ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ ಅಂತಿಮ : 9 ಕ್ಷೇತ್ರಗಳು ಜೆಡಿಎಸ್ ಪಾಲು
ಬೆಂಗಳೂರು, ಮಾರ್ಚ್ 06 : ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ನಡುವೆ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಂಡಿದೆ. ಯಾವ ಕ್ಷೇತ್ರದಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಬೇಕು ಎಂಬುದು ಶೀಘ್ರದಲ್ಲಿಯೇ ಅಂತಿಮಗೊಳ್ಳಲಿದೆ.
ನವದೆಹಲಿಯಲ್ಲಿ ಬುಧವಾರ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ಉಭಯ ನಾಯಕರು ಸೀಟು ಹಂಚಿಕೆ ಬಗ್ಗೆ ಚರ್ಚೆ ನಡೆಸಿದ್ದು, ಅಂತಿಮ ತೀರ್ಮಾನವನ್ನು ಕೈಗೊಂಡಿದ್ದಾರೆ.
ಕರ್ನಾಟಕದ 28 ಕ್ಷೇತ್ರಗಳ ಪೈಕಿ ಕಾಂಗ್ರೆಸ್‌ಗೆ 19 ಮತ್ತು ಜೆಡಿಎಸ್‌ಗೆ 9 ಕ್ಷೇತ್ರಗಳು ಹಂಚಿಕೆಯಾಗಿವೆ. ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯರ್ಶಿ ಡ್ಯಾನಿಷ್ ಅಲಿ ಮತ್ತು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಯಾವ ಕ್ಷೇತ್ರ ಯಾರಿಗೆ? ಎಂಬ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.
ಸೀಟು ಹಂಚಿಕೆ ಪ್ರಕ್ರಿಯೆ ಮುಗಿದಿದ್ದರೂ ಯಾವ ಕ್ಷೇತ್ರ ಯಾರಿಗೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಕ್ಷೇತ್ರಗಳಿಗಾಗಿ ಎರಡೂ ಪಕ್ಷಗಳು ಪಟ್ಟು ಹಿಡಿದಿವೆ. ಯಾರಿಗೆ ಕ್ಷೇತ್ರ ಸಿಗಲಿದೆ? ಎಂದು ಕಾದು ನೋಡಬೇಕು....

9ಕ್ಕೆ ಒಪ್ಪಿದ ಜೆಡಿಎಸ್
ಜೆಡಿಎಸ್ ಪಕ್ಷ 12 ಸ್ಥಾನಗಳನ್ನು ಬಿಟ್ಟುಕೊಡಬೇಕು ಎಂದು ಬೇಡಿಕೆ ಇಟ್ಟಿತ್ತು. ಕರ್ನಾಟಕ ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡಿರಲಿಲ್ಲ. ಈಗ ರಾಹುಲ್ ಗಾಂಧಿ ಅವರ ಜೊತೆಗಿನ ಸಭೆಯ ಬಳಿಕ ಗೆಲ್ಲುವ ಕ್ಷೇತ್ರಗಳ ಪಟ್ಟಿಯನ್ನು ಮಾಡಿ 9 ಸ್ಥಾನಗಳನ್ನು ಪಡೆಯಲು ಜೆಡಿಎಸ್ ಒಪ್ಪಿಗೆ ನೀಡಿದೆ.

ಯಾವ ಕ್ಷೇತ್ರಗಳು ಯಾರಿಗೆ
ಸಭೆಯ ಬಳಿಕ ಮಾತನಾಡಿದ ಎಚ್.ಡಿ.ದೇವೇಗೌಡ ಅವರು, 'ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ನಮ್ಮ ಗುರಿ. ಡ್ಯಾನಿಷ್ ಅಲಿ ಮತ್ತು ಕೆ.ಸಿ.ವೇಣುಗೋಪಾಲ್ ಅವರು ಯಾವ ಕ್ಷೇತ್ರ ಯಾರಿಗೆ? ಎಂಬ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ' ಎಂದು ಹೇಳಿದರು.

ಸವಾಲು ಇನ್ನೂ ಮುಂದಿದೆ
19 ಕ್ಷೇತ್ರದಲ್ಲಿ ಕಾಂಗ್ರೆಸ್, 9 ಕ್ಷೇತ್ರದಲ್ಲಿ ಜೆಡಿಎಸ್ ಸ್ಪರ್ಧೆ ಮಾಡಲಿದೆ. ಆದರೆ, ಯಾವ ಕ್ಷೇತ್ರ ಯಾರಿಗೆ? ಎಂಬುದು ಇನ್ನು ಅಂತಿಮಗೊಂಡಿಲ್ಲ. ಮೈಸೂರು, ತುಮಕೂರು, ಚಿತ್ರದುರ್ಗ, ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೆ ಎರಡೂ ಪಕ್ಷಗಳ ಮೇಲೆ ಕಣ್ಣಿಟ್ಟಿವೆ. ಆದ್ದರಿಂದ, ಕ್ಷೇತ್ರ ಹಂಚಿಕೆ ಉಭಯ ಪಕ್ಷಗಳ ಮುಂದಿರುವ ದೊಡ್ಡ ಸವಾಲು ಆಗಿದೆ.

ಮೈತ್ರಿ ಮೇಲೆ ಬಿಜೆಪಿ ಕಣ್ಣು
ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಮೇಲೆ ಕರ್ನಾಟಕದ ಪ್ರತಿಪಕ್ಷ ಬಿಜೆಪಿಯ ಕಣ್ಣಿದೆ. ಯಾವ ಕ್ಷೇತ್ರ ಯಾವ ಪಕ್ಷಕ್ಕೆ ಸೇರುತ್ತದೆ ಎಂಬುದನ್ನು ತಿಳಿದುಕೊಂಡು ಅಭ್ಯರ್ಥಿ ಆಯ್ಕೆಯನ್ನು ಅಂತಿಮಗೊಳಿಸಲು ಬಿಜೆಪಿ ಬಯಸಿದೆ. ರಾಜ್ಯದ ಈ ಬಾರಿಯ ಚುನಾವಣೆ ಬಿಜೆಪಿ ಮತ್ತು ಕಾಂಗ್ರೆಸ್-ಜೆಡಿಎಸ್ ಮೈತ್ರಿ ನಡುವಿನ ಹೋರಾಟವಾಗಲಿದೆ.

2014ರ ಫಲಿತಾಂಶ
2014ರ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಮೈತ್ರಿ ಮಾಡಿಕೊಳ್ಳದೇ ಮೂರು ಪಕ್ಷಗಳು ಕಣಕ್ಕಿಳಿದಿದ್ದರು. ಬಿಜೆಪಿ 17, ಕಾಂಗ್ರೆಸ್ 9 ಮತ್ತು ಜೆಡಿಎಸ್ 2 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದವು. ಈ ಬಾರಿ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಮಾಡಿಕೊಂಡು ಚುನಾವಣಾ ಕಣಕ್ಕಿಳಿಯುತ್ತಿವೆ.












Click it and Unblock the Notifications