E Swathu: ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್: ಇ-ಸ್ವತ್ತು ಕುರಿತು ಬಿಗ್ ಅಪ್‌ಡೇಟ್ ಕೊಟ್ಟ ಪ್ರಿಯಾಂಕ್ ಖರ್ಗೆ
ಬೆಂಗಳೂರು, ಅಕ್ಟೋಬರ್ 18: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ಕ್ಕೆ ತಿದ್ದುಪಡಿ ತರುವ ಮೂಲಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿತರಿಸಲಾಗುವ ನಿರಾಕ್ಷೇಪಣ (NOC) ಪರವಾನಗಿ, ತೆರಿಗೆಗಳು, ಶುಲ್ಕ ಹಾಗೂ ದರಗಳನ್ನು ವೈಜ್ಞಾನಿಕವಾಗಿ ನಿಗದಿಮಾಡಿದ್ದು, ಆಸ್ತಿಗಳಿಗೆ ಇ-ಸ್ವತ್ತು ವಿತರಿಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಈ ನಿಯಮಗಳ ಜಾರಿಯಿಂದ 95,75,935 ಆಸ್ತಿಗಳಿಗೆ ಆಸ್ತಿ ಪ್ರಮಾಣ ಪತ್ರ ನೀಡಲು ಅವಕಾಶ ಕಲ್ಪಿಸಲಾಗುತ್ತಿದೆ ಎಂಬ ಮಹತ್ತರ ಮಾಹಿತಿಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಹಂಚಿಕೊಂಡಿದ್ದಾರೆ. ನಿಯಮಗಳಂತೆ ಹದಿನೈದು ದಿನಗಳೊಳಗಾಗಿ ತಂತ್ರಾಂಶದಲ್ಲಿ ತಾಂತ್ರಿಕ ಬದಲಾವಣೆಗಳನ್ನು ತಂದು ಗ್ರಾಮೀಣ ಜನರಿಗೆ ಸೌಲಭ್ಯವನ್ನು ಒದಗಿಸಲಾಗುವುದು ಎಂದು ಪ್ರಿಯಾಂಕ್ ಖರ್ಗೆ ಅವರು ತಿಳಿಸಿದ್ದಾರೆ.

ನೂತನ ನಿಯಮಗಳಲ್ಲಿ ತೆರಿಗೆ ಲೆಕ್ಕಚಾರ ಪ್ರಕ್ರಿಯೆಯನ್ನು ಸರಳೀಕರಣಗೊಳಿಸಿದ್ದು, ಇ-ಸ್ವತ್ತು ನಮೂನೆ ವಿತರಿಸಲು ನಿಗದಿತ ಕಾಲಾವಧಿಯನ್ನು 45 ದಿನಗಳಿಂದ 15 ದಿನಗಳಿಗೆ ಕಡಿತಗೊಳಿಸಲಾಗಿದೆ. ನಿಗದಿತ ಅವಧಿಯಲ್ಲಿ ಸಂಬಂಧಿಸಿದ ಅಧಿಕಾರಿಗಳು ಅನುಮೋದನೆ ನೀಡದಿದ್ದಲ್ಲಿ ಸ್ವಂಚಾಲಿತ ಅನುಮೋದನೆಗೆ ನಿಯಮಗಳಲ್ಲಿ ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಹೇಳಿದ್ದಾರೆ.
2025-26 ನೇ ಸಾಲಿನ ಆಯವ್ಯಯ ಭಾಷಣದ ಕಂಡಿಕೆ-272ರಲ್ಲಿ ಪಂಚಾಯತ್ ರಾಜ್ ವ್ಯವಸ್ಥೆಯ ಬಲವರ್ಧನೆಗಾಗಿ ಮತ್ತು ಗ್ರಾಮೀಣ ಜನರಿಗೆ ವ್ಯವಸ್ಥಿತ ರೀತಿಯಲ್ಲಿ ಸೇವೆಗಳನ್ನು ಒದಗಿಸುವ ಹಿತದೃಷ್ಟಿಯಿಂದ ʼಎಲ್ಲಾ ಅಗತ್ಯ ದಾಖಲೆಗಳನ್ನು ಹೊಂದಿರುವ ಆಸ್ತಿಗಳಿಗೆ ಪ್ರಮಾಣ ಪತ್ರಗಳನ್ನು ವಿತರಿಸಲು ಇ-ಸ್ವತ್ತು ಅಭಿಯಾನವನ್ನು ಆರಂಭಿಸಲಾಗುವುದುʼ ಎಂದು ಘೋಷಿಸಲಾಗಿತ್ತು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ವನ್ನು ದಿನಾಂಕ: 07.04.2025 ರಂದು ಅಧಿಸೂಚಿಸಿ ಪ್ರಕರಣ 199(ಬಿ) ಹಾಗೂ ಪ್ರಕರಣ 199(ಸಿ) ಅನ್ನು ಸೇರಿಸಲಾಗಿದೆ. ಪ್ರಕರಣ 199(ಬಿ) ಸ್ವತ್ತುಗಳಿಗೆ ಖಾತಾ ಅಥವಾ ಪಿಐಡಿ ನೀಡುವ ಕುರಿತಂತೆ ಹಾಗೂ ಪ್ರಕರಣ 199(ಸಿ) ಕಟ್ಟಡ ಮತ್ತು ಪರಿವರ್ತನೆಯಾಗದೇ ಇರುವ ಭೂಮಿ ಅಥವಾ ಪರಿವರ್ತನೆಯಾದ ಭೂಮಿ ಆದರೆ ಕಂದಾಯ ಭೂಮಿಯಲ್ಲಿನ ಅನುಮೋದಿತವಲ್ಲದ ಬಡಾವಣೆಯ ಮೇಲಿನ ತೆರಿಗೆಗಳ ಮೇಲೆ ಉಲ್ಲೇಖಿಸುತ್ತದೆ.
ಈ ತಿದ್ದುಪಡಿಯನ್ನು ಆಧರಿಸಿ ಅಸ್ತಿತ್ವದಲ್ಲಿದ್ದ ತೆರಿಗೆ ನಿಯಮಗಳು 2021ನ್ನು ನಿರಸನಗೊಳಿಸಿ ಹೊಸದಾಗಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯಿತಿಗಳ ತೆರಿಗೆ, ದರ ಮತ್ತು ಶುಲ್ಕಗಳು) ನಿಯಮಗಳು, 2025ನ್ನು ಅಧಿಸೂಚಿಸಲಾಗಿದೆ. ಈ ನಿಯಮಗಳ ಜಾರಿಯಿಂದ ರಾಜ್ಯಾದ್ಯಂತ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ಅಭಿಯಾನವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುವುದು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಗ್ರಾಮ ಪಂಚಾಯಿತಿಯ ಎಲ್ಲಾ ಆಸ್ತಿಗಳ ಕರಡು ಪ್ರತಿಗಳನ್ನು ಸಾರ್ವಜನಿಕರಿಗೆ ತಂತ್ರಾಂಶದ ಮೂಲಕ ಒದಗಿಸಿ ತಮ್ಮ ಆಸ್ತಿಗಳ ಮಾಹಿತಿಯನ್ನು ಸರಿಪಡಿಸಿಕೊಳ್ಳುವ ಅವಕಾಶವನ್ನು ಕಲ್ಪಿಸಲಾಗಿದೆ, ಆಸ್ತಿ ಮಾಲೀಕರು ತಮ್ಮ ಆಸ್ತಿಗಳ ತೆರಿಗೆಯನ್ನು ಗ್ರಾಮ ಪಂಚಾಯಿತಿಗೆ ಪಾವತಿಸುವ ಮೂಲಕ ದಾಖಲೆ ಪಡೆಯಲು ಹಾಗೂ ಗ್ರಾಮ ಪಂಚಾಯತಿಯ ಸ್ವಂತ ಸಂಪನ್ಮೂಲಗಳನ್ನು ವೃದ್ದಿಗೊಳಿಸುವುದರ ಮೂಲಕ ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕಾರ್ಯಗಳಲ್ಲಿ ಪಾಲ್ಗೊಳಲು ಸಹಕಾರಿಯಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ತೆರಿಗೆ, ದರ ಅಥವಾ ಶುಲ್ಕಗಳ ನಿರ್ಧರಣೆ, ವಸೂಲಿ ಅಥವಾ ವಿಧಿಸುವಿಕೆಯಿಂದ ಬಾಧಿತನಾದ ಯಾವುದೇ ವ್ಯಕ್ತಿಯು ಉಪ ಕಾರ್ಯದರ್ಶಿ(ಅಭಿವೃದ್ದಿ) ಅವರಿಗೆ ಮೊದಲನೆ ಮೇಲ್ಮನವಿ ಸಲ್ಲಿಸಲು ಅವಕಾಶ ಮಾಡಲಾಗಿದೆ. ಸದರಿ ಆದೇಶದಿಂದ ಬಾಧಿತನಾದ ವ್ಯಕ್ತಿಯು ಎರಡನೇ ಮೇಲ್ಮನವಿಯನ್ನು ಜಿಲ್ಲಾ ಪಂಚಾಯತಿಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದೂ ಗ್ರಾಮೀಣ ಅಭಿವೃದ್ಧಿ ಸಚಿವರು ಹೇಳಿದ್ದಾರೆ.
ವೈಜ್ಞಾನಿಕವಾಗಿ ಹಾಗೂ ಪಾರದರ್ಶಕವಾಗಿ ತೆರಿಗೆ, ದರ ಹಾಗು ಶುಲ್ಕಗಳನ್ನು ನಿಗದಿ ಮಾಡುವುದರಿಂದ ಮತ್ತು ಪರವಾನಗಿ, ನಿರಾಕ್ಷೇಪಣ ಪತ್ರಗಳನ್ನು ಕ್ರಮಬದ್ಧವಾಗಿ ಮತ್ತು ಕಾಲಮಿತಿಯೊಳಗೆ ತಂತ್ರಾಂಶವನ್ನು ಅಭಿವೃದ್ಧಿಪಡಿಸಿ ನೀಡುವುದರಿಂದ ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲದ ಹೆಚ್ಚಳಕ್ಕೆ ಕಾರಣವಾಗುವದಲ್ಲದೆ ಸ್ವಯಂ ಸರ್ಕಾರಗಳಾಗಿ ಗ್ರಾಮ ಪಂಚಾಯತಿಗಳು ತಮ್ಮ ಅಭಿವೃದ್ಧಿಯನ್ನು ತಾವೇ ನಿರ್ಧರಿಸುವ ದಿಸೆಯಲ್ಲಿ ಇದೊಂದು ಮಹತ್ತರ ಹಾಗೂ ಐತಿಹಾಸಿಕ ನಡೆಯಾಗಿದೆ.












Click it and Unblock the Notifications