ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಡಿಕೇರಿ ದಸರಾ ಸೂತ್ರಧಾರಿ ಕರಗಗಳು

By ಬಿ.ಎಂ.ಲವಕುಮಾರ್
|
Google Oneindia Kannada News

ಮಡಿಕೇರಿ ದಸರಾ ಸೂತ್ರಧಾರಿ ಕರಗಗಳು. ಹೌದು ನಾಲ್ಕು ಶಕ್ತಿದೇವತೆಗಳಾದ ಶ್ರೀ ಕಂಚಿ ಕಾಮಾಕ್ಷಿಯಮ್ಮ, ಶ್ರೀ ಕೋಟೆ ಮಾರಿಯಮ್ಮ, ಶ್ರೀ ದಂಡಿನಮಾರಿಯಮ್ಮ ಹಾಗೂ ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯಗಳ ಕರಗಗಳು ಮಡಿಕೇರಿ ದಸರಾದ ಸೂತ್ರಧಾರಿಗಳು. ಮಡಿಕೇರಿ ನಗರದಲ್ಲಿ ಕರಗ ಆಚರಣೆ ಜಾರಿಗೆ ಬರಲು ಇತಿಹಾಸಿಕ ಕಾರಣವೂ ಇದೆ.

ಸುಮಾರು 185 ವರ್ಷಗಳ ಹಿಂದೆ ಮಡಿಕೇರಿ ನಗರದಲ್ಲಿ ಸಾಂಕ್ರಾಮಿಕ ರೋಗ ಹರಡಿತ್ತು. ಆ ಸಂದರ್ಭ ರೋಗ ಹರಡಲು ಕಾರಣ ಹುಡುಕಿಕೊಂಡು ಧಾರ್ಮಿಕ ಮುಖಂಡರು ದೇವರ ಮೊರೆ ಹೋದರು. ಆಗ ಮಹಾಮಾರಿ ರೋಗಕ್ಕೆ ದುಷ್ಟ ಶಕ್ತಿಗಳು ಕಾರಣವಾಗಿದ್ದು, ಊರ ಹೊರಗಿರುವ ನಾಲ್ಕು ಶಕ್ತಿದೇವತೆಗಳನ್ನು ಒಳಕರೆದು ನವರಾತ್ರಿಯ ಸಂದರ್ಭ ಕರಗ ಹೊರಡಿಸುವ ಮೂಲಕ ನಗರ ಪ್ರದಕ್ಷಿಣೆ ಮಾಡಿಸಿದರೆ ರೋಗ ನಿವಾರಣೆಯಾಗುತ್ತದೆ ಎಂದು ತಿಳಿದುಬಂದಿತು. ಅದರಂತೆ ಕರಗಗಳನ್ನು ಹೊರಡಿಸಿ ಪೂಜೆ ಸಲ್ಲಿಸುವ ಕಾರ್ಯ ಆರಂಭವಾಯಿತು.

madikeri

ಈ ಕರಗ ಹೊರಡಿಸುವ ಸಂದರ್ಭ ಪೌರಾಣಿಕ ಹಿನ್ನಲೆಯಲ್ಲಿ ಧಾರ್ಮಿಕ ಸಂಪ್ರದಾಯವನ್ನು ಕೂಡ ಆಚರಣೆಗೆ ತರಲಾಯಿತು. ಅದರ ಪ್ರಕಾರ ಹಿಂದೆ ಪಾರ್ವತಿಯು ದುಷ್ಟ ರಾಕ್ಷಸರ ಸಂಹಾರಕ್ಕೆ ಹೊರಡುವ ಮುನ್ನ ಅಣ್ಣ ಮಹಾವಿಷ್ಣುವಿನ ಬಳಿಗೆ ತೆರಳಿದಳಂತೆ. ಆಗ ವಿಷ್ಣು ತನ್ನ ಅಸ್ತ್ರಗಳಾದ ಶಂಕ, ಚಕ್ರ, ಗಧೆ, ಪದ್ಮ ಸೇರಿದಂತೆ ಆಯುಧಗಳನ್ನು ಆಕೆಗೆ ದಯಪಾಲಿಸಿದನಂತೆ.

ಆ ನಂತರ ಪಾರ್ವತಿ ವಿವಿಧ ದೇವಿಯರ ಅವತಾರಗಳಲ್ಲಿ ತೆರಳಿ ದುಷ್ಟ ರಾಕ್ಷಸರನ್ನು ಸಂಹರಿಸಿದಳಂತೆ. ಹಾಗಾಗಿಯೇ ಪಾರ್ವತಿ ಅವತಾರದ ನಾಲ್ಕು ಶಕ್ತಿದೇವತೆಗಳು ಊರೊಳಗೆ ಅಂದರೆ ಮಹಾವಿಷ್ಣುವಿನ ಸ್ಥಾನಕ್ಕೆ ಬರುವ ಸಂಪ್ರದಾಯವನ್ನು ಜಾರಿಗೆ ತರಲಾಯಿತು.

ಆ ಕಾಲದಲ್ಲಿ ನಗರದಲ್ಲಿ ಮಹಾವಿಷ್ಣುವಿನ ದೇವಾಲಯ ಇಲ್ಲದೆ ಇದ್ದುದರಿಂದಾಗಿ ನಗರದ ದೊಡ್ಡಪೇಟೆಯಲ್ಲಿ ಪೂಜಾ ಮಂದಿರವನ್ನು ನಿರ್ಮಿಸಿ ಅಲ್ಲಿ ರಾಮನ ಚಿತ್ರಪಟವನ್ನು ಇಟ್ಟು ಪೂಜಿಸಲಾಯಿತು. ನವರಾತ್ರಿ ಮೊದಲ ದಿನ ಮಡಿಕೇರಿಯ ಪಂಪಿನಕೆರೆ ಬಳಿ ಸಾಂಪ್ರದಾಯಿಕ ಪೂಜೆಯೊಂದಿಗೆ ಹೊರಟ ಕರಗಗಳು ದೊಡ್ಡಪೇಟೆಯ ರಾಮಮಂದಿರಕ್ಕೆ ತೆರಳಿ ಅಲ್ಲಿ ಧಾರ್ಮಿಕ ಕೈಂಕರ್ಯಗಳನ್ನು ನೆರವೇರಿಸಿದ ನಂತರ ನಗರ ಪ್ರದಕ್ಷಿಣೆ ಹೊರಡುವ ಧಾರ್ಮಿಕ ಸಂಪ್ರದಾಯವನ್ನು ಜಾರಿಗೆ ತರಲಾಯಿತು. ಅಂದಿನಿಂದ ಇಂದಿನವರೆಗೂ ಅದೇ ಸಂಪ್ರದಾಯ ಮುಂದುವರೆಯುತ್ತಿದೆ.

ನವರಾತ್ರಿಯ ಮೊದಲ ದಿನ ಮಹಾಲಯ ಅಮವಾಸ್ಯೆಯ ಮಾರನೆಯ ದಿನ ಸಂಜೆ ಪಂಪಿನಕೆರೆಯಲ್ಲಿ ನೆರೆದ ಗಣ್ಯರ ಸಮ್ಮುಖದಲ್ಲಿ ಕರಗಪೂಜೆ ನಡೆಯುತ್ತದೆ. ಆ ನಂತರ ಕರಗ ವಿದ್ಯುಕ್ತವಾಗಿ ಹೊರಡುತ್ತದೆ. ಅದು ಮಡಿಕೇರಿ ದಸರಾಕ್ಕೆ ವಿದ್ಯುಕ್ತ ಚಾಲನೆಯೂ ಹೌದು. ಆ ನಂತರ ಒಂಬತ್ತು ದಿನಗಳ ಕಾಲ ಕರಗವು ನಗರ ಪ್ರದಕ್ಷಿಣೆ ಹಾಕುತ್ತದೆ.

ದಸರಾ ದಿನದಂದು ನಡೆಯುವ ಮೆರವಣಿಗೆಯಲ್ಲಿಯೂ ಕರಗಗಳು ಪ್ರಮುಖ ಪಾತ್ರ ವಹಿಸುತ್ತಿದ್ದು, ತಮ್ಮದೇ ಆದ ಧಾರ್ಮಿಕ ವಿಧಿ ವಿಧಾನಗಳೂ ರೂಢಿಯಲ್ಲಿದೆ. ಶ್ರೀ ಕುಂದುರುಮೊಟ್ಟೆ ಮಾರಿಯಮ್ಮ ದೇವಾಲಯದ ಕರಗ ಹೊರಡದ ಹೊರತು ಉತ್ಸವದ ಅಂಗವಾಗಿ ಪ್ರದರ್ಶಿಸಲ್ಪಡುವ ಯಾವ ಮಂಟಪವಾಗಲೀ ಇತರ ಕರಗಗಳಾಗಲೀ ಮೆರವಣಿಗೆಗೆ ಬರುವಂತಿಲ್ಲ.

ಎಲ್ಲಾ ಕರಗಗಳೂ, ಮಂಟಪಗಳೂ ದಂಡಿನಮಾರಿಯಮ್ಮನ ಪೂಜೆಯನ್ನು ಸ್ವೀಕರಿಸಿದ ನಂತರ ಮೆರವಣಿಗೆಯಲ್ಲಿ ತೆರಳಿ ನಗರದ ಗದ್ದಿಗೆ ಬಳಿ ಬನ್ನಿ ಕಡಿಯಬೇಕೆಂಬ ನಿಯಮವಿದೆ. ಅದು ಇಂದಿಗೂ ಚಾಚುತಪ್ಪದೆ ಇದೇ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

English summary
The procession of four Karagas of Shakti Devathe is the main attraction of the Madikeri Dasara. Know about historic Madikeri dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X