Tax Evasion: ತೆರಿಗೆ ಕಳ್ಳತನ ಮಾಡದಿರಿ: ಸಚಿವರ ಕಿವಿಮಾತು!
ಬೆಂಗಳೂರು: ಯಾವುದೇ ಸರ್ಕಾರ ನಡೆಯಬೇಕಾದರೂ ತೆರಿಗೆದಾರರ ನೀಯತ್ತು ತುಂಬಾನೆ ಮುಖ್ಯ. ಹೀಗಾಗಿಯೇ ತೆರಿಗೆ ನಿಯಮಗಳನ್ನ ಸರ್ಕಾರ ಕೂಡ ಗಂಭೀರವಾಗಿ ಪರಿಗಣಿಸುತ್ತೆ. ಆದರೂ ತೆರಿಗೆ ಉಳಿಸಲು ಅಡ್ಡ ದಾರಿಗಳನ್ನು ಹುಡುಕುವವರ ಸಂಖ್ಯೆ ತುಸು ಹೆಚ್ಚಾಗಿದೆ. ಇದೇ ಕಾರಣಕ್ಕೆ ಸಚಿವ ಕೃಷ್ಣ ಬೈರೇಗೌಡ ಕಿವಿಮಾತೊಂದನ್ನ ಹೇಳಿದ್ದಾರೆ.
ಅಂದಹಾಗೆ ತೆರಿಗೆ ಕಳ್ಳತನ ಮಾಡದೆ ಜನರಿಗೆ ಮತ್ತು ಸರ್ಕಾರಕ್ಕೆ ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ಎಂದು ತೆರಿಗೆ ಸಲಹೆಗಾರರಿಗೆ ಸಚಿವ ಕೃಷ್ಣ ಬೈರೇಗೌಡ ಕಿವಿಮಾತು ಹೇಳಿದ್ದಾರೆ. ರಾಜ್ಯ ತೆರಿಗೆ ಸಲಹೆಗಾರರ ಸಂಘವು ಸುವರ್ಣ ಮಹೋತ್ಸವ ಆಚರಣೆಯ ಅಂಗವಾಗಿ ಆಗಸ್ಟ್ 4, 5 ಮತ್ತು 6 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಷ್ಟ್ರೀಯ ತೆರಿಗೆ ಸಮ್ಮೇಳನ ಹಾಗೂ ತೆರಿಗೆ ವೃತ್ತಿಪರರ ದಿನಾಚರಣೆ ಹಮ್ಮಿಕೊಂಡಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಕೃಷ್ಣ ಬೈರೇಗೌಡ ಕೂಡ ಹಾಜರಿದ್ದರು.

ಜನರಿಗೆ & ಸರ್ಕಾರಕ್ಕೆ ಪ್ರಮಾಣಿಕರಾಗಿ ಇರಬೇಕು
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಚಿವ ಕೃಷ್ಣ ಬೈರೇಗೌಡ ಅವರು, ಜನ ತಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು? ಮತ್ತು ತೆರಿಗೆಯನ್ನು ಎಲ್ಲೆಲ್ಲಿ ಉಳಿಸಬೇಕು ಎಂದು ಸಲಹೆ ನೀಡುವುದು ಉತ್ತಮ ಕೆಲಸವೇ. ಆದರೆ ತೆರಿಗೆ ಕಳ್ಳತನ ಅಕ್ಷಮ್ಯ ಎಂದು ಸಚಿವರು ಈ ವೇಳೆ ಕಿವಿಮಾತು ಹೇಳಿದ್ರು. ಯಾವುದೇ ಸರ್ಕಾರ ನಡೆಯಲು ತೆರಿಗೆ ಅತೀ ಅತ್ಯವಶ್ಯಕ ಎಂದು ಇದೇ ಸಂದರ್ಭದಲ್ಲಿ ಸಚಿವರು ಪ್ರತಿಪಾದಿಸಿದರು.
ತೆರಿಗೆ ಇಲ್ಲದೆ ಜನರಿಗೆ ಉತ್ತಮ ಆಡಳಿತ ನೀಡುವುದು ಸಾಧ್ಯವಿಲ್ಲ. ಆದರೆ ಜನರಿಗೆ ತೆರಿಗೆಯನ್ನ ಉಳಿಸುತ್ತೇವೆ ಎಂದು ಹಲವು ತೆರಿಗೆ ಸಲಹೆಗಾರರು ತೆರಿಗೆ ಕಳ್ಳತನ ನಡೆಸುತ್ತಿದ್ದಾರೆ. ಕಾನೂನು ರೀತಿಯೂ ಈ ಕೃತ್ಯ ಅಪರಾಧವಾಗಿದ್ದು ತೆರಿಗೆ ಕಳ್ಳತನ ನಿಲ್ಲಬೇಕು. ಜನಕ್ಕೆ ಮತ್ತು ಸರ್ಕಾರಕ್ಕೆ ಪ್ರಮಾಣಿಕರಾಗಿ ಇರಬೇಕು ಎಂದು ರಾಷ್ಟ್ರೀಯ ತೆರಿಗೆ ಸಮ್ಮೇಳನದಲ್ಲಿ ಸಚಿವ ಕೃಷ್ಣ ಬೈರೇಗೌಡ ಸಲಹೆ ನೀಡಿದರು.

ಒತ್ತುವರಿ ತೆರವಿನ ಬಗ್ಗೆ ಸಭೆ
ಇನ್ನು ರಾಜ್ಯದಲ್ಲಿ ಸರ್ಕಾರಿ ಜಮೀನು ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಳಿಸಲು ಸೋಮವಾರ ಉನ್ನತಮಟ್ಟದ ಸಭೆ ನಡೆಸಲಾಗುವುದು. ಜಿಲ್ಲಾಧಿಕಾರಿಗಳಿಗೆ ಪ್ರತಿ ತಿಂಗಳಿಗೂ ಗುರಿ ನಿಗದಿಪಡಿಸಲಾಗುವುದು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒತ್ತುವರಿ ಮಾಡಿಕೊಂಡವರಿಗೆ ನಡುಕ ಶುರುವಾಗಿದೆ. ಸುದ್ದಿಗಾರರ ಜತೆ ಮಾತನಾಡಿ ಈ ವಿಚಾರ ತಿಳಿಸಿದ ಸಚಿವರು, ಸರ್ಕಾರಿ ಜಮೀನು ಒತ್ತುವರಿ ಸಂಬಂಧ ಎ.ಟಿ. ರಾಮಸ್ವಾಮಿ ನೇತೃತ್ವದ ಜಂಟಿ ಸದನ ಸಮಿತಿ ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಬಾಲಸುಬ್ರಮಣಿಯನ್ ನೇತೃತ್ವದ ಕಾರ್ಯಪಡೆ ಸಲ್ಲಿಸಿದ ವರದಿಗಳು ಸರ್ಕಾರದ ಬಳಿ ಇವೆ. ಅವುಗಳ ಆಧಾರದಲ್ಲಿ ತೆರವು ಕಾರ್ಯಾಚರಣೆ ಬೇಗ ನಡೆಯಲಿದೆ ಎಂದಿದ್ದಾರೆ.
ಜಿಲ್ಲೆ ಹಾಗೂ ವಿಭಾಗೀಯ ಮಟ್ಟದಲ್ಲಿ ಸಭೆಗಳನ್ನು ನಡೆಸಿ, ಸರ್ಕಾರಿ ಜಮೀನುಗಳ ಒತ್ತುವರಿ ತೆರವು ಕಾರ್ಯಾಚರಣೆ ಪ್ರಗತಿ ಪರಿಶೀಲನೆ ನಡೆಸಲಾಗುವುದು. ವಶಕ್ಕೆ ಪಡೆದ ಜಮೀನು ರಕ್ಷಣೆ ಹೊಣೆಗಾರಿಕೆಯನ್ನು ಅಯಾ ವೃತ್ತದ ಕಂದಾಯ ನಿರೀಕ್ಷಕರಿಗೆ ವಹಿಸಲಾಗುತ್ತೆ. ಆ ಜಮೀನು ಮತ್ತೆ ಒತ್ತುವರಿಯಾದರೆ ಕಂದಾಯ ನಿರೀಕ್ಷಕರನ್ನೇ ಹೊಣೆ ಮಾಡಲಾಗುವುದು ಎಂದಿದ್ದಾರೆ. ಈ ಮೂಲಕ ಒತ್ತುವರಿ ತೆರವು ವಿಚಾರದಲ್ಲಿ ಖಡಕ್ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.
ಹಾಗೆ ಕೊಡಗು, ಹಾಸನ, ಚಿಕ್ಕಮಗಳೂರು ಸೇರಿ ಮಲೆನಾಡಿನ ಜಿಲ್ಲೆಗಳಲ್ಲಿ ಕಾಫಿ ಬೆಳೆಗಾರರ ಸ್ವಾಧೀನದಲ್ಲಿರುವ ಸರ್ಕಾರಿ ಜಮೀನನ್ನ ಅವರಿಗೆ ದೀರ್ಘಾವಧಿಗೆ ಗುತ್ತಿಗೆ ನೀಡುವ ಹಿಂದಿನ ಸರ್ಕಾರದ ನಿರ್ಧಾರವನ್ನು ತಮ್ಮ ಸರ್ಕಾರ ಜಾರಿಗೆ ತರಲಿದೆ. ಈ ವಿಚಾರದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಕೃಷ್ಣ ಬೈರೇಗೌಡ ತಿಳಿಸಿದ್ದಾರೆ. ಈ ಮೂಲಕ ಒತ್ತುವರಿದಾರರಿಗೆ ಖಡಕ್ ಎಚ್ಚರಿಕೆ ನೀಡಲಾಗಿದ್ದು ರಾಜ್ಯದಲ್ಲಿ ಮತ್ತೆ ಒತ್ತುವರಿ ತೆರವು ಸದ್ದು ಮಾಡುವುದು ಬಹುತೇಕ ಪಕ್ಕಾ.












Click it and Unblock the Notifications