ಬಿಗ್ ಬ್ರೇಕಿಂಗ್ : ಕರ್ನಾಟಕ ಕಾಂಗ್ರೆಸ್‌ನಲ್ಲಿ ಮೂರು ಮಹತ್ವದ ಬದಲಾವಣೆ!
ಬೆಂಗಳೂರು, ಜೂನ್ 13 : ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಚುನಾವಣೆಯ ಸೋಲನ್ನು ಗಮನದಲ್ಲಿಟ್ಟುಕೊಂಡು ಪಕ್ಷ ಸಂಘಟನೆಯಲ್ಲಿ ಮೂರು ಮಹತ್ವದ ಬದಲಾವಣೆ ಮಾಡಲು ಎಐಸಿಸಿ ತೀರ್ಮಾನಿಸಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. 2019ರ ಲೋಕಸಭಾ ಚುನಾವಣೆಯಲ್ಲಿಯೂ ಪಕ್ಷ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು 21 ಕ್ಷೇತ್ರಗಳಲ್ಲಿ ಕಣಕ್ಕಿಳಿದಿತ್ತು. ಆದರೆ, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಾತ್ರ ಗೆಲುವು ಕಂಡಿತ್ತು.
ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ, ಡಾ.ಎಂ.ವೀರಪ್ಪ ಮೊಯ್ಲಿ, ಧ್ರುವನಾರಾಯಣ, ಸಿ.ಎಚ್.ವಿಜಯಶಂಕರ್, ವಿನಯ್ ಕುಲಕರ್ಣಿ, ಈಶ್ವರ ಖಂಡ್ರೆ ಸೇರಿದಂತೆ ಪಕ್ಷದ ಘಟಾನುಘಟಿ ನಾಯಕರು ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ.
ಚುನಾವಣೆ ಸೋಲಿನ ಬಳಿಕ ಕರ್ನಾಟಕ ಕಾಂಗ್ರೆಸ್‌ನಲ್ಲಿ ಮಹತ್ವದ ಬದಲಾವಣೆ ಮಾಡಲು ಎಐಸಿಸಿ ತೀರ್ಮಾನಿಸಿದೆ. ಮೂರು ಪ್ರಮುಖ ಸಮುದಾಯದ ನಾಯಕರಿಗೆ ಮಹತ್ವದ ಜವಾಬ್ದಾರಿ ನೀಡಲಾಗುತ್ತದೆ. ಕರ್ನಾಟಕದಲ್ಲಿ ಮುಂದೆ ನಡೆಯುವ ವಿಧಾನಸಭೆ ಚುನಾವಣೆಯನ್ನೂ ಗಮನದಲ್ಲಿಟ್ಟುಕೊಂಡು ಈ ಬದಲಾವಣೆ ಮಾಡಲಾಗುತ್ತಿದೆ.

ಮೂವರು ನಾಯಕರಿಗೆ ಹೆಚ್ಚಿನ ಹೊಣೆ
ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೆಚ್ಚಿನ ಹೊಣೆ ನೀಡಿ ಪಕ್ಷ ಸಂಘಟನೆಯಲ್ಲಿ ಮಹತ್ವದ ಬದಲಾವಣೆ ಮಾಡಲು ಎಐಸಿಸಿ ತೀರ್ಮಾನಿಸಿದೆ. ಈ ಕುರಿತು ರಾಹುಲ್ ಗಾಂಧಿ ಅವರು ಖರ್ಗೆ ಅವರ ಜೊತೆ ಚರ್ಚಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಸಿದ್ದರಾಮಯ್ಯಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ?
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ವಿಧಾನಸಭೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದಾರೆ. ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಲು ಎಐಸಿಸಿ ಚಿಂತನೆ ನಡೆಸಿದೆ. ಪ್ರಸ್ತುತ ದಿನೇಶ್ ಗುಂಡೂರಾವ್ ಅವರು ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.

ಡಿ.ಕೆ.ಶಿವಕುಮಾರ್ ಶಾಸಕಾಂಗ ಪಕ್ಷದ ನಾಯಕ
ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರನ್ನಾಗಿ ಮಾಡಲಾಗುತ್ತದೆ ಎಂಬ ಸುದ್ದಿ ಹಬ್ಬಿದೆ. ಕರ್ನಾಟಕ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಆಗಿರುವ ಡಿ.ಕೆ.ಶಿವಕುಮಾರ್ ಎಲ್ಲಾ ಶಾಸಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ.

ಮಲ್ಲಿಕಾರ್ಜುನ ಖರ್ಗೆ ಸಮನ್ವಯ ಸಮಿತಿಗೆ
2019ರ ಲೋಕಸಭಾ ಚುನಾವಣೆಯಲ್ಲಿ ಸೋಲು ಅನುಭವಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಲು ಎಐಸಿಸಿ ಚಿಂತನೆ ನಡೆಸಿದೆ. ದೆಹಲಿಯಲ್ಲಿ ಬುಧವಾರ ಖರ್ಗೆ ಅವರು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದಾಗ ಈ ಕುರಿತು ಚರ್ಚೆ ನಡೆದಿದೆ.

ಸಾಮೂಹಿಕ ನಾಯಕತ್ವದ ಮಂತ್ರ
ಲೋಕಸಭಾ ಚುನಾವಣೆ ಸೋಲಿನ ಬಳಿಕ ಸಾಮೂಹಿಕ ನಾಯಕತ್ವದಲ್ಲಿ ಮುಂದಿನ ಹೆಜ್ಜೆ ಇಡಲು ಕಾಂಗ್ರೆಸ್ ತೀರ್ಮಾನಿಸಿದೆ. ಆದ್ದರಿಂದ, ವಿವಿಧ ಸಮುದಾಯದ ಪ್ರಭಾವಿ ನಾಯಕರಿಗೆ ಮಹತ್ವದ ಹುದ್ದೆಗಳನ್ನು ನೀಡಿ ಪಕ್ಷ ಸಂಘಟನೆಯ ಜವಾಬ್ದಾರಿಯನ್ನು ನೀಡಲಾಗುತ್ತದೆ.












Click it and Unblock the Notifications