Assembly Session 2022: ಕೃಷಿ ಭೂಮಿ ಪರಿವರ್ತಿಸುವ ಕರ್ನಾಟಕ ಭೂ ಕಂದಾಯ ಮಸೂದೆ' ಮಂಡನೆ
ಬೆಂಗಳೂರು, ಡಿಸೆಂಬರ್ 22: ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ಪರಿವರ್ತಿಸುವ ಪ್ರಕ್ರಿಯೆಯನ್ನು ಸುಲಭಗೊಳಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 'ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆ' ಮಂಡಿಸಿದೆ.
ಚಳಿಗಾಲದ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರ ಈ ಮಸೂದೆ ಮಂಡಿಸಿದೆ. ಈ ಪ್ರಸ್ತಾಪಿತ ಮಸೂದೆಯು ಕೃಷಿ ಭೂಮಿಯನ್ನು ಇತರ ಉದ್ದೇಶಗಳಿಗೆ ಪರಿವರ್ತಿಸಲು ಅರ್ಜಿ ಸಲ್ಲಿಸಲಾಗುತ್ತದೆ. ಸ್ವೀಕರಿಸಿದ 15 ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಅರ್ಜಿ ಪರಿಶೀಲಿಸಿ ಅನುಮೋದನೆ ನೀಡಬೇಕು. ಒಂದು ವೇಳೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡುವಲ್ಲಿ ವಿಫಲವಾದರೆ ಸಲ್ಲಿಕೆಯಾದ ಅರ್ಜಿಗೆ ಅನುಮತಿ ನೀಡಲಾಗಿದೆ ಎಂದು ಪರಿಗಣಿಸಬೇಕು ಎಂದು ಈ ಕಾನೂನು ಹೇಳುತ್ತದೆ.
ಅಧಿವೇಶನದಲ್ಲಿ ಪ್ರಸ್ತಾಪಿಸಲಾದ ಈ ತಿದ್ದುಪಡಿಯು ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಅಫಿಡವಿಟ್ ಸಲ್ಲಿಸುವ ಮೂಲಕ ಭೂಮಾಲೀಕರು ಕೃಷಿ ಭೂಮಿಯನ್ನು ವಾಣಿಜ್ಯ ಅಥವಾ ಇತರ ಉದ್ದೇಶಗಳಿಗೆ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ.

ಕೃಷಿಯ ಉದ್ದೇಶಕ್ಕಾಗಿ ಮೀಸಲಾದ ಜಮೀನಿನ ಮಾಲೀಕರು ಭೂಮಿಯನ್ನು ಅಥವಾ ಅದರ ಯಾವುದೇ ಭಾಗವನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳಲು ಬಯಸಿದರೆ, ಜಿಲ್ಲಾಧಿಕಾರಿಗೆ ಅರ್ಜಿಯೊಂದಿಗೆ ಅಫಿಡವಿಟ್ ಸಲ್ಲಿಸಬೇಕು ಎಂದು ಮಸೂದೆ ತಿಳಿಸುತ್ತದೆ.
2011-12ರ ಬಜೆಟ್ ಭಾಷಣದಲ್ಲಿ ರಾಜ್ಯ ಸರ್ಕಾರ ನೀಡಿದ ಭರವಸೆಗಳನ್ನು ಆಧರಿಸಿಯೇ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ಮಸೂದೆಯನ್ನು ಪ್ರಸ್ತಾಪಿಸಲಾಗಿದೆ. ಮಂಡಿಸಲಾದ ಮಸೂದೆಯು ಕರ್ನಾಟಕ ಭೂ ಕಂದಾಯ ಕಾಯಿದೆ 1964ರ ಸೆಕ್ಷನ್ 95 ಗೆ ತಿದ್ದುಪಡಿಗಳ ಮೇಲೆ ಪರಿಣಾಮ ಬೀರುತ್ತದೆ.
ಏಳು ಮತ್ತು 15ದಿನದಲ್ಲಿ ಅನುಮೋದನೆ
ನಗರ ಪ್ರದೇಶಗಳಲ್ಲಿ ಭೂಮಿ ಬದಲಾವಣೆಗೆ ಬಯಸಿದವರು ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನಾ ಕಾಯಿದೆ- 1961 ಅಡಿಯಲ್ಲಿ ನಿಗದಿತ ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಬೇಕು. ಅದಕ್ಕೆ ಜಿಲ್ಲಾಧಿಕಾರಿಗಳು ಏಳು ದಿನಗಳಲ್ಲಿ ಅನುಮೋದನೆ ನೀಡಬೇಕು. ನಗರದ ಪ್ರದೇಶದ ಹೊರಗಿನ ಕೃಷಿ ಭೂಮಿ ಪರಿವರ್ತನೆಗೆ ಜಿಲ್ಲಾಧಿಕಾರಿಗಳಿಗೆ ಅರ್ಜಿ ಪಡೆದ ನಂತರ 15 ದಿನಗಳಲ್ಲಿ ಭೂಮಿ ಪರಿವರ್ತಿಸಲು ಅವಕಾಶಮಾಡಿಕೊಡಬೇಕು.

ಅಷ್ಟೇ ಅಲ್ಲದೇ ತಪ್ಪು ಘೋಷಣೆ, ಸುಳ್ಳು ಅಫಿಡವಿಟ್ ಮೂಲಕ ಕೃಷಿ ಭೂಮಿ ಪರಿವರ್ತಿಸಿದರೆ ಅಂತಹ ಆದೇಶಗಳಿಗೆ ಅಧಿಕಾರಿಗಳಿಗೆ ಮೇಲೆ ಈ ಕಾನೂನಿನಡಿ ದಂಡ ವಿಧಿಸಬಹುದಾಗಿದೆ. ಕ್ರಿಮಿನಲ್ ಮೊಕದ್ದಮೆ ಹಾಕುವ ಜೊತೆಗೆ ಪರಿವರ್ತನೆಗೊಂಡ ಭೂಮಿಯ ಆದೇಶವನ್ನು ಅನೂರ್ಜಿತ ಎಂದು ಘೋಷಿಸಲಾಗುವುದು ಎಂದು ಪ್ರಸ್ತಾವನೆ ವೇಳೆ ತಿಳಿಸಲಾಗಿದೆ.












Click it and Unblock the Notifications