇಕಾದ 17 ಪ್ರಶ್ನೆಗಳಿವು












Click it and Unblock the Notifications