ಲೋಕಸಭೆ ಚುನಾವಣೆ ನೀತಿ ಸಂಹಿತೆ: ಡಿಜಿಟಲ್ ವಹಿವಾಟು ನಿಯಮ
ಬೆಂಗಳೂರು, ಮಾರ್ಚ್ 21: ಲೋಕಸಭೆ ಚುನಾವಣೆ 2024ರ ವೇಳಾಪಟ್ಟಿ ಘೋಷಣೆಯಾಗಿದೆ. ಕರ್ನಾಟಕ 28 ಕ್ಷೇತ್ರಗಳಿಗೆ ಏಪ್ರಿಲ್ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಜೂನ್ 4ರಂದು ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಮಾರ್ಚ್ 16ರಂದು ಚುನಾವಣೆ ವೇಳಾಪಟ್ಟಿ ಘೋಷಣೆಯಾಗುತ್ತಿದ್ದಂತೆಯೇ ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಗೆ ಬಂದಿದೆ. ಈ ಹಿನ್ನಲೆಯಲ್ಲಿ ಹಣದ ವಹಿವಾಟಿನ ಮೇಲೆ ಆಯೋಗ ನಿಗಾ ವಹಿಸಿದೆ.

ಈಗಾಗಲೇ ಜಿಲ್ಲಾ ಚುನಾವಣಾಧಿಕಾರಿಗಳು ಬ್ಯಾಂಕ್‌ಗಳ ಜೊತೆ ಸಭೆಯನ್ನು ನಡೆಸಿ ಅನುಮಾನಸ್ಪದವಾಗಿ ನಡೆಯುವ ವ್ಯವಹಾರಗಳ ಬಗ್ಗೆ ಮಾಹಿತಿ ನೀಡಲು ಮನವಿ ಮಾಡಿದ್ದಾರೆ. ಡಿಜಿಟಲ್ ವಹಿವಾಟು ಮೇಲೆಯೂ ಸಹ ಗಮನ ನೀಡಲಾಗುತ್ತದೆ.
ಡಿಜಿಟಲ್ ವಹಿವಾಟು ನಿಯಮ; ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಹಿನ್ನಲೆಯಲ್ಲಿ ಚೆಕ್ ಪೋಸ್ಟ್‌ಗಳನ್ನು ಸ್ಥಾಪನೆ ಮಾಡಲಾಗಿದೆ. ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿ, ಸಿಸಿ ಕ್ಯಾಮರಾ ಅಳವಡಿಕೆ ಮಾಡಲಾಗಿದೆ, ವಾಹನಗಳ ತಪಾಸಣೆಯನ್ನು ನಡೆಸುವ ಮೂಲಕ ಹಣವ ವಹಿವಾಟಿನ ಮೇಲೆ ನಿಗಾ ಇಡಲಾಗಿದೆ.
ಆದರೆ ಡಿಜಿಟಲ್ ಪೇಮೆಂಟ್ ಮೂಲಕ ಮತದಾರರರಿಗೆ ಆಮಿಷ ಒಡ್ಡಿದರೆ ಅದನ್ನು ಪತ್ತೆ ಹಚ್ಚಲು ಬ್ಯಾಂಕ್‌ಗಳ ಸಹಾಯ ಬೇಕು. ಇದಕ್ಕಾಗಿ ಚುನಾವಣಾಧಿಕಾರಿಗಳು ಬ್ಯಾಂಕ್ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದ್ದಾರೆ.
ಡಿಜಿಟಲ್ ವಹಿವಾಟಿಗೆ ಸಹ ನಿಯಮಗಳನ್ನು ರೂಪಿಸಲಾಗಿದೆ. ಯಾವುದೇ ವ್ಯಕ್ತಿ 20 ಜನರ ಖಾತೆಗೆ ಹಣ ವರ್ಗಾವಣೆ ಮಾಡಿದ್ದರೆ ಅದನ್ನು ಸಂಶಯಾಸ್ಪದ ವಹಿವಾಟು ಎಂದು ಪರಿಗಣಸಬೇಕು ಎಂಬ ನಿಯಮವಿದೆ.
ಬ್ಯಾಂಕುಗಳಿಂದ ಪ್ರತಿ ದಿನ ವಹಿವಾಟುಗಳ ವಿವರ ಪಡೆದು ಅದರಲ್ಲಿ ಸಂಶಯಾಸ್ಪದ ವಹಿವಾಟುಗಳು ಕಂಡುಬಂದರೆ ಅಂತಹವರ ಮೇಲೆ ಕಣ್ಣಿಡಲಾಗುತ್ತದೆ. ಇದಕ್ಕೆ ಬ್ಯಾಂಕ್‌ಗಳ ಸಹಕಾರ ಮುಖ್ಯವಾಗಿದೆ.
ಚುನಾವಣಾ ವಿಭಾಗದ ವಿಶೇಷ ಆಯುಕ್ತ ಸೆಲ್ವಮಣಿ ಮಾತನಾಡಿ, "ಬ್ಯಾಂಕ್‌ಗಳಿಂದ ಎಟಿಎಂಗೆ ನಗದು ಸಾಗಣೆ ಮಾಡುವ ಸಿಬ್ಬಂದಿಗಳು ಸರಿಯಾದ ದಾಖಲೆ ಇಟ್ಟುಕೊಂಡು ಚುನಾವಣಾ ಆಯೋಗದ ನಿಯಮಗಳ ಅನುಸಾರ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹಣ ಸಾಗಣೆ ಮಾಡಬೇಕು. ಸರಿಯಾದ ದಾಖಲೆಗಳು ಇಲ್ಲವಾದಲ್ಲಿ ಹಣ ಜಪ್ತಿ ಮಾಡಲಾಗುತ್ತದೆ" ಎಂದು ಹೇಳಿದ್ದಾರೆ.
ಎಲ್ಲಾ ಬ್ಯಾಂಕ್‌ಗಳಿಗೆ ಚುನಾವಣೆ ಕಾರ್ಯಕ್ಕಾಗಿಯೇ ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ. ಒಂದೇ ಖಾತೆಯಿಂದ ಸುಮಾರು ಖಾತೆಗಳಿಗೆ ಹಣ ವರ್ಗಾವಣೆಗೊಂಡರೆ ಅದರ ಮಾಹಿತಿಯನ್ನು ಅಧಿಕಾರಿಗಳು ಆಯೋಗದ ಸಿಬ್ಬಂದಿ ಜೊತೆಗೆ ಹಂಚಿಕೊಳ್ಳಬೇಕು. ಇದನ್ನು ಪರಿಶೀಲಿಸಿ ಆಯೋಗ ಕ್ರಮಗಳನ್ನು ಕೈಗೊಳ್ಳುತ್ತದೆ.
ಯಾವುದೇ ಸೂಚನೆ, ನಿರ್ದೇಶನಗಳು ಇಲ್ಲದೇ ಹಲವಾರು ವ್ಯಕ್ತಿಗಳ ಖಾತೆಗೆ ಒಂದು ಖಾತೆಯಿಂದ ಆರ್‌ಟಿಜಿಎಸ್, ನೆಫ್ಟ್ ಮೂಲಕ ಹಣ ವರ್ಗಾವಣೆ ಮಾಡುವುದು, ಯಾವುದೇ ನಗದು ಠೇವಣಿ, 1 ಲಕ್ಷಕ್ಕಿಂತ ಹೆಚ್ಚು ನಗದು ಹಿಂಪಡೆಯುವುದು ಈ ಮಾದರಿ ವಹಿವಾಟಿನ ಮೇಲೆ ನಿಗಾ ವಹಿಸಲಾಗುತ್ತದೆ.
ನಗದು ಠೇವಣಿ ಅಥವ ಹಣ ವಿತ್ ಡ್ರಾ ಮೊತ್ತವು 10 ಲಕ್ಷಕ್ಕಿಂತ ಹೆಚ್ಚಿದ್ದರೆ ಈ ಕುರಿತ ಮಾಹಿತಿಯನ್ನು ಆಯೋಗ ಆದಾಯ ತೆರಿಗೆ ಇಲಾಖೆಯ ಜೊತೆ ಹಂಚಿಕೊಳ್ಳಲಿದೆ. ಆದಾಯ ತೆರಿಗೆ ಇಲಾಖೆ ನೋಡೆಲ್ ಅಧಿಕಾರಿ ಈ ಕುರಿತು ಮುಂದಿನ ಕ್ರಮಗಳನ್ನು ಕೈಗೊಳ್ಳಲಿದ್ದಾರೆ.
ಮಾದರಿ ನೀತಿ ಸಂಹಿತೆ ಪಾಲನೆಯ ಮೇಲೆ ನಿಗಾ ಇಡಲು ಪ್ರತಿ ಲೋಕಸಭಾ ಕ್ಷೇತ್ರದಲ್ಲಿ ಸಮಿತಿಗಳನ್ನು ರಚನೆ ಮಾಡಲಾಗಿದೆ. ಸೆಕ್ಟರ್ ಅಧಿಕಾರಿಗಳು, ಎಫ್‍ಎಸ್‍ಟಿ ತಂಡಗಳು, ಎಸ್‍ಎಸ್‍ಟಿ ತಂಡಗಳು, ವಿವಿಟಿ ತಂಡಗಳು, ವಿಎಸ್‍ಟಿ ತಂಡಗಳು, ಚುನಾವಣೆ ವೆಚ್ಚ ವೀಕ್ಷಕರು, ಅಕೌಂಟಿಂಗ್ ತಂಡಗಳು ಕಾರ್ಯ ನಿರ್ವಹಣೆ ಮಾಡಲಿವೆ.
ಚುನಾವಣೆಗೆ ಸ್ಪರ್ಧಿಸುವ ಪ್ರತಿ ಅಭ್ಯರ್ಥಿಯೂ ಹೊಸ ಬ್ಯಾಂಕ್ ಖಾತೆಯನ್ನು ತೆರೆಯಬೇಕು. ಚುನಾವಣೆಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ಆ ಖಾತೆಯ ಮೂಲಕವೇ ನಡೆಸಬೇಕು. ನಾಮಪತ್ರಗಳನ್ನು ಸಲ್ಲಿಕೆ ಮಾಡುವ ಸಂದರ್ಭದಲ್ಲಿ ಈ ಖಾತೆಯ ವಿವರಗಳನ್ನು ಆಯೋಗಕ್ಕೆ ನೀಡಬೇಕಿದೆ.











Click it and Unblock the Notifications