• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಭತ್ತದ ಕಣಜದಲ್ಲಿ ದ್ರಾಕ್ಷಿ ಬೆಳೆದು ಗೆದ್ದ ಛಲವಾದಿ

By ತುಕಾರಾಂ ರಾವ್ ಬಿ.ವಿ, ಕೊಪ್ಪಳ
|

ಕೊಪ್ಪಳ ಜಿಲ್ಲೆ ಸೋನಾಮಸೂರಿ ಅಕ್ಕಿಗೆ ಹೆಸರುವಾಸಿ, ಭತ್ತದ ಕಣಜ ಎಂದೇ ಜಿಲ್ಲೆ ಪ್ರಖ್ಯಾತಿ ಪಡೆದಿದೆ. ಜಿಲ್ಲೆಯ ಖ್ಯಾತಿ ಇಷ್ಟಕ್ಕೆ ಸೀಮಿತವಾಗಿಲ್ಲ, ಇಡೀ ಹೈದ್ರಾಬಾದ್-ಕರ್ನಾಟಕ ಪ್ರದೇಶ ವ್ಯಾಪ್ತಿಯಲ್ಲಿಯೇ ಕೊಪ್ಪಳ ಜಿಲ್ಲೆ ತೋಟಗಾರಿಕೆ ಬೆಳೆಗಳ ಉತ್ಪಾದನೆಯಲ್ಲಿ ತನ್ನದೇ ಖ್ಯಾತಿಯನ್ನು ಹೊಂದಿದೆ.ಜಿಲ್ಲೆಯಲ್ಲಿನ ತೋಟಗಾರಿಕೆ ಯೋಜನೆಯ ಲಾಭ ಪಡೆದು ಬದುಕು ಕಟ್ಟಿಕೊಂಡ ಯಶಸ್ವಿ ರೈತನ ಯಶೋಗಾಥೆಯೊಂದು ಇಲ್ಲಿದೆ.

ಸಿರಿವಂತ ರೈತರ ಬೆಳೆ ಎಂದೇ ಕರೆಯಲ್ಪಡುವ ದ್ರಾಕ್ಷಿ ಬೆಳೆಗೆ ಉತ್ತರ ಕರ್ನಾಟಕದಲ್ಲಿ ಬಿಜಾಪುರ ಜಿಲ್ಲೆಗೆ ಅಗ್ರಸ್ಥಾನವಿದೆ. ದಾಳಿಂಬೆ ಬೆಳೆಯು ಅಂಗಮಾರಿ ರೋಗಕ್ಕೆ ತುತ್ತಾಗಿ ಜಿಲ್ಲೆಯಲ್ಲಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಹಂತದಲ್ಲಿರುವಾಗ ರೈತರಿಗೆ ತುಸು ನೆಮ್ಮದಿಯ ನಿಟ್ಟುಸಿರು ಕೊಟ್ಟಿದ್ದು ಅಂದರೆ 'ದ್ರಾಕ್ಷಿ' ಬೆಳೆ.

ಕೊಪ್ಪಳ ಜಿಲ್ಲಾ ತೋಟಗಾರಿಕಾ ಇಲಾಖೆಯ ಅಧಿಕಾರಿಗಳ ಪ್ರಯತ್ನದಿಂದಾಗಿ ಹಾಗೂ ತೋಟಗಾರಿಕಾ ಮಾಹಿತಿ ಮತ್ತು ಸಲಹಾ ಕೇಂದ್ರದ ಸ್ಥಾಪನೆಯಿಂದಾಗಿ ಜಿಲ್ಲೆಯ ಅನೇಕ ರೈತರು ದ್ರಾಕ್ಷಿ ಬೆಳೆ ಬೆಳೆಯುತ್ತ ಆಸಕ್ತಿ ತೋರಿದ್ದು, ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯ ಲಾಭವನ್ನು ರೈತರು ಪಡೆಯಲು ಅನುಕೂಲವಾಗುವಂತೆ ತೋಟಗಾರಿಕಾ ಇಲಾಖೆ ಸಲಹಾ ಕೇಂದ್ರ ಸ್ಥಾಪಿಸಿದ ಪರಿಣಾಮವಾಗಿ, ಜಿಲ್ಲೆಯಲ್ಲಿ ಕೆಲವು ಹೆಕ್ಟೇರ್ ವಿಸ್ತೀರ್ಣದಲ್ಲಿ ಮಾತ್ರ ಇದ್ದ ದ್ರಾಕ್ಷಿ ಬೆಳೆ ಇದೀಗ ಸುಮಾರು 400 ಹೆಕ್ಟೇರ್ ಪ್ರದೇಶಕ್ಕೆ ವ್ಯಾಪಿಸಿದೆ. ಅಲ್ಲದೆ ಕುಷ್ಟಗಿ ತಾಲೂಕಿನ ತಾವರಗೇರಾ ಹತ್ತಿರದ ಗರ್ಜನಾಳ ಗ್ರಾಮದಲ್ಲಿ ದ್ರಾಕ್ಷಾ ರಸ (ವೈನ್) ತಯಾರಿಕಾ ಘಟಕ ತಲೆಯೆತ್ತಿದೆ.

ತೋಟಗಾರಿಕೆಯನ್ನು ಬೆಳೆಯುವುದರ ಜೊತೆಗೆ ಲಾಭದಾಯಕವನ್ನಾಗಿಸುವುದು, ಅತ್ಯಂತ ಶ್ರಮದಾಯಕ. ಎಸ್.ಎಸ್.ಎಲ್.ಸಿ. ಓದಿಕೊಂಡಿದ್ದರೂ, ರೈತ ಕಾಯಕಕ್ಕೆ ಇಳಿದು, ಲಕ್ಷ ಲಕ್ಷ ಹಣ ಸಂಪಾದಿಸಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಕುಷ್ಟಗಿ ತಾಲೂಕಿನ ನೆರೆಬೆಂಚಿ ಗ್ರಾಮದ ಪ್ರಗತಿಪರ ರೈತ ರಾಜಾಸಾಬ್.

ತನ್ನ 06 ಜನ ಸಹೋದರರು ಕೃಷಿ ಕಾಯಕದಿಂದ ವಿಮುಖವಾಗಿದ್ದರೂ, ಅದನ್ನು ಲೆಕ್ಕಿಸದೆ, ಕೃಷಿ ಬದುಕಿನತ್ತ ಹೆಜ್ಜೆ ಇಟ್ಟ ರಾಜಾಸಾಬ್ ಇದೀಗ ತನ್ನ 4 ಎಕರೆ ಜಮೀನಿನಲ್ಲಿ ದ್ರಾಕ್ಷಿಯನ್ನು ಬೆಳೆದು, ಪ್ರತಿ ವರ್ಷ ಕನಿಷ್ಟ 3 ಲಕ್ಷ ರೂ. ಆದಾಯ ಗಳಿಸುತ್ತಿದ್ದಾರೆ. ಈಗಾಗಲೆ ರಾಜಾಸಾಬ್ ಅವರು ದ್ರಾಕ್ಷಿಯಲ್ಲಿ ಉತ್ತಮ ಇಳುವರಿ ಪಡೆದು ಉತ್ತಮ ರೈತನೆಂದು ಸೈ ಎನಿಸಿಕೊಂಡಿದ್ದಾರೆ.

ಲಾಭದಾಯಕ ತೋಟಗಾರಿಕಾ ಉದ್ಯಮವೆಂದರೆ ಒಣದ್ರಾಕ್ಷಿ ಘಟಕ ಸ್ಥಾಪಿಸುವುದು, ಇದುವರೆಗೂ ಮಹಾರಾಷ್ಟ್ರ ರಾಜ್ಯ ಬಿಟ್ಟರೆ ನಮ್ಮ ಕರ್ನಾಟಕ ರಾಜ್ಯದಲ್ಲಿ ಒಣದ್ರಾಕ್ಷಿ ಮಾಡುವ ರೈತರು ಲಭ್ಯವಿರುವುದು ಕೇವಲ ಬಿಜಾಪುರ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಮಾತ್ರ. ಆದರೆ ಇದೀಗ ಕೊಪ್ಪಳ ಜಿಲ್ಲೆಯಲ್ಲಿ ಪ್ರಥಮ ಬಾರಿಗೆ ಒಣ ದ್ರಾಕ್ಷಿ ತಯಾರಿಸುವ ಘಟಕ ಸ್ಥಾಪನೆಯ ಸಾಹಸ ಮಾಡಿದವರು ರಾಜಾಸಾಬ್.

ಈ ಮೂಲಕ ದ್ರಾಕ್ಷಿ ಬೆಳೆಯ ಮೌಲ್ಯವರ್ಧನೆ ಮಾಡುವ ಸಾಹಸಕ್ಕೆ ರೈತ ರಾಜಾಸಾಬ್ ಕೈ ಹಾಕಿ ಯಶಸ್ವಿಯೂ ಆಗಿದ್ದಾರೆ. ತಮ್ಮ 4 ಎಕರೆ ಜಮೀನಿನಲ್ಲಿ ಪ್ರತಿ ಎಕರೆಗೆ 760 ದ್ರಾಕ್ಷಿ ಗಿಡಗಳನ್ನು ನೆಟ್ಟಿದ್ದಾರೆ. ತೋಟಗಾರಿಕೆ ಇಲಾಖೆಯೂ ಸಹ ಈ ರೈತನಿಗೆ ಕಾಲ ಕಾಲಕ್ಕೆ ಅಗತ್ಯ ಸಲಹೆ, ಸಹಕಾರಗಳನ್ನು ನೀಡಿದ್ದಾರೆ. ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ರಾಜಾಸಾಬ್ ಈಗಾಗಲೆ ಶೇ. 75 ರ ಸಬ್ಸಿಡಿಯಲ್ಲಿ ಹನಿ ನೀರಾವರಿ ಹಾಗೂ ಶೇ. 25 ರ ಸಬ್ಸಿಡಿಯಲ್ಲಿ ಪಕ್ಷಿ ಬಲೆಯನ್ನು ಪಡೆದಿದ್ದಾರೆ.

ದ್ರಾಕ್ಷಿ ಬೆಳೆಯುವುದರಿಂದ ಪ್ರತಿ ವರ್ಷ 05 ಲಕ್ಷ ರೂ. ಗಳಿಕೆಯಾಗುತ್ತಿದ್ದು, ಇದರಲ್ಲಿ 02 ಲಕ್ಷ ಬೆಳೆ ನಿರ್ವಹಣೆ ಹಾಗೂ ಇತರೆ ವ್ಯವಸ್ಥೆಗಾಗಿ ಆಗುವ ಖರ್ಚನ್ನು ತೆಗೆದರೂ, ಪ್ರತಿ ವರ್ಷ 03 ಲಕ್ಷ ರೂ. ಆದಾಯ ಗಳಿಸುತ್ತಿದ್ದೇನೆ. ಸಾಂಪ್ರದಾಯಕ ಬೆಳೆ ಬೆಳೆಯುವುದರ ಜೊತೆಗೆ ಆಧುನಿಕ ಹಾಗೂ ಸುಧಾರಿತ ತಂತ್ರಜ್ಞಾನವನ್ನು ಅಳವಡಿಸಿಕೊಂಡಲ್ಲಿ, ತೋಟಗಾರಿಕೆ ಅತ್ಯಂತ ಲಾಭದಾಯಕವಾಗಲಿದೆ ಎನ್ನುತ್ತಾರೆ ಪ್ರಗತಿ ಪರ ರೈತ ರಾಜಾಸಾಬ್.

ದ್ರಾಕ್ಷಿ ಬೆಳೆಯ ಉತ್ತಮ ಇಳುವರಿ ಪಡೆಯಲು, ಪ್ರತಿ ವರ್ಷ 02 ಬಾರಿ ಚಾಟ್ನಿ ಮಾಡಬೇಕಾಗುತ್ತದೆ. ಏಪ್ರಿಲ್ ನಂತರದ ತಿಂಗಳಿನಲ್ಲಿ ಹಿಂಚಾಟ್ನಿಯನ್ನು ನಡೆಸಿ, ಗಿಡಗಳಿಗೆ ವಿಶ್ರಾಂತಿ ನೀಡಬೇಕು. ಅಕ್ಟೋಬರ್ ತಿಂಗಳಿನಲ್ಲಿ ಮುಂಚಾಟ್ನಿ ಕೈಗೊಂಡಲ್ಲಿ, ಉತ್ತಮ ಇಳುವರಿಯನ್ನು ಪಡೆಯಬಹುದಾಗಿದೆ.

ದ್ರಾಕ್ಷಿ ಬೆಳೆಗೆ ಬರುವ ಕರ್ಪ, ಚಿಬ್ಬು ರೋಗ, ಬೂದಿ ರೋಗ, ಬೂದು ತಪ್ಪಟ ರೋಗ ಇವುಗಳ ನಿವಾರಣೆಗೆ ಕಾಲ ಕಾಲಕ್ಕೆ ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸಲಹೆ, ಸೂಚನೆಗಳನ್ನು ನೀಡಲಾಗುತ್ತದೆ ಎನ್ನುತ್ತಾರೆ ಸಹಾಯಕ ತೋಟಗಾರಿಕೆ ಅಧಿಕಾರಿ ಹಡಗಲಿ ಮತ್ತು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ವಿಷಯ ತಜ್ಞ ವಾಮನ ಮೂರ್ತಿ ಅವರು ಹೆಚ್ಚಿನ ಮಾಹಿತಿ ಬೇಕಿದ್ದಲ್ಲಿ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ, ಕೊಪ್ಪಳ- 08539-230170 ಕ್ಕೆ ಸಂಪರ್ಕಿಸಬಹುದಾಗಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Rice Bowl of North Karnataka Koppal district also produces progressive farmers like Raja Saab who excel in horticulture field Raja Saab has turned his small piece of land into grape yard here is the success story narrated by Tukaram
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more