ಎಲ್ಲ ಬಗೆಯ ನ್ಯೂಡಲ್ಸ್ ಪರೀಕ್ಷೆಗೆ ರಾಜ್ಯ ಸರ್ಕಾರ ತೀರ್ಮಾನ
ಬೆಂಗಳೂರು, ಜೂ. 05: ಕಳೆದ ಕೆಲ ದಿನಗಳಿಂದ ಮ್ಯಾಗಿ ಬೇಡದ ಕಾರಣಕ್ಕೆ ಸುದ್ದಿಯಲ್ಲಿದೆ. ರಾಜ್ಯ ಸರ್ಕಾರ ಕೇವಲ ಮ್ಯಾಗಿ ಮಾತ್ರವಲ್ಲದೇ ಎಲ್ಲ ಬಗೆಯ ನ್ಯೂಡಲ್ಸ್ ಗಳನ್ನು ಪರಿಶೀಲನೆ ಮಾಡಲಾಗುವುದು ಎಂದು ತಿಳಿಸಿದೆ. ಆರೋಗ್ಯ ಸಚಿವ ಯುಟಿ ಖಾದಿರ್ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದ್ದಾರೆ.
ಜನರ ಆರೋಗ್ಯ ಬಹಳ ಮುಖ್ಯ. ಇಲ್ಲಿ ಯಾವ ಕಂಪನಿಗಳಿಗೂ ಮಣೆ ಹಾಕುವ ಪ್ರಶ್ನೆಯೇ ಇಲ್ಲ. ಹಾನಿಕಾರಕ ಅಂಶ ಕಂಡುಬಂದರೆ ನಿರ್ದಾಕ್ಷ್ಯಣ್ಯ ಕ್ರಮ ಖಂಡಿತ ಎಂದು ಎಚ್ಚರಿಕೆ ನೀಡಿದ್ದಾರೆ.[ಬೆಂಗಳೂರಲ್ಲಿ ನ್ಯೂಡಲ್ಸ್ ವ್ಯಾಪಾರಕ್ಕೇನು ಅಡ್ಡಿಯಿಲ್ಲ]

ಸ್ಯಾಂಪಲ್ ಸಂಗ್ರಹ
ರಾಜ್ಯ ಸರ್ಕಾರ ಎಲ್ಲೆಡೆಯಿಂದ ನ್ಯೂಡಲ್ಸ್ ಸ್ಯಾಂಪಲ್ ಸಂಗ್ರಹ ಮಾಡುತ್ತಿದೆ. ಮ್ಯಾಗಿಯಲ್ಲಿನ ಹಾನಿಕಾರಕ ಅಂಶ ಪರೀಕ್ಷೆ ಮಾಡುವುದರೊಂದಿಗೆ ಇತರೆ ಕಂಪನಿಗಳ ನ್ಯೂಡಲ್ಸ್ ಗಳನ್ನು ಪರಿಶೀಲನೆ ಮಾಡುವುದು ಉತ್ತಮ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ. ಯಾವ ಬಗೆಯ ಆಹಾರ ಪದಾರ್ಥಗಳು ಆಹಾರ ಭದ್ರತೆಗೆ ಆತಂಕ ತಂದೊಡ್ಡಬಾರದು ಎಂದು ಹೇಳಿದ್ದಾರೆ.
ಪರೀಕ್ಷೆಗೆ ಒಪ್ಪದ ಸಂಶೋಧನಾಲಯ
ವಿಷಕಾರಕ ಅಂಶ ಪತ್ತೆಯಾಗಿ ವಿವಾದಕ್ಕೆ ಕಾರಣವಾಗಿರುವ ಮ್ಯಾಗಿ ಸ್ಯಾಂಪಲ್ ಪರೀಕ್ಷೆ ಮಾಡಿ ವರದಿ ನೀಡಬೇಕೆಂಬ ರಾಜ್ಯ ಸರ್ಕಾರದ ಪ್ರಸ್ತಾಪ ಒಪ್ಪದ ಮೈಸೂರಿನ ಕೇಂದ್ರ ಆಹಾರ ಸಂಶೋಧನಾಲಯ (ಸಿಎಫ್‌ಟಿಆರ್‌ಐ), ಕೋಲ್ಕೊತಾದಲ್ಲಿ ಪರೀಕ್ಷೆ ಮಾಡಿಸುವಂತೆ ಸಲಹೆ ನೀಡಿದೆ. ಕೆಲ ಅಧಿಕಾರಿಗಳು ಸ್ಯಾಂಪಲ್‌ಗಳನ್ನು ಬುಧವಾರ ಮಧ್ಯಾಹ್ನ ಸಿಎಫ್‌ಟಿಆರ್‌ಐಗೆ ತಂದಿದ್ದರು. ಆಹಾರದ ಗುಣಮಟ್ಟ ಪತ್ತೆಗೆ ಕೇಂದ್ರ ಸರಕಾರ ರೂಪಿಸಿರುವ ನಿಯಮಾವಳಿಗಳ ವಿವರವನ್ನು ಅಧಿಕಾರಿಗಳಿಗೆ ನೀಡಿದ ಸಂಸ್ಥೆ ನಿರ್ದೇಶಕ ಡಾ. ರಾಮರಾಜಶೇಖರನ್ ಇದು ಏಕಾಏಕಿ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.[ರುಚಿಕರ ಮ್ಯಾಗಿ ತಿಂದ ಎಷ್ಟು ಜನರು ಖಾಯಿಲೆ ಬಿದ್ದಿದ್ದಾರೆ?]
ಆಂಧ್ರಪ್ರದೇಶ, ಕರ್ನಾಟಕ, ಉತ್ತರಪ್ರದೇಶ, ಜಮ್ಮು ಕಾಶ್ಮೀರ ರಾಜ್ಯಗಳ ಆಹಾರ ಸ್ಯಾಂಪಲ್‌ಗಳ ತಪಾಸಣೆಯನ್ನು ಕೋಲ್ಕೊತಾದ ಕೇಂದ್ರ ಆಹಾರ ಸಂಶೋಧನಾಲಯದಲ್ಲಿ ಕೈಗೊಳ್ಳಬೇಕು. ಮೈಸೂರಿನ ಸಿಎಫ್‌ಟಿಆರ್‌ಐ ಆವರಣದಲ್ಲಿರುವ ಆಹಾರ ಸುರಕ್ಷತಾ ಗುಣಮಟ್ಟ ಪತ್ತೆ ಪ್ರಯೋಗಾಲಯ(ಎಫ್‌ಎಸ್‌ಎಕ್ಯುಎಲ್) ದಲ್ಲಿ ಬಿಹಾರ, ಗೋವಾ, ದಿಲ್ಲಿ, ಜಾರ್ಖಂಡ್, ಮಧ್ಯಪ್ರದೇಶ, ಪಶ್ಚಿಮ ಬಂಗಾಳ, ಪಾಂಡಿಚೇರಿ ರಾಜ್ಯಗಳ ಆಹಾರ ಗುಣಮಟ್ಟ ತಪಾಸಣೆ ಮಾಡಲಾಗುತ್ತದೆ.
ದೇಶ ಮಟ್ಟದಲ್ಲಿಯೂ ತಪಾಸಣೆ ನಡೆಯುತ್ತಿದೆ. ಇಲ್ಲಿ ಕೇವಲ ಮ್ಯಾಗಿಯೊಂದನ್ನು ಅಲ್ಲದೇ ಉಳಿದ ನ್ಯೂಡಲ್ಸ್ ಗಳನ್ನು ತಪಾಸಣೆಗೆ ಒಳಪಡಿಸಲಾಗುತ್ತಿದ್ದು ವರದಿ ಬಂದ ನಂತರ ಸ್ಪಷ್ಟ ಚಿತ್ರಣ ಗೊತ್ತಾಗಲಿದೆ.












Click it and Unblock the Notifications