ರಾಜ್ಯ ಸರ್ಕಾರದ ಯುಗಾದಿ ಗಿಫ್ಟ್‌ಗೆ ಭಾರೀ ವಿರೋಧ!
ಕರ್ನಾಟಕ ಸರ್ಕಾರವು ಯುಗಾದಿ ಸಂಭ್ರಮದ ಸಮಯದಲ್ಲಿ ನೀಡಿರುವ ಗಿಫ್ಟ್‌ಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಹೌದು ಕರ್ನಾಟಕ ಸರ್ಕಾರವು ಈ ಬಾರಿ ಬೆಲೆ ಏರಿಕೆಯ ಗಿಫ್ಟ್ ನೀಡಿದ್ದು. ಇದಕ್ಕೆ ಕನ್ನಡಿಗರು ಕೆಂಡವಾಗಿದ್ದಾರೆ. ಯುಗಾದಿ ಸಂಭ್ರಮದಲ್ಲಿದ್ದ ಕನ್ನಡಿಗರಿಗೆ ಬೆಲೆ ಏರಿಕೆಯ ಭರ್ಜರಿ ಶಾಕ್ ನೀಡಲಾಗಿದೆ. ಅದರಲ್ಲಿ ನಂದಿನಿ ಹಾಲಿನ ದರ ಹಾಗೂ ವಿದ್ಯುತ್ ಶುಲ್ಕ ಪ್ರಮುಖವಾಗಿವೆ. ಕರ್ನಾಟಕದಲ್ಲಿ ಯುಗಾದಿ ಸಮಯದಲ್ಲೇ ಬೆಲೆ ಏರಿಕೆಯ ಪರ್ವ ಶುರುವಾಗಿದ್ದು ಏಪ್ರಿಲ್ 1ರಿಂದ ಜನ ಸಾಮಾನ್ಯರ ಜೇಬಿಗೆ ಇನ್ನಷ್ಟು ಕತ್ತರಿ ಬೀಳಲಿದೆ.
ಕರ್ನಾಟಕದಲ್ಲಿ ನಂದಿನಿ ಹಾಲಿನ ಬೆಲೆಯನ್ನು ಕಳೆದ ಎರಡು ವರ್ಷದ ಅವಧಿಯಲ್ಲಿ ಮೂರು ಬಾರಿ ಏರಿಕೆ ಮಾಡಲಾಗಿದೆ. ರಾಜ್ಯ ಸರ್ಕಾರದ ಈ ನಡೆಗೆ ಕನ್ನಡಿಗರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಕರ್ನಾಟಕ ಸರ್ಕಾರವು ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ ಎಂದಿದ್ದಾರೆ.

ಕರ್ನಾಟಕ ಸರ್ಕಾರದ ಈ ಬೆಲೆ ಏರಿಕೆಯ ನಿರ್ಧಾರಕ್ಕೆ ವಿರೋಧ ಪಕ್ಷಗಳಾದ ಜೆಡಿಎಸ್ ಹಾಗೂ ಬಿಜೆಪಿ ಸಹ ತೀವ್ರ ವಿರೋಧ ವ್ಯಕ್ತಪಡಿಸಿವೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಟ್ವೀಟ್ ಮಾಡಿರುವ ಜೆಡಿಎಸ್, ಅಭಿವೃದ್ಧಿ ಶೂನ್ಯ ಕರ್ನಾಟಕ ಕಾಂಗ್ರೆಸ್ ಸರ್ಕಾರವು ಬೆಲೆ ಏರಿಸುವುದನ್ನೇ ನಿತ್ಯ ಕಾಯಕವಾಗಿಸಿಕೊಂಡು ಜನಸಾಮಾನ್ಯರನ್ನು ದಿನೇ ದಿನೇ ಸುಲಿಗೆ ಮಾಡುತ್ತಿದೆ ಎಂದು ದೂರಿದೆ.
ನಂದಿನ ಹಾಲಿನ ದರ ₹4 ಹೆಚ್ಚಿಸಿ ರಾಜ್ಯದ ಜನರಿಗೆ ಯುಗಾದಿಗೆ ಉಡುಗೊರೆ ನೀಡಿದೆ. 2 ವರ್ಷದಲ್ಲಿ 3 ಬಾರಿ ಹಾಲಿನ ದರ ಏರಿಕೆ; ಲೀ. 9 ಹೆಚ್ಚಳ ಮಾಡಲಾಗಿದೆ ಎಂದು ವಿವರಿಸಿದೆ.
* 2023 ಆಗಸ್ಟ್‌ನಲ್ಲಿ ಹಾಲಿನ ದರ ಲೀ. ₹3 ಏರಿಕೆ
* 2024 ಜೂನ್‌ನಲ್ಲಿ ಹಾಲಿನ ದರ ಲೀ. ₹2.10 ಹೆಚ್ಚಳ
* 2025 ಮಾರ್ಚ್‌ನಲ್ಲಿ ಹಾಲಿನ ದರ ಲೀ. 4 ಏರಿಕೆ ಮಾಡಲಾಗಿದೆ.
ವಚನ ಭ್ರಷ್ಟ ಕಾಂಗ್ರೆಸ್ ಸರ್ಕಾರ, ಹಾಲು ಉತ್ಪಾದಕರಿಗೆ ಹಾಲಿನ ದರ ಕಡಿತಗೊಳಿಸಿದೆ. ಜೊತೆಗೆ ಹಾಲಿನ ಪ್ರೋತ್ಸಾಹ ಧನವನ್ನು ರೈತರಿಗೆ ಸರಿಯಾಗಿ ಕೊಡುತ್ತಿಲ್ಲ ಎಂದು ದೂರಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಕಳೆದ 2 ವರ್ಷದಲ್ಲಿ 3ನೇ ಬಾರಿಗೆ ಹಾಲಿನ ಬೆಲೆ ಏರಿಸಿ ಸಂಗ್ರಹಿಸುತ್ತಿರುವ ಸಾವಿರಾರು ಕೋಟಿ ಹಣ ಎಲ್ಲಿಗೆ ಹೋಗುತ್ತಿದೆ, ಯಾರ ಜೇಬು ಸೇರುತ್ತಿದೆ ಎಂದು ಪ್ರಶ್ನೆ ಮಾಡಿದೆ.
ಬಿಜೆಪಿ ಸಹ ಇದಕ್ಕೆ ಕಿಡಿಕಾರಿದೆ. ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಯಗಾದಿ ಹಬ್ಬಕ್ಕೆ ಕನ್ನಡಿಗರಿಗೆ ಬೇವು ನೀಡಿದೆ ಭ್ರಷ್ಟ ಕಾಂಗ್ರೆಸ್ ಸರ್ಕಾರ ಎಂದು ವ್ಯಂಗ್ಯವಾಡಿದೆ. ಪ್ರತಿ ಲೀಟರ್ ಹಾಲಿನ ಮೇಲೆ ಬರೋಬ್ಬರಿ ₹4 ಏರಿಸಿ, ತಾವೊಬ್ಬ ಬೆಲೆಯೇರಿಕೆಯ ಬಾದ್ ಷಾ ಎಂಬುದನ್ನು ನಿರೂಪಿಸಿದ್ದಾರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದು ಟ್ವೀಟ್ ಮಾಡಲಾಗಿದೆ.
ಹಾಲಿನ ದರ ಏರಿಸಿದ್ದು ರೈತರಿಗೆ ನೀಡಲು ಎಂಬ ಸುಳ್ಳಿನ ಪುಂಗಿಯನ್ನು ಮತ್ತೊಮ್ಮೆ ಊದಬೇಡಿ. ನಂದಿನಿ ಹಾಲಿನ ದರವನ್ನು ಪದೇ ಪದೇ ಏರಿಸುತ್ತಿರುವುದು ಖಾಸಗಿ ಹಾಲು ಉತ್ಪಾದಕರಿಗೆ ಲಾಭ ಮಾಡಿಕೊಡಲು ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ ಎಂದು ಹೇಳಲಾಗಿದೆ.
ಇನ್ನು ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ರಾಜ್ಯದ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆಯನ್ನು ಕಾಂಗ್ರೆಸ್ ಸರ್ಕಾರ ಮುಂದುವರೆಸಿದೆ ಎಂದು ಹೇಳಿದ್ದಾರೆ.
ಪಂಚ ಭಾಗ್ಯಗಳನ್ನು ನಿರ್ವಹಿಸಲು ಹೆಣಗಾಡುತ್ತಿರುವ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನಸಾಮಾನ್ಯರಿಗೆ ಬೆಲೆ ಏರಿಕೆಯ ದೌರ್ಭಾಗ್ಯವನ್ನು ನಿರಂತರ ಹೇರುತ್ತಲೇ ಬರುತ್ತಿದೆ. ಕುಡಿಯುವ ನೀರು, ವಿದ್ಯುತ್ ಬಿಲ್, ಸಾರಿಗೆ, ಅಗತ್ಯ ವಸ್ತುಗಳು ಹೀಗೆ ಒಂದರ ಮೇಲೊಂದರಂತೆ ಬೆಲೆ ಏರಿಕೆಯ ಬಿಸಿಯನ್ನು ಜನ ಅನುಭವಿಸುತ್ತಿರುವ ಹೊತ್ತಿನಲ್ಲೇ, ಈ ಸರ್ಕಾರ ಅಧಿಕಾರಕ್ಕೆ ಬಂದಮೇಲೆ 2 ನೇ ಬಾರಿ ಹಾಲಿನ ದರ ಏರಿಕೆ ಮಾಡುವ ಮೂಲಕ ಬೆಲೆ ಏರಿಕೆ ಬರೆ ಎಳೆಯುವಲ್ಲಿ ಪೈಪೋಟಿಗೆ ಬಿದ್ದಂತೆ ಕಾಣುತ್ತಿದೆ. ಸದ್ಯ ಹಾಲಿನ ದರ 4 ರೂ ಹೆಚ್ಚಳ ಮಾಡಿ ಜನಸಾಮಾನ್ಯರ ಜೇಬಿಗೆ ಕತ್ತರಿ ಪ್ರಯೋಗ ಮಾಡುತ್ತಿರುವ ನಿರ್ಧಾರ ಹಗಲು ದರೋಡೆಯಲ್ಲದೇ ಬೇರೇನೂ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೈನುಗಾರಿಕೆ ಅವಲಂಬಿಸಿರುವ ರೈತ ಸಮುದಾಯಕ್ಕೆ ಹೆಚ್ಚಿನ ದರ ಹಾಗೂ ಪ್ರೋತ್ಸಾಹ ಧನವನ್ನು ಕೊಡುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕೇ ಹೊರತು, ಈ ಕಾರಣವನ್ನು ಮುಂದಿಟ್ಟುಕೊಂಡು ಜನರ ಮೇಲೆ ಬೆಲೆ ಏರಿಕೆಯ ಬಿಸಿ ತಟ್ಟಿಸಲು ಹೊರಟಿರುವುದು 'ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವ ನಡೆಯಾಗುತ್ತದೆ'. ರೈತರನ್ನೂ ಉತ್ತೇಜಿಸಬೇಕು ಜನಸಾಮಾನ್ಯರ ಹಿತಾಸಕ್ತಿಯನ್ನೂ ಕಾಪಾಡಬೇಕು, ಇದು ಸಮರ್ಥ ಜನಪರ ಹಾಗೂ ಯೋಗ್ಯ ಸರ್ಕಾರದಿಂದ ಮಾತ್ರ ಸಾಧ್ಯವಾಗುತ್ತದೆ. ಇಂತಹ ಯಾವ ಅರ್ಹತೆಗಳೂ ಕಾಂಗ್ರೆಸ್ ಸರ್ಕಾರಕ್ಕೆ ಇಲ್ಲವೇ ಇಲ್ಲ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯನ್ನು ಕರ್ನಾಟಕ ಬಿಜೆಪಿ ನಿರಂತರ ಪ್ರತಿಭಟಿಸುತ್ತಲೇ ಬರುತ್ತಿದ್ದರೂ ಈ ಸರ್ಕಾರ ಜನಾಕ್ರೋಶಕ್ಕೆ ಕ್ಯಾರೇ ಎನ್ನುತ್ತಿಲ್ಲ. ಅಧಿಕಾರಕ್ಕಾಗಿ ಕಚ್ಚಾಡುವುದನ್ನು ಬಿಟ್ಟರೆ ಕಾಂಗ್ರೆಸ್ ಸರ್ಕಾರದ ಅಂಗಳದಲ್ಲಿ ಏನೇನು ಈಗ ಉಳಿದಿಲ್ಲ. ಬರಿದಾಗಿರುವ ಬೊಕ್ಕಸ ತುಂಬಿಸಿಕೊಳ್ಳಲು ಬೆಲೆ ಏರಿಸುವುದನ್ನು ಬಿಟ್ಟರೆ ಅನ್ಯಮಾರ್ಗವಿಲ್ಲ ಎಂಬ ಪರಿಸ್ಥಿತಿ ಇರುವುದನ್ನು ಸರ್ಕಾರ ಅನಾವರಣಗೊಳಿಸಿಕೊಳ್ಳುತ್ತಿದೆ. ಪ್ರತಿಯೊಂದು ಕುಟುಂಬವೂ ಬಳಸುವ ಹಾಲಿನ ದರವನ್ನು ಏರಿಸಲು ಸಂಪುಟ ನಿರ್ಧರಿಸಿರುವ ಸರ್ಕಾರ ಈ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.
ಸ್ಮಾರ್ಟ್ ಮೀಟರ್‌ಗೂ ವಿರೋಧ
ಇನ್ನು ಕರ್ನಾಟಕದಲ್ಲಿ ಸ್ಮಾರ್ಟ್ ಮೀಟರ್ ಅಳವಡಿಕೆಗೂ ವಿರೋಧ ವ್ಯಕ್ತವಾಗಿದೆ. ಈ ವಿಚಾರವಾಗಿಯೂ ವಿರೋಧ ಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪ್ರತಿಭಟನೆ ನಡೆಸಿವೆ. ಸ್ಮಾರ್ಟ್ ಮೀಟರ್ ಅಳವಡಿಕೆಯಲ್ಲಿ ಭಾರೀ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.
-
Lockdown: ಭಾರತದಲ್ಲಿ ಲಾಕ್ಡೌನ್ ಇಲ್ಲ: ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ -
ಬೆಂಗಳೂರಿನ ಪಾನಿಪುರಿ ವ್ಯಾಪಾರಿಯ ತಿಂಗಳ ಸಂಪಾದನೆ ಫುಲ್ Viral: ದಿನಕ್ಕೆ 3 ಸಾವಿರ ರೂ. ಗಳಿಕೆ -
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು












Click it and Unblock the Notifications