ಐಪಿಎಸ್ ಅಧಿಕಾರಿಗಳ ನೇಮಕ; ಕರ್ನಾಟಕ ಸರ್ಕಾರದ ಹೊಸ ಆದೇಶ
ಬೆಂಗಳೂರು, ನವೆಂಬರ್ 15; ಕರ್ನಾಟಕ ಸರ್ಕಾರ ಐಪಿಎಸ್ ಅಧಿಕಾರಿಗಳ ನೇಮಕದಲ್ಲಿ ಬದಲಾವಣೆ ಮಾಡಿದೆ. ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ಹಿನ್ನಲೆಯಲ್ಲಿ ಐಪಿಎಸ್ ಅಧಿಕಾರಿಗಳನ್ನು ನೋಡಲ್ ಅಧಿಕಾರಿಗಳಾಗಿ ನೇಮಕ ಮಾಡಿದೆ.
ಐಪಿಎಸ್ ಅಧಿಕಾರಿಗಳ ನೇಮಕದ ಬಗ್ಗೆ ಸರ್ಕಾರ ಆದೇಶ ಹೊರಡಿಸಿದೆ. ಮೂವರು ಐಪಿಎಸ್ ಅಧಿಕಾರಿಗಳನ್ನು ಲೋಕಸಭೆ, ವಿಧಾನಸಭೆ ಚುನಾವಣೆಯ ನೋಡಲ್ ಅಧಿಕಾರಿಗಳಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದೆ.

ಮೂವರು ಐಪಿಎಸ್ ಅಧಿಕಾರಿಗಳು ಈಗಿರುವ ಹುದ್ದೆಯ ಜೊತೆಗೆ ಮುಂದಿನ ಆದೇಶದ ತನಕ ರಾಜ್ಯದಲ್ಲಿ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಗೆ ನೋಡಲ್ ಅಧಿಕಾರಿಗಳಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ ಎಂದು ಆದೇಶ ಹೇಳಿದೆ.
ಯಾವ-ಯಾವ ಅಧಿಕಾರಿಗಳು?; ಆರ್. ಹಿತೇಂದ್ರ, ಐಪಿಎಸ್ (ಕೆಎನ್: 1996) ಎಡಿಜಿಪಿ (ಕಾನೂನು ಮತ್ತು ಸುವ್ಯವಸ್ಥೆ) ಅವರನ್ನು ಕರ್ನಾಟಕದ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ರಾಜ್ಯ ನೋಡಲ್ ಅಧಿಕಾರಿ (SPNO) ಆಗಿ ಅವರ ಈಗಿರುವ ಹುದ್ದೆಗೆ ಹೆಚ್ಚುವರಿಯಾಗಿ ನೇಮಕ ಮಾಡಿದೆ. ತಕ್ಷಣದಿಂದ ಜಾರಿಗೆ ಬರುವಂತೆ 3 ವರ್ಷಗಳಿಗೆ ಈ ನೇಮಕಾತಿ ನಡೆದಿದೆ.
ಸಂದೀಪ್ ಪಾಟೀಲ್, ಐಪಿಎಸ್. ಐಜಿಪಿ, ಕೆಎಸ್ಆರ್‌ಪಿ ಬೆಂಗಳೂರು. ಕರ್ನಾಟಕದ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ರಾಜ್ಯ CARF ನೋಡಲ್ ಅಧಿಕಾರಿಯಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಿದೆ. ರಾಜ್ಯ ನೋಡಲ್ ಅಧಿಕಾರಿಗೆ ಮುಂದಿನ ಆದೇಶದ ತನಕ ಸಹಾಯಕರಾಗಿ ಇವರು ಈಗಿರುವ ಹುದ್ದೆಯ ಜೊತೆಗೆ ಹೆಚ್ಚುವರಿಯಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ದೇವಜ್ಯೋತಿ ರೇ, ಐಪಿಎಸ್. ಐಜಿಪಿ ಜಿ & ಹೆಚ್ ಆರ್ ಬೆಂಗಳೂರು. ಕರ್ನಾಟಕದ ಮುಂಬರುವ ಲೋಕಸಭೆ, ವಿಧಾನಸಭೆ ಚುನಾವಣೆಯ ನೋಡಲ್ ಅಧಿಕಾರಿ (ವೆಚ್ಚ) ಆಗಿ ನೇಮಕ ಮಾಡಲಾಗಿದೆ. ಇವರು ಈಗಿರುವ ಹುದ್ದೆಯ ಜೊತೆಗೆ ಮುಂದಿನ ಆದೇಶದ ತನಕ ರಾಜ್ಯ ನೋಡಲ್ ಅಧಿಕಾರಿಗೆ ಸಹಾಯಕರಾಗಿ ಕಾರ್ಯ ನಿರ್ವಹಣೆ ಮಾಡಲಿದ್ದಾರೆ.
ಕರ್ನಾಟಕ ಸರ್ಕಾರ ಆದೇಶದಲ್ಲಿ ರಾಜ್ಯ ನೋಡಲ್ ಅಧಿಕಾರಿ, ಸಿಎಆರ್‌ಎಫ್ ಮತ್ತು ನೋಡಲ್ ಅಧಿಕಾರಿ (ವೆಚ್ಚ) ಇವರ ಕಾರ್ಯ ಮತ್ತು ಜವಾಬ್ದಾರಿಗಳು ಭಾರತದ ಚುನಾವಣಾ ಆಯೋಗದ 7/6/2023ರ ಪತ್ರದಲ್ಲಿ ಉಲ್ಲೇಖಿಸಿದಂತೆ ಇರುತ್ತದೆ ಎಂದು ಹೇಳಿದೆ.
ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಪೂರ್ಣಗೊಂಡಿದೆ. ಸದ್ಯಕ್ಕೆ ಯಾವುದೇ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಇಲ್ಲ. ಲೋಕಸಭಾ ಚುನಾವಣೆ 2024ರಲ್ಲಿ ನಡೆಯಲಿದೆ.












Click it and Unblock the Notifications