ಮೆಗ್ಗಾನ್ ಘಟನೆ ನಂತರವೂ ಸುಮ್ಮನಿರುವ ಸರಕಾರಕ್ಕೆ ನಾಚಿಕೆ ಇದೆಯಾ?
ಆಸ್ಪತ್ರೆಗಳು ದೇವಸ್ಥಾನದಂತೆ ನೋಡಲಾಗುತ್ತದೆ. ಇನ್ನು ಅಲ್ಲಿನ ವೈದ್ಯರನ್ನು ದೇವರ ಹಾಗೆ ಕಾಣಲಾಗುತ್ತದೆ. ಇನ್ನು ಆಸ್ಪತ್ರೆಯ ಸೌಕರ್ಯವನ್ನು ಪುಕ್ಕಟೆ ಒದಗಿಸುತ್ತೀವಿ ಎನ್ನುವ ಸರಕಾರಗಳನ್ನು ಜನರು ಹೇಗೆ ಕಾಣಬಹುದು? ಶಿವಮೊಗ್ಗದ ಮೆಗ್ಗಾನ್ ಸರಕಾರಿ ಆಸ್ಪತ್ರೆಯ ಈ ಘಟನೆ ನೋಡಿದರೆ ಪುಕ್ಕಟೆ ಎಂಬ ಕಾರಣಕ್ಕೆ ಇಂಥ ನಿರ್ಲಕ್ಷ್ಯವಾ ಎಂಬ ಪ್ರಶ್ನೆ ಮೂಡುತ್ತದೆ.
ಎಕ್ಸ್ ರೇಗಾಗಿ ಎಪ್ಪತ್ತು ವರ್ಷದ ವ್ಯಕ್ತಿಯನ್ನು ಹಾಗೆ ಮಹಿಳೆಯೊಬ್ಬರು ದರದರ ಎಂದು ಎಳೆದುಕೊಂಡು ಹೋಗುವುದನ್ನು ನೋಡ್ತಿದ್ದರೆ, ರಕ್ತ ಕುದ್ದು ಹೋಗುತ್ತದೆ. ವಿಧಾನಸಭೆ ಅಧಿವೇಶನದಲ್ಲಿ, ಮಾಧ್ಯಮಗಳ ಎದುರು ರೋಷಾವೇಶದಿಂದ ಮಾತನಾಡುವ ಆರೋಗ್ಯ ಸಚಿವ ರಮೇಶ್ ಕುಮಾರ್ ಅವರ ಬದ್ಧತೆ ಬಗ್ಗೆಯೇ ಪ್ರಶ್ನೆ ಮೂಡುತ್ತದೆ.[ಶಿವಮೊಗ್ಗದಲ್ಲಿ ಎಕ್ಸ್ ರೇ ಕೋಣೆವರೆಗೆ ಪತಿಯ ಕಾಲು ಹಿಡಿದು ಎಳೆದೊಯ್ದ ಪತ್ನಿ]

ಸ್ವಾಮಿ, ಇದು ನೀವು ಸಾಕುತ್ತಿರುವ ಸರಕಾರಿ ಆಸ್ಪತ್ರೆ. ಇಲ್ಲಿಗೆ ಬರುವ ರೋಗಿಗಳನ್ನು ನಿಮ್ಮ ಮೂಗಿನಡಿ ಕೆಲಸ ಮಾಡುವವರು ನೋಡಿಕೊಳ್ಳುವ ರೀತಿ ಇದು. ಸರಕಾರದ ಆಸ್ಪತ್ರೆಯಲ್ಲಿ ಸೌಲಭ್ಯ ಕೊಡುವುದಕ್ಕೆ ಆಗಲಿಲ್ಲ ಅಂದರೆ ಸುಮ್ಮನೆ ಖಾಸಗಿಯವರಿಗೆ ಒಪ್ಪಿಸಿಬಿಡಿ. ಆಂಧ್ರದಲ್ಲಿ ಹಾಗೇ ಮಾಡಿದ್ದಾರಂತೆ.
ಮೊನ್ನೆ ಮೊನ್ನೆ ಕೋಲಾರದ ಜಿಲ್ಲಾ ಆಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಛಾವಣಿ ಕುಸಿದು ಐದು ದಿನದ ಮಗು ಮತ್ತು ಅದರ ತಾಯಿಗೆ ಗಾಯ ಆಯಿತು. ಇದು ಆರೋಗ್ಯ ಸಚಿವರ ತವರು ಜಿಲ್ಲೆಯಲ್ಲಿನ ಸ್ಥಿತಿ. ದೊರೆಗಳೇ ನಿಮ್ಮ ಆಳ್ವಿಕೆಯಲ್ಲಿ ಸಾವಿಗಿಂತ ಬದುಕೇ ಕ್ರೂರವಾಗುತ್ತಿದೆ.[ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಛಾವಣಿ ಕುಸಿದು ಮೂರು ದಿನದ ಮಗುವಿಗೆ ಗಾಯ]

ತಿಂಗಳ ಹಿಂದೆ ಅನೇಕಲ್ ನ ಆಸ್ಪತ್ರೆಯಲ್ಲಿ ಒಡಿಶಾದಿಂದ ಬಂದ ಕಾರ್ಮಿಕನೊಬ್ಬನ ಮಗು ಸಾವನ್ನಪ್ಪಿತು. ಆ ಮಗುವಿನ ದೇಹವನ್ನು ಸ್ನೇಹಿತರೊಬ್ಬರ ಬೈಕ್ ತರಿಸಿ, ತೆಗೆದುಕೊಂಡು ಹೋಗಬೇಕಾಯಿತು. ಎಷ್ಟು ಕೆಟ್ಟ ನೆನಪುಗಳನ್ನು ಹೆಕ್ಕಿ ನಿಮ್ಮ ಮುಂದೆ ತೆಗೆದಿಡುವುದು? ಹತ್ತು-ಹದಿನೈದು ದಿನದ ಹಿಂದೆ ಮೈಸೂರಿನ ಪ್ರಾಥಮಿಕ ಕೇಂದ್ರದ ಸಿಬ್ಬಂದಿ ಮಗಳ ಮದುವೆಗೆ ಅಲ್ಲಿನ ನಗು-ಮಗು ಆಂಬ್ಯುಲೆನ್ಸ್ ನ ರೂಟ್ ಬಸ್ಸಿನ ರೀತಿ ಬಳಸಿದ್ದಾರೆ.
ಗಂಟೆಗಟ್ಟಲೆ ಅಲ್ಲಿ ರೋಗಿಗಳನ್ನು ನೋಡಿಕೊಳ್ಳುವುದಕ್ಕೂ ಜನ ಗತಿಯಿರಲಿಲ್ಲ. ಈ ಹಿಂದೆ ಕೋಲಾರದಲ್ಲಿ ಆರೋಗ್ಯ ಸಚಿವರೇ ಹೇಳಿಕೆ ಕೊಟ್ಟಿದ್ದರು. ಸರಿಯಾಗಿ ಕೆಲಸ ಮಾಡದ ಬೆಸ್ಕಾಂ ಸಿಬ್ಬಂದಿಯನ್ನು ಕಡಿದು ಹಾಕಿ ಎಂದಿದ್ದರು. ಇಂದಿನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಹೀಗಾಗಿದೆ. ಈಗ ಏನು ಹೇಳ್ತೀರಿ? ಯಾರನ್ನೆಲ್ಲ ಕಡಿದು ಹಾಕಬೇಕು ಹೇಳಿ.

ಈ ರೀತಿಯ ಘಟನೆ ಯಾವುದೇ ಸರಕಾರ ಇರುವಾಗ ನಡೆದಿದ್ದರೂ ಅದು ಮಾನವೀಯತೆಗೆ ಆದ ಅವಮಾನ. ಸಿದ್ದರಾಮಯ್ಯ ಅವರೇನಾದರೂ ವಿಪಕ್ಷ ಸ್ಥಾನದಲ್ಲಿ ಇದ್ದಿದ್ದರೆ, ನಿಮ್ಮ ಯೋಗ್ಯತೆಗೆ ಸರಿಯಾಗಿ ಆಸ್ಪತ್ರೆ ನಡೆಸುವುದಕ್ಕಾಗಲ್ಲ. ರಾಜೀನಾಮೆ ಬಿಸಾಕಿ ಮನೆಗೆ ಹೋಗ್ರಿ.. ಎಂದು ಆಡಳಿತ ಪಕ್ಷಕ್ಕೆ ಸರಿಯಾಗಿ ತರಾಟೆಗೆ ತೆಗೆದುಕೊಂಡಿರುತ್ತಿದ್ದರು.

ಹೌದೋ, ಅಲ್ಲವೋ!? ಸಿದ್ದರಾಮಯ್ಯ ಅವರೇ ನೀವೇ ಮುಖ್ಯಮಂತ್ರಿ ಆಗಿದ್ದೀರಿ. ರಮೇಶ್ ಕುಮಾರ್ ಅಂಥವರ ಬಳಿ ಆರೋಗ್ಯ ಖಾತೆ ಇದೆ. ಈ ಸಲ ಬಜೆಟ್ ನಲ್ಲಿ ಕೋಟಿಗಟ್ಟಲೆ ಹಣವನ್ನು ಆರೋಗ್ಯ ಕ್ಷೇತ್ರಕ್ಕೆ ಎತ್ತಿಟ್ಟಿದ್ದೀರಿ. ಆದರೂ ನೋಡಿ ಸ್ಟ್ರೆಚರ್ ಇಲ್ಲ, ವ್ಹೀಲ್ ಛೇರ್ ಇಲ್ಲ ಅನ್ನೋ ವೈದ್ಯಕೀಯ ಸಿಬ್ಬಂದಿ.[ರೂಟ್ ಬಸ್ಸಿನಂತೆ ಮದುವೆಗೆ ಬಳಕೆಯಾಯ್ತು ನಗು-ಮಗು ವಾಹನ]
ಈಗ ಹೇಳಿ, ರಾಜ್ಯ ಸರಕಾರ ಇದ್ದರೆಷ್ಟು, ಹೋದರೆಷ್ಟು ಅಂತ ಜನ ಸಾಮಾನ್ಯರಿಗೆ ಅನ್ನಿಸುವುದರಲ್ಲಿ ಏನಾದರೂ ತಪ್ಪಿದೆಯಾ? ವ್ಯವಸ್ಥೆಯನ್ನು ನೆಟ್ಟಗೆ ಮಾಡಲು ಸಾಧ್ಯವಿಲ್ಲದ ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ ಯಾಕೆ ಬೇಕು ಅಂತ ಹೇಳಿ ಸ್ವಾಮಿ....












Click it and Unblock the Notifications