ಶಿಥಿಲವಾದ ಅಬ್ಬಿ ತೂಗುಸೇತುವೆ, ಭಯದಲ್ಲಿ ಪ್ರವಾಸಿಗರು
ಮಡಿಕೇರಿ, ಡಿಸೆಂಬರ್, 17: ಕೊಡಗಿನ ಮಡಿಕೇರಿ ಬಳಿ ಇರುವ ಅಬ್ಬಿ ಜಲಪಾತ ನೋಡಲು ಎಷ್ಟು ಸುಂದರವಾಗಿದೆಯೋ ಅಷ್ಟೇ ಅನಾಹುತಕಾರಿಯೂ ಆಗುತ್ತಿದೆ. ಮಳೆಗಾಲದಲ್ಲಿ ಉಗ್ರರೂಪ ತಾಳುವ ಜಲಪಾತ ನಂತರದ ದಿನಗಳಲ್ಲಿ ಸೌಮ್ಯರೂಪ ತಾಳುವ ಇದನ್ನು ನೋಡಲು ಜನರು ಆತಂಕ ಪಡುವಂತಾಗಿದೆ.
ದಿವ್ಯ ಮನೋಹರವಾದ ಈ ಜಲಪಾತದ ಸೌಂದರ್ಯ ಸವಿಯಲು ಬರುವ ಸಾವಿರಾರು ಮಂದಿ ಪ್ರವಾಸಿಗರಿಗೆ ಅನುಕೂಲವಾಗಲೆಂದು, ಜಲಪಾತ ವೀಕ್ಷಿಸುವಾಗ ಯಾವುದೇ ತೊಂದರೆ ಸಂಭವಿಸಬಾರದೆಂಬ ಕಾರಣಕ್ಕೆ ನಿರ್ಮಿಸಲಾದ ತೂಗು ಸೇತುವೆ ಶಿಥಿಲಗೊಂಡಿದ್ದು, ಸೇತುವೆ ಮೇಲೆ ನಡೆದಾಡಲು ಜನರು ಹೆದರುತ್ತಿದ್ದಾರೆ.[ಮುಂಗಾರಿನಲ್ಲಿ ನೋಡ ಬನ್ನಿ ಅಬ್ಬಿ ಜಲಪಾತ...]

ಕೆ.ನಿಡುಗಣೆ ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ಅಬ್ಬಿ ಜಲಪಾತದಲ್ಲಿ ಸ್ನಾನ ಮಾಡಲು ಹೋಗಿ ಇದುವರೆಗೆ ಇಲ್ಲಿನ ಸುಳಿಗೆ ಸಿಲುಕಿ ಸುಮಾರು 52 ಮಂದಿ ಸಾವನ್ನಪ್ಪಿದ್ದಾರೆ. ಹಾಗಾಗಿ ಭದ್ರತೆ ದೃಷ್ಠಿಯಿಂದ ಈ ತೂಗು ಸೇತುವೆ ನಿರ್ಮಿಸಲಾಗಿತ್ತು. ಇದೀಗ ಈ ಸೇತುವೆ ಅಪಾಯತಾಣವಾಗಿ ಗೋಚರಿಸುತ್ತಿರುವುದರಿಂದ ಆದಷ್ಟು ಬೇಗ ಇದರ ದುರಸ್ಥಿ ಕಾರ್ಯ ಕೈಗೊಳ್ಳಬೇಕೆಂಬುದು ಹಲವಾರು ಪ್ರವಾಸಿಗರ ಮನವಿಯಾಗಿದೆ.
ಮೋಹಕ ಜಲಪಾತ:
ಮಡಿಕೇರಿಯಿಂದ ಸುಮಾರು 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ನಿಜಕ್ಕೂ ಒಂದು ಮೋಹಕ ಜಲಪಾತವೇ... ಈ ಜಲಪಾತ ನೆರವಂಡ ನಾಣಯ್ಯ ಎಂಬುವವರ ಕಾಫಿ, ಏಲಕ್ಕಿ ತೋಟಗಳ ನಡುವೆ ನಿರ್ಮಿತಗೊಂಡಿದೆ.
ಸ್ವಾತಂತ್ರ್ಯ ಪೂರ್ವದಲ್ಲಿ ಇಲ್ಲಿಗೆ ಭೇಟಿ ನೀಡಿದ ಬ್ರಿಟೀಷರು ಇದರ ಸೌಂದರ್ಯವನ್ನು ನೋಡಿ ಆನಂದಪಟ್ಟು ಕೊಡಗಿನ ಪ್ರಥಮ ಧರ್ಮಗುರುಗಳ ಮಗಳು ಜೆಸ್ಸಿಯ ಹೆಸರನ್ನು ಈ ಜಲಪಾತಕ್ಕೆ ಇಟ್ಟು 'ಜೆಸ್ಸಿ ಫಾಲ್ಸ್' ಎಂದು ಕರೆದಿದ್ದರು.[ಕೊಡಗಿನಲ್ಲೊಂದು ಗುಡಿಗೋಪುರವಿಲ್ಲದ ದೇಗುಲ!]
ಸ್ಥಳೀಯರು ಹಿಂದೆ ಇದನ್ನು 'ಮಡಿಕೇರಿ ತೊರೆ', 'ಮುತ್ತಾರ್ ಮುಟ್ಟು ತೊರೆ' ಎಂದು ಕರೆಯುತ್ತಿದ್ದರು ಎನ್ನಲಾಗಿದೆ. ಕೊಡವ ಭಾಷೆಯಲ್ಲಿ 'ಅಬ್ಬಿ' ಎಂದರೆ ತೊರೆ ಎಂದರ್ಥ. ಕೊಡವ ಭಾಷೆಯ ಅಬ್ಬಿ ಇಂದು ಅಬ್ಬಿ ಫಾಲ್ಸ್ ಆಗಿದೆ.












Click it and Unblock the Notifications