ಆರ್ಯವೈಶ್ಯ ಅಭಿವೃದ್ದಿ ನಿಗಮದಿಂದ ಸಾಲ; ಅರ್ಹತೆ, ವಿವರಗಳು
ಬೆಂಗಳೂರು, ಆಗಸ್ಟ್ 28; ಕರ್ನಾಟಕ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮದಿಂದ 2023-24ನೇ ಸಾಲಿಗೆ ವಿವಿಧ ಯೋಜನೆಗಳಡಿ ಸಾಲ ಸೌಲಭ್ಯವನ್ನು ನೀಡಲು ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಮತ್ತು ಅರ್ಹರು ಸೆಪ್ಟೆಂಬರ್ 18ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಅರ್ಜಿ ಸಲ್ಲಿಕೆ ಮಾಡುವವರು ಸಾಮಾನ್ಯ ವರ್ಗದಲ್ಲಿ ಆರ್ಯ ವೈಶ್ಯ ಸಮುದಾಯಕ್ಕೆ ಸೇರಿರಬೇಕು. ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನಮೂನೆ-ಜಿ ಯಲ್ಲಿ ಪಡೆದಿರಬೇಕು. ಅರ್ಜಿದಾರರ ಆಧಾರ್ ಸಂಖ್ಯೆಗೆ ಮೊಬೈಲ್ ನಂಬರ್ ಜೋಡಣೆಯಾಗಿರಬೇಕು.

ಬ್ಯಾಂಕ್ ಖಾತೆಗೆ ಆಧಾರ್ ನಂಬರ್ ಸೀಡ್ ಮಾಡಿಸಿರಬೇಕು. ಅಭ್ಯರ್ಥಿಗಳನ್ನು ಆಯ್ಕೆ ಮಾಡುವಾಗ ಮಹಿಳೆಯರಿಗೆ ಶೇ. 33, ವಿಕಲಚೇತನರಿಗೆ ಶೇ.5 ಹಾಗೂ ತೃತೀಯ ಲಿಂಗಗಳಿಗೆ ಶೇ.5 ಮೀಸಲಾತಿ ಇರಿಸಲಾಗಿದೆ ಎಂದು ನಿಗಮದ ಪ್ರಕಟಣೆ ಹೇಳಿದೆ.
ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮ ಸ್ವಯಂ ಉದ್ಯೋಗಕ್ಕೆ, ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ, ವಾಸವಿ ಜಲಶಕ್ತಿ ಯೋಜನೆ, ಅರಿವು ಶೈಕ್ಷಣಿಕ ಸಾಲ ಯೋಜನೆಗಳ ಅನ್ವಯ ಸಾಲವನ್ನು ನೀಡಲಿದೆ. ಸಾಲದ ಯೋಜನೆಗಳು, ವಿವರ, ಅರ್ಹತೆಗಳು ಇಲ್ಲಿವೆ.
ಸ್ವಯಂ ಉದ್ಯೋಗ ನೇರ ಸಾಲ ಯೋಜನೆಗೆ ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ. 3,00,000ಗಳ ಮಿತಿಯೊಳಗಿರಬೇಕು. ಅರ್ಜಿದಾರರು 18 ರಿಂದ 45 ವರ್ಷದ ಒಳಗಿನವರಾಗಿರಬೇಕು.
ಈ ಯೋಜನೆಯಲ್ಲಿ ಕನಿಷ್ಠ ರೂ. 50,000ಗಳಿಂದ ಗರಿಷ್ಠ ರೂ.1,00,000ಗಳ ಸಾಲ ಒದಗಿಸಲಾಗುವುದು. ಈ ಮೊತ್ತದಲ್ಲಿ ಶೇ.20 ರಷ್ಟು ಸಹಾಯಧನ ಹಾಗೂ ಶೇ.80 ರಷ್ಟು ಸಾಲವನ್ನು ವಾರ್ಷಿಕ ಶೇ. 4ರ ಬಡ್ಡಿದರದಲ್ಲಿ ಮಂಜೂರು ಮಾಡಲಾಗುವುದು. 2 ತಿಂಗಳ ವಿರಾಮ ಅವಧಿ ಇದ್ದು, ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು.
ಆರ್ಯ ವೈಶ್ಯ ಆಹಾರ ವಾಹಿನಿ ಯೋಜನೆ: ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ. 6,00,000ಗಳ ಮಿತಿಯೊಳಗಿರಬೇಕು. ಅರ್ಜಿದಾರರು 21 ವರ್ಷದಿಂದ 55 ವರ್ಷದ ಒಳಗಿನವರಾಗಿರಬೇಕು. ಯೋಜನೆಯಡಿ ಆಹಾರ ವಾಹಿನಿ ಪ್ರಾರಂಭಿಸಲು ಬ್ಯಾಂಕ್/ ಸಹಕಾರಿ ಸಂಘಗಳಿಂದ ಸಾಲ ಪಡೆಯಬೇಕು ಹಾಗೂ ನಿಗಮದಿಂದ ಗರಿಷ್ಠ ರೂ.2,00,000ಗಳ ಸಹಾಯಧನ ವನ್ನು ನೀಡಲಾಗುವುದು.
ವಾಸವಿ ಜಲಶಕ್ತಿ ಯೋಜನೆ: ಯೋಜನೆಯಡಿ 2 ರಿಂದ 5 ಎಕರೆ ಕೃಷಿ ಭೂಮಿ ಹೊಂದಿರುವವರಿಗೆ ನೀರಾವರಿ ಸೌಲಭ್ಯವನ್ನು ಒದಗಿಸಲು ಸಾಲ/ ಸಹಾಯಧನವನ್ನು ನೀಡಲಾಗುವುದು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ. 6,00,000ಗಳ ಮಿತಿಯೊಳಗಿರಬೇಕು. ಅರ್ಜಿದಾರರು 21 ವರ್ಷದಿಂದ 50 ವರ್ಷದ ಒಳಗಿನವರಾಗಿರಬೇಕು. ಯೋಜನೆಯಡಿ ಗರಿಷ್ಠ ರೂ. 2,00,000ಗಳ ಸಾಲವನ್ನು ವಾರ್ಷಿಕ ಶೇ.4ರ ಬಡ್ಡಿದರದಲ್ಲಿ ಒದಗಿಸಲಾಗುವುದು ಹಾಗೂ ವಿದ್ಯುದೀಕರಣಕ್ಕಾಗಿ ರೂ.50,000ಗಳ ಸಹಾಯಧನ ನೀಡಲಾಗುವುದು. 6 ತಿಂಗಳ ವಿರಾಮಾವಧಿಯ ನಂತರ ಸಾಲವನ್ನು 34 ಮಾಸಿಕ ಕಂತುಗಳಲ್ಲಿ ಪಾವತಿಸಬೇಕು.
ಅರಿವು ಶೈಕ್ಷಣಿಕ ಸಾಲ ಯೋಜನೆಯಡಿ ಸಿ.ಇ.ಟಿ/ ಎನ್.ಇ.ಇ.ಟಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ವೃತ್ತಿಪರ ಕೋರ್ಸ್ ಹಾಗೂ ಪಿ.ಹೆಚ್.ಡಿ.ನಲ್ಲಿ ವ್ಯಾಸಂಗ ಮಾಡುವ ಆರ್ಯ ವೈಶ್ಯ ವಿದ್ಯಾರ್ಥಿಗಳಿಗೆ ಶೇ.2ರ ಬಡ್ಡಿದರದಲ್ಲಿ ವಾರ್ಷಿಕ ರೂ.1,00,000ಗಳ ಶೈಕ್ಷಣಿಕ ಸಾಲ ನೀಡಲಾಗುವುದು.
ವ್ಯಾಸಂಗ ಪೂರ್ಣಗೊಂಡ ನಂತರ 4 ತಿಂಗಳ ವಿರಾಮಾವಧಿ ಇರುತ್ತದೆ. ನಂತರ ಸಾಲವನ್ನು 36 ಮಾಸಿಕ ಕಂತುಗಳಲ್ಲಿ ಮರುಪಾವತಿಸಬೇಕು. ಅರ್ಜಿದಾರರು 18 ವರ್ಷದಿಂದ 35 ವರ್ಷದ ಒಳಗಿನವರಾಗಿರಬೇಕು. ಅರ್ಜಿದಾರರ ಕುಟುಂಬದ ವಾರ್ಷಿಕ ವರಮಾನ ಗ್ರಾಮಾಂತರ ಮತ್ತು ನಗರ ಪ್ರದೇಶದವರಿಗೆ ರೂ. 6,00,000ಗಳ ಮಿತಿಯೊಳಗಿರಬೇಕು. ಈ ಯೋಜನೆಗೆ ಸಂಬಂಧಪಟ್ಟಂತೆ ಸಿಇಟಿ ಪರೀಕ್ಷೆಯ ಕೌನ್ಸಿಲಿಂಗ್ ಮುಗಿದ ನಂತರ ಅರ್ಜಿಯನ್ನು ಸ್ವೀಕರಿಸಲಾಗುವುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ನಿಗಮದ ಸಹಾಯವಾಣಿ 9448451111, 08182-229634 ಅನ್ನು ಸಂಪರ್ಕಿಸಬಹುದು. ಅರ್ಜಿಯನ್ನು ವೆಬ್‍ಸೈಟ್ kacdc.karnataka.gov.in ಮೂಲಕ ಸಲ್ಲಿಸಬೇಕು.












Click it and Unblock the Notifications