ಕುತೂಹಲ ಮೂಡಿಸಿದ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಪತ್ರ!
ಬೆಂಗಳೂರು, ಡಿ 06: ಕೇಂದ್ರ ಸರ್ಕಾರದ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೆಹಲಿಯಲ್ಲಿ ರೈತರ ಪ್ರತಿಭಟನೆ 11ನೇ ದಿನಕ್ಕೆ ಕಾಲಿಟ್ಟಿದೆ. ಇದೇ ಸಂದರ್ಭದಲ್ಲಿ ಭೂ ಸುಧಾರಣಾ ಕಾಯ್ದೆ ತಿದ್ದುಪಡಿಗೆ ಬಿಜೆಪಿಯಲ್ಲಿಯೇ ಒಮ್ಮತವಿಲ್ಲವಾ? ಎಂಬ ಸಂಶಯ ಎದುರಾಗಿದೆ. ಅದಕ್ಕೆ ಕಾರಣವಾಗಿರುವುದು ರಾಜ್ಯ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಗಳು. ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಿದೆ. ಅದಕ್ಕೆ ಪ್ರತ್ಯುತ್ತರ ಎಂಬಂತೆ ರಾಜ್ಯ ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ. ಸಭಾಪತಿಗಳ ಪತ್ರ ಇದೀಗ ಕುತೂಹಲಕ್ಕೆ ಕಾರಣವಾಗಿದೆ.
ಸಭಾಪತಿಗಳು ಸುರೇಶ್ ಕುಮಾರ್ ಅವರಿಗೆ ಬರೆದಿರುವ ಪತ್ರದಲ್ಲಿ ಭೂ ಸುಧಾರಣಾ ಕಾಯ್ದೆ ಅಂಗೀಕಾರವಾಗದೇ ಇರುವುದಕ್ಕೆ ಕಾರಣಗಳನ್ನು ಕೊಟ್ಟಿದ್ದಾರೆ. ಜೊತೆಗೆ ಪರಿಷತ್ ಕಲಾಪವನ್ನು ಅನಿರ್ಧಿಷ್ಟಾವಧಿಗೆ ಮುಂದೂಡಲು ಕಾರಣವಾಗಿದ್ದ ಅಂಶಗಳನ್ನೂ ವಿವರಿಸಿದ್ದಾರೆ. ಬಿಜೆಪಿ ಸರ್ಕಾರದ ಮಹತ್ವಾಕಾಂಕ್ಷಿ ಭೂ ಸುಧಾರಣಾ ತಿದ್ದುಪಡಿ ವಿಧೇಯಕದ ಮೇಲೆ ಚರ್ಚೆಯ ಸಂದರ್ಭ ನಡೆದಿದ್ದ ಘಟನಾವಳಿಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ಬರೆದಿರುವ ಪತ್ರದ ಪ್ರತಿ 'ಒನ್‌ಇಂಡಿಯಾ ಕನ್ನಡ'ಕ್ಕೆ ಲಭ್ಯವಾಗಿದೆ.

ಬೇಸರದಿಂದ ಮನೆ ಕಡೆಗೆ ಹೊರಟೆ
ಭೂ ಸುಧಾರಣಾ ಕಾಯ್ದೆಗೆ ಅಂಗೀಕಾರ ಪಡೆದುಕೊಳ್ಳದೆ ಪರಿಷತ್ ಕಲಾಪ ಮುಂದೂಡಿದ್ದಕ್ಕೆ ಸಚಿವ ಸುರೇಶ್ ಕುಮಾರ್ ಅವರು ಟ್ವೀಟ್ ಮೂಲಕ ಆಕ್ಷೇಪ ವ್ಯಕ್ತಪಡಿಸಿದ್ದರು. ವಿಧಾನ ಪರಿಷತ್‌ನಲ್ಲಿ ಮಧ್ಯರಾತ್ರಿ 12.40ರ ವರೆಗೆ ಧಾರಾಳವಾಗಿ ಚರ್ಚೆಗೆ ಅವಕಾಶ ಮಾಡಿ ಕೊಟ್ಟು ವಿಧೇಯಕವನ್ನು ಮತಕ್ಕೆ ಹಾಕದೆ ರಾಷ್ಟ್ರಗೀತೆಯ ಮೂಲಕ ದಿಢೀರ್ ಸದನವನ್ನು ಮುಂದೂಡಿದ ಸಭಾಪತಿಗಳ ನಡೆ ನಿಗೂಢವೆಂದು ಹೇಳಬೇಕು. ಇದೀಗ ಬೇಸರದಿಂದಲೇ ಮನೆ ಕಡೆ ಹೊರಟಿದ್ದೇನೆ. ಅಂಪೈರ್ ಎಂದೂ ಹೀಗಿರಬಾರದು ಎಂದು ಪ್ರತಾಪ್ ಚಂದ್ರ ಶೆಟ್ಟಿ ಅವರ ನಡೆಯ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದರು.

ಸದನ ಮುಂದೂಡಲು ಒತ್ತಾಯ
ಪರಿಷತ್ ಕಲಾಪ ಮುಂದೂಡಲು ಬಿಜೆಪಿ ಸದಸ್ಯರೇ ಕಾರಣ ಎಂಬ ಕುತೂಹಲಕಾರಿ ಅಂಶವನ್ನು ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಸಚಿವ ಸುರೇಶ್ ಕುಮಾರ್ ಅವರಿಗೆ ಬರೆದ ಪತ್ರದಲ್ಲಿ ದಾಖಲೆ ಸಹಿತ ಉಲ್ಲೇಖಿಸಿದ್ದಾರೆ. ಪರಿಷತ್ ಸಭಾನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರ ಸೂಚನೆ ಹಾಗೂ ಇತರ ಬಿಜೆಪಿ ಸದಸ್ಯರ ಒತ್ತಾಯದ ಮೇರೆಗೆ ಕಲಾಪವನ್ನು ಅನಿರ್ದಿಷ್ಟಾವಧಿ ಮುಂದೂಡಲಾಗಿದೆ ಎಂದು ಪ್ರತಾಪ್ ಚಂದ್ರ ಶೆಟ್ಟಿ ಅವರು ವಿವರಿಸಿದ್ದಾರೆ.

ನಡಾವಳಿ ಲಗತ್ತಿಸಿ ಸ್ಪಷ್ಟನೆ
ಸಚಿವ ಸುರೇಶ್ ಕುಮಾರ್ ಅವರು ಮಾಡಿದ್ದ ಪರೋಕ್ಷ ಆರೋಪಕ್ಕೆ ಪರಿಷತ್ ಕಲಾಪದ ನಡಾವಳಿಯೊಂದಿಗೆ ಸ್ಪಷ್ಟೀಕರಣ ನೀಡಿದ್ದಾರೆ. ಪರಿಷತ್ ಸಭಾ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಬಿಜೆಪಿ ಸದಸ್ಯರಾದ ರಘುನಾಥ್ ಮಲ್ಕಾಪುರೆ, ವೈ.ಎ. ನಾರಾಯಣಸ್ವಾಮಿ ಸೇರಿದಂತೆ ಬಿಜೆಪಿಯ ಹಲವು ಸದಸ್ಯರು ಒತ್ತಾಯ ಮಾಡಿದ್ದರು ಎಂದು ತಿಳಿಸಿದ್ದಾರೆ.
ಭೂಸುಧಾರಣಾ ತಿದ್ದುಪಡಿ ವಿಧೇಯಕ ಅನುಮೋದನೆ ಪಡೆದುಕೊಳ್ಳುವದನ್ನು ತಪ್ಪಿಸಲು ಸಭಾಪತಿ ಯವರು ಅನಿರ್ದಿಷ್ಟಾವಧಿ ಕಲಾಪ ಮುಂದೂಡಿದರು ಎಂಬ ಆರೋಪ ಶುದ್ಧ ಸುಳ್ಳು. ವಿಧೇಯಕದ ಮೇಲೆ ಚೆರ್ಚೆ ನಡೆಯುತ್ತಿದ್ದಾಗ ಸಮಯ ಮಧ್ಯರಾತ್ರಿ 1 ಗಂಟೆಯಾಗಿತ್ತು. ಅಲ್ಲದೆ ವಿಧಾನಸಭೆ ಕಲಾಪ ಅನಿರ್ಧಿಷ್ಟಾವಧಿಗೆ ಮುಂದೂಡಿಕೆಯಾಗಿತ್ತು ಎಂಬುದನ್ನು ಬಿಜೆಪಿ ಸದಸ್ಯರೇ ಪದೆ ಪದೇ ಉಲ್ಲೇಖಿಸಿ ಸದನ ಮುಂದೂಡಲು ಒತ್ತಾಯಿಸಿದ್ದರು ಎಂದು ಸಭಾಪತಿ ಪ್ರತಾಪ್ ಚಂದ್ರ ಶೆಟ್ಟಿ ಅವರು ಬಹಿರಂಗಪಡಿಸಿದ್ದಾರೆ.
Recommended Video

ಸಭಾಪತಿಗಳ ವಿರುದ್ಧ ಅವಿಶ್ವಾಸ
ಭೂ ಸುಧಾರಣಾ ವಿಧೇಯಕದ ಮೇಲೆ ಮೂವರು ಸದಸ್ಯರು ಮಾತ್ರ ಚೆರ್ಚೆ ನಡೆಸಿದ್ದು ಉಳಿದ ಸದಸ್ಯರಿಗೆ ಚೆರ್ಚೆಗೆ ಅವಕಾಶ ನೀಡದಿರುವುದು ಸಮಂಜಸವಲ್ಲ. ಅಲ್ಲದೆ ಸಮಯ ಮೀರಿರುವುದು, ಸಭಾ ನಾಯಕರು ಹಾಗೂ ಸಭಾ ಸದಸ್ಯರ ಅಭಿಪ್ರಾಯ ಪಡೆದ ಬಳಿಕವೇ ಸದನ ಮುಂದೂಡುವ ನಿರ್ಧಾರ ಕೈಗೊಳ್ಳಲಾಗಿದೆ. ಸಭಾಪತಿ ಹುದ್ದೆಯು ಪಕ್ಷಾತೀತವಾಗಿದ್ದು ಎಂದು ಪ್ರತಾಪ್ ಚಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ. ಕಳೆದ ಮುಂಗಾರು ಅಧಿವೇಶನದಲ್ಲಿ ನಡೆದ ಘಟನಾವಳಿಯನ್ನು ಮುಂದಿಟ್ಟುಕೊಂಡು ಸಭಾಪತಿ ಅವರ ವಿರುದ್ಧ ಬಿಜೆಪಿ ಇದೀಗ ಅವಿಶ್ವಾಸ ನಿರ್ಣಯ ಮಂಡಿಸಿದೆ.












Click it and Unblock the Notifications