BJP-JDS Alliance: ಚುನಾವಣೆ ಹತ್ತಿರ ಬಂದರೂ ಇನ್ನೂ ಸವಾಲುಗಳನ್ನು ಎದುರಿಸಬೇಕಿದೆ ಬಿಜೆಪಿ-ಜೆಡಿಎಸ್ ಮೈತ್ರಿ
ಬೆಂಗಳೂರು, ಏಪ್ರಿಲ್. 08: ಬಿಜೆಪಿ-ಜೆಡಿಎಸ್ ಮೈತ್ರಿಯಲ್ಲಿ ಲೋಕಸಭಾ ಚುನಾವಣೆಯ ಸೀಟು ಹಂಚಿಕೆ, ಅಭ್ಯರ್ಥಿ ಘೋಷಣೆಗಳಿಂದ ಉಂಟಾದ ಅಸಮಾಧಾನ ಕೆಲ ಮಟ್ಟಿಗೆ ಸರಿಯಾಗಿದೆ ಎಂದು ಕಾಣಿಸುತ್ತಿದೆ. ಆದರೆ, ನಿಜಕ್ಕೂ ಸಾಧ್ಯವಾಗಿದೆಯೇ ಎಂದು ತಳಮಟ್ಟದಲ್ಲಿ ನೋಡಿದರೇ ಖಂಡಿತ ಇಲ್ಲ. ಅಸಮಾಧಾನ, ಹೊಂದಾಣಿಕೆಯ ಕೊರೆತೆ ಸ್ಪಷ್ಟವಾಗಿ ಕಾಣಿಸುತ್ತಿದೆ.
ಎಲ್ಲರನ್ನು ಹತೋಟಿಗೆ ತರುವ ಪ್ರಯತ್ನಗಳು ನಡೆಯುತ್ತಲೇ ಇವೆ. ಆದರೆ ಜೆಡಿಎಸ್‌ನ ಪ್ರಮುಖ ಕ್ಷೇತ್ರವಾದ ಹಾಸನದಲ್ಲಿಯೇ ಮುಖಕ್ಕೆ ರಾಚುವಂತೆ ಭಿನ್ನಾಭಿಪ್ರಾಯ ಎದ್ದು ಕಾಣಿಸುತ್ತಿದೆ. ಕಳೆದ ಕೆಲವು ದಿನಗಳಲ್ಲಿ, ಮೈತ್ರಿಕೂಟವು ಉನ್ನತ ಮಟ್ಟದಲ್ಲಿ ಮಾತ್ರವಲ್ಲದೆ ತಳ ಮಟ್ಟದಲ್ಲಿಯೂ ಒಂದಾಗಿ ಕೆಲಸ ಮಾಡಲು ಹಲವು ಕಸರತ್ತುಗಳನ್ನು ಮಾಡುತ್ತಿದೆ. ಕಾಂಗ್ರೆಸ್ ವಿರುದ್ಧ ಗೆಲ್ಲಬೇಕು ಎಂದು ಪಣತೊಟ್ಟಿದೆ.

ಕಳೆದ ವಾರ ಬೆಂಗಳೂರಿನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ನೇತೃತ್ವದಲ್ಲಿ ನಡೆದ ಬಿಜೆಪಿ-ಜೆಡಿಎಸ್ ನಾಯಕರ ಸಭೆಯಲ್ಲಿ ಮೈತ್ರಿ ಪಾಲುದಾರರ ನಡುವೆ ಉತ್ತಮ ಹೊಂದಾಣಿಕೆ ಅತ್ಯಗತ್ಯ ಎಂಬುದನ್ನು ಒತ್ತಿ ಹೇಳಲಾಗಿದೆ. ಸಭೆಯ ನಂತರ, ಅವರು ಎರಡೂ ಪಕ್ಷಗಳ ಕಾರ್ಯಕರ್ತರನ್ನು ಒಟ್ಟುಗೂಡಿಸಲು ಏಪ್ರಿಲ್ 10 ಮತ್ತು 11 ರಂದು ರಾಜ್ಯದ 58,000 ಬೂತ್‌ಗಳಲ್ಲಿ ಬಿಜೆಪಿ ಸಭೆಗಳಲ್ಲಿ ಜೆಡಿಎಸ್ ಕಾರ್ಯಕರ್ತರು ಸಹ ಭಾಗವಹಿಸಲಿದ್ದಾರೆ.
ತಾವು ಒಟ್ಟಾಗಿ ಇದ್ದೇವೆ ಎಂದು ತೋರಿಸಲು ಹಲವು ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್‌ನ ಪ್ರಮುಖ ನಾಯಕರು ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಮಂಡ್ಯದಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಪಕ್ಷದ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ವೇಳೆ ಜೊತೆಗಿದ್ದರು.

ಮೈಸೂರು ಮತ್ತು ರಾಜ್ಯಾದ್ಯಂತ ಎಲ್ಲಾ ಲೋಕಸಭಾ ಕ್ಷೇತ್ರಗಳ ಕಾರ್ಯಕರ್ತರಿಗೆ ಒಗ್ಗಟ್ಟಿನ ಸಂದೇಶವನ್ನು ನೀಡಲು ಇದು ಉತ್ತಮ ರಣತಂತ್ರ. ಆದರೆ, ಪಕ್ಕದ ಹಾಸನದಲ್ಲಿ ಅದೇ ಒಗ್ಗಟ್ಟು ಕಾಣಿಸಲಿಲ್ಲ. ಸ್ಥಳೀಯ ಬಿಜೆಪಿ ಮುಖಂಡ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ನಾಮಪತ್ರ ಸಲ್ಲಿಕೆ ಪ್ರಕ್ರಿಯೆಯಿಂದ ದೂರ ಉಳಿದಿದ್ದು, ಅಸಮಾಧಾನ ಹೊರಹಾಕಿದ್ದಾರೆ.
ಜೆಡಿಎಸ್ ಹಾಸನ, ಕೋಲಾರ ಮತ್ತು ಮಂಡ್ಯ ಮೂರು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ. ಮೂರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲ ಅಗತ್ಯವಿದ್ದರೂ, ಹಾಸನದಲ್ಲಿ ಜೆಡಿಎಸ್‌ಗೆ ಕಾಂಗ್ರೆಸ್‌ನಿಂದ ಕಠಿಣ ಸ್ಪರ್ಧೆ ನೀಡುತ್ತಿದೆ. ಕೋಲಾರದಲ್ಲಿ ಸ್ಥಳೀಯ ಕಾಂಗ್ರೆಸ್ ನಾಯಕರ ನಡುವಿನ ಆಂತರಿಕ ಭಿನ್ನಾಭಿಪ್ರಾಯವು ಜೆಡಿಎಸ್‌ಗೆ ಸಹಾಯ ಮಾಡುವ ಸಾಧ್ಯತೆಯಿದೆ. ಇನ್ನು ಮಂಡ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸುಮಲತಾ ಅಂಬರೀಶ್ ಔಪಚಾರಿಕವಾಗಿ ಬಿಜೆಪಿಗೆ ಸೇರ್ಪಡೆಯಾಗುವುದರಿಂದ ಜೆಡಿಎಸ್ ನಿರಾಳವಾಗಿದೆ.
ಇನ್ನು, ರಾಜಕೀಯ ವಿಶ್ಲೇಷಕರ ಪ್ರಕಾರ ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಗಿಂತ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಮೈತ್ರಿ ಮತಗಳ ವರ್ಗಾವಣೆಗೆ ಕಷ್ಟವಾಗುವುದಿಲ್ಲ ಎಂದು ಭಾವಿಸುತ್ತಾರೆ. 2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಒಟ್ಟಾಗಿ ಚುನಾವಣೆ ಎದುರಿಸಿದಾಗ ಅವರ ಮತಗಳು ಪರಸ್ಪರ ವರ್ಗಾವಣೆಯಾಗಿರಲಿಲ್ಲ. ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಸೇರಿದಂತೆ ಹಲವು ಪ್ರಮುಖ ಅಭ್ಯರ್ಥಿಗಳ ಸೋಲಿಗೆ ಈ ಮೈತ್ರಿ ಕಾರಣವಾಗಿತ್ತು. ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ 25 ಸ್ಥಾನಗಳು ಬಿಜೆಪಿ ಪಾಲಾದವು.
ಈಗ, ಬೂತ್ ಮಟ್ಟದಲ್ಲಿಯೂ ತನ್ನ ಸಂಘಟನಾ ರಚನೆ ಮತ್ತು ಕಾರ್ಯನಿರ್ವಹಣೆಯನ್ನು ಉತ್ತಮವಾಗಿ ಮಾಡಿದರೇ, ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಮತಗಳು ಜೆಡಿಎಸ್‌ಗೆ ವರ್ಗಾಯಿಸುವುದು ಬಿಜೆಪಿಗೆ ಕಷ್ಟವಾಗುವುದಿಲ್ಲ. ಜೆಡಿಎಸ್ ತನ್ನ ಕಾರ್ಯಕರ್ತರಿಗೆ ಮತ್ತು ಮುಖ್ಯವಾಗಿ ತನ್ನ ಬೆಂಬಲಿಗರಿಗೆ ಈ ಮೆಸೇಜ್ ನೀಡಬೇಕಿದೆ.












Click it and Unblock the Notifications