MB Patil profile: ಕಾಂಗ್ರೆಸ್‌ನ ಪ್ರಬಲ ಲಿಂಗಾಯತ ನಾಯಕ ಎಂಬಿ ಪಾಟೀಲ್
ಬೆಂಗಳೂರು, ಮೇ 20: ಕರ್ನಾಟಕದ ನೂತನ ಸಚಿವರಾಗಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂಬಿ ಪಾಟೀಲ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ರಾಜ್ಯದ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು.
ಕರ್ನಾಟಕದ ವೀರಶೈವ ಲಿಂಗಾಯತ ನಾಯಕರಲ್ಲಿ ಬಬಲೇಶ್ವರ ಕ್ಷೇತ್ರ ಶಾಸಕರಾಗಿರು ಎಂಬಿ ಪಾಟೀಲ್ ಅವರು ವಿಜಯಪುರ ಜಿಲ್ಲೆ ಮಾತ್ರವಲ್ಲ, ಇಡೀ ಕರ್ನಾಟಕದಾದ್ಯಂತ ತಮ್ಮದೇ ಬೆಂಬಲಿಗರ ಪಡೆಯನ್ನು ಹೊಂದಿರುವವರು. ಅವರ ಪೂರ್ಣ ಹೆಸರು ಮಲ್ಲನಗೌಡ ಬಸನಗೌಡ ಪಾಟೀಲ್. ಕರ್ನಾಟಕ ಕಾಂಗ್ರೆಸ್‌ನಲ್ಲಿ ಅವರ ಪಾತ್ರ ಹಿರಿದಾದುದು.

ಎಂಬಿ ಪಾಟೀಲ್ ವಿಜಯಪುರ ಜಿಲ್ಲೆಯ ತೊರವಿ ಎಂಬ ಪುಟ್ಟ ಗ್ರಾಮದಲ್ಲಿ 1964 ಅಕ್ಟೋಬರ್ 7ರಂದು ಜನಿಸಿದರು. ಬೆಂಗಳೂರಿನ ಪೂರ್ಣಪ್ರಜ್ಞ ಶಾಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ವಿಜಯಪುರದ ದರಬಾರ ಪ್ರೌಢ ಶಾಲೆಯಲ್ಲಿ ಪಡೆದಿದ್ದಾರೆ. ಬಳಿಕ ಸಿವಿಲ್ ಇಂಜಿನಿಯರಿಂಗ್ ಪದವಿಯನ್ನು ವಿಜಯಪುರದ ಡಾ. ಫ.ಗು.ಹಳಕಟ್ಟಿ ತಾಂತ್ರಿಕ ಹಾಗೂ ಅಭಿಯಾಂತ್ರಿಕ ಮಹಾವಿದ್ಯಾಲಯದಲ್ಲಿ ಪಡೆದಿದ್ದಾರೆ.
ಎಂ.ಬಿ. ಪಾಟೀಲ್ ಅವರು ಮೂಲತಃ ರಾಜಕೀಯ ಹಿನ್ನೆಲೆಯ ಕುಟುಂಬದಿಂದ ಬಂದವರು. ಅವರ ತಂದೆ ಬಿ.ಎಂ. ಪಾಟೀಲ್ ಕೂಡ ಶಾಸಕರಾಗಿದ್ದರು. 1991ರಲ್ಲಿ ಬಿ.ಎಂ. ಪಾಟೀಲ್ ನಿಧನರಾದಾಗ ಸಹಜವಾಗಿ ಎಂ.ಬಿ. ಪಾಟೀಲ್ ರಾಜಕೀಯಕ್ಕೆ ಬಂದರು. ಆಗ ಅವರ ವಯಸ್ಸು ಬರೀ 27 ವರ್ಷ. ತಿಕೋಟಾ ಕ್ಷೇತ್ರದ ಉಪಚುನಾವಣೆಯಲ್ಲಿ ಎಂ.ಬಿ. ಪಾಟೀಲರ್ ಗೆದ್ದು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.

ಎಂಬಿ ಪಾಟೀಲ್ ರಾಜಕೀಯದ ಹೊರತಾಗಿ ಇತರೇ ಕೆಲಸಗಳಲ್ಲೂ ಸಕ್ರಿಯರಾಗಿದ್ದಾರೆ. 1990 ರಿಂದ 2005ರ ವರೆಗೆ ಬಿ.ಎಲ್.ಡಿ.ಐ. ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಹುದ್ದೆ, 2005ರಿಂದ ಬಿ.ಎಲ್.ಡಿ.ಐ. ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಇನ್ನು ಬಬಲೇಶ್ವರ ವ್ಯಾಪ್ತಿಯಲ್ಲಿ ಮರಗಳನ್ನು ಬೆಳೆಸಲು ಆಂದೋಲನ ನಡೆಸುತ್ತಿದ್ದಾರೆ.
ಬಳಿಕ 1994 ಮತ್ತು 1999ರಲ್ಲಿ ನಡೆದ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಅಲ್ಲಿನ ಪ್ರಭಾವಿ ನಾಯಕ ಶಿವಾನಂದ ಪಾಟೀಲರ ವಿರುದ್ಧ ಎಂಬಿ ಪಾಟೀಲ್ ಸೋತಿದ್ದರು. ನಂತರ ವಿಜಯಪುರ ಲೋಕಸಭಾ ಕ್ಷೇತ್ರದಿಂದ 1998ರಲ್ಲಿ ಕಾಂಗ್ರೆಸ್‌ನಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ, ಗೆದ್ದು, ಸಂಸದರಾಗಿ ಸಂಸತ್ತಿಗೂ ಪ್ರವೇಶ ಮಾಡಿ ಬಂದವರು.
ಅನಂತರ 2004ರಲ್ಲಿ ತಿಕೋಟಾ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಗೆದ್ದು, ಎರಡನೇ ಬಾರಿಗೆ ವಿಧಾನಸಭೆ ಪ್ರವೇಶ. ಬಳಿಕ ಕ್ಷೇತ್ರ ಮರುವಿಂಗಡಣೆ ಬಳಿಕ ವಿಜಯಪುರದ ಬಬಲೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದರು. 2008, 2013 ಮತ್ತು 2018ರಲ್ಲಿ ಬಬಲೇಶ್ವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಗೆದ್ದು ಶಾಸಕರಾದರು.
ಬಳಿಕ ಎಂಬಿ ಪಾಟೀಲ್ ಸಿದ್ದರಾಮಯ್ಯ, ಎಚ್‌ಡಿ ಕುಮಾರಸ್ವಾಮಿ ಸರ್ಕಾರದಲ್ಲಿ ಸಚಿವರಾಗಿ, ವಿವಿಧ ಖಾತೆಗಳನ್ನು ನಿರ್ವಿಹಿಸಿದರು. ಅವರು 2013ರಲ್ಲಿ ಸಿದ್ದರಾಮಯ್ಯನವರ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು. ನಂತರ 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಸಂಪುಟದಲ್ಲಿ ಗೃಹಸಚಿವರಾಗಿದ್ದರು. ಎಂ.ಬಿ.ಪಾಟೀಲ್ ಅವರು ತಮ್ಮ ಅಧಿಕಾರಾವಧಿಯಲ್ಲಿ ಜಲ ಸಂಪನ್ಮೂಲ ನಿರ್ವಹಣೆಯಲ್ಲಿ ಎತ್ತಿದ ಕೈ ಕರ್ನಾಟಕದ ಬರಪೀಡಿತ ಪ್ರದೇಶಗಳಿಗೆ ನೀರಾವರಿ ಒದಗಿಸುವ ಗುರಿಯನ್ನು ಹೊಂದಿದ್ದ ಭದ್ರಾ ಮೇಲ್ದಂಡೆ ಯೋಜನೆಯನ್ನು ಪೂರ್ಣಗೊಳಿಸಿದ್ದು ಅವರ ಪ್ರಮುಖ ಸಾಧನೆಗಳಲ್ಲಿ ಒಂದಾಗಿದೆ.
ಈ ಯೋಜನೆಯು ಹಲವಾರು ಅಣೆಕಟ್ಟುಗಳು ಮತ್ತು ಕಾಲುವೆಗಳ ನಿರ್ಮಾಣವನ್ನು ಒಳಗೊಂಡಿತ್ತು ಮತ್ತು ಇದು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ ಮತ್ತು ಬರಪೀಡಿತ ಪ್ರದೇಶದ ರೈತರ ಜೀವನೋಪಾಯವನ್ನು ಸುಧಾರಿಸುವಲ್ಲಿ ಯಶಸ್ವಿಯಾಗಿದೆ. ಎಂ.ಬಿ.ಪಾಟೀಲ್ ಅವರ ಮತ್ತೊಂದು ಗಮನಾರ್ಹ ಸಾಧನೆಯೆಂದರೆ ಕೃಷ್ಣಾ ಭಾಗ್ಯ ಜಲ ನಿಗಮ ಲಿಮಿಟೆಡ್ (ಕೆಬಿಜೆಎನ್‌ಎಲ್) ಯೋಜನೆಯ ಅನುಷ್ಠಾನ ಮಾಡಿದ್ದು.
ಇದು ಕೃಷ್ಣಾ ನದಿಯ ನೀರಿನ ಸಂಪನ್ಮೂಲಗಳನ್ನು ರಾಜ್ಯದಲ್ಲಿ ನೀರಾವರಿ ಮತ್ತು ಕುಡಿಯುವ ನೀರು ಪೂರೈಕೆಗಾಗಿ ಬಳಸಿಕೊಳ್ಳುವ ಗುರಿಯನ್ನು ಹೊಂದಿದೆ. ಈ ಯೋಜನೆಯು ಹಲವಾರು ಜಲಾಶಯಗಳು, ಕಾಲುವೆಗಳು ಮತ್ತು ಲಿಫ್ಟ್ ನೀರಾವರಿ ಯೋಜನೆಗಳ ನಿರ್ಮಾಣವನ್ನು ಒಳಗೊಂಡಿತ್ತು ಮತ್ತು ಇದು ರಾಜ್ಯದಲ್ಲಿ ನೀರಾವರಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ.
ಹಲವಾರು ಏತ ನೀರಾವರಿ ಯೋಜನೆ ಜಾರಿಗೊಳಿಸಲು ಶ್ರಮಿಸಿದ್ದಾರೆ. ಲಿಂಗಾಯತ ಸಮುದಾಯದ ಕೆಲವು ಸದಸ್ಯರು ವೀರಶೈವ ಲಿಂಗಾಯತ ಹಿಂದೂ ಧರ್ಮದ ಅವಿಭಾಜ್ಯ ಅಂಗವಾಗಿದೆ ಆದ್ದರಿಂದ ಪ್ರತ್ಯೇಕ ಧರ್ಮವೆಂದು ಪರಿಗಣಿಸಬಾರದು ಎಂದು ವಾದಿಸಿದರು. ಮತ್ತೊಂದೆಡೆ, ಪ್ರಸ್ತಾವನೆಯ ಬೆಂಬಲಿಗರು ವೀರಶೈವ ಲಿಂಗಾಯತಕ್ಕೆ ತನ್ನದೇ ಆದ ವಿಶಿಷ್ಟ ಗುರುತನ್ನು ಹೊಂದಿದ್ದು ಅದನ್ನು ಪ್ರತ್ಯೇಕ ಧರ್ಮವಾಗಿ ಗುರುತಿಸಬೇಕು ಎಂದು ವಾದಿಸಿದರು. ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದವರಲ್ಲಿ ಎಂಬಿ ಪಾಟೀಲ್ ಕೂಡ ಇದ್ದರು.












Click it and Unblock the Notifications