ಉಪ ಚುನಾವಣೆಗೆ ಲಕ್ಷ್ಮಣ ಸವದಿ ನಾಮಪತ್ರ; ಯಡಿಯೂರಪ್ಪ ಗೈರು
ಬೆಂಗಳೂರು, ಫೆಬ್ರವರಿ 05 : ವಿಧಾನ ಪರಿಷತ್ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮಣ ಸವದಿ ನಾಮಪತ್ರ ಸಲ್ಲಿಸಿದರು. ರಿಜ್ವಾನ್ ಅರ್ಷದ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಫೆಬ್ರವರಿ 7ರಂದು ಚುನಾವಣೆ ನಡೆಯಲಿದೆ.
ಬುಧವಾರ ವಿಧಾನಸೌಧದಲ್ಲಿ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಸಚಿವರಾದ ಮಾಧುಸ್ವಾಮಿ, ಆರ್. ಅಶೋಕ, ಸಿ. ಸಿ. ಪಾಟೀಲ, ವಿ. ಸೋಮಣ್ಣ, ಡಿಸಿಎಂ ಅಶ್ವತ್ಥ ನಾರಾಯಣ ಮುಂತಾದವರು ಉಪಸ್ಥಿತರಿದ್ದರು.
ಫೆಬ್ರವರಿ 7ರಂದು ಉಪ ಚುನಾವಣೆ ನಡೆಯಲಿದೆ. ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ. ವಿಧಾನಸಭೆಯ ಶಾಸಕರು ವಿಧಾನ ಪರಿಷತ್ತಿನ ಒಂದು ಸ್ಥಾನಕ್ಕಾಗಿ ನಡೆಯುವ ಉಪ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ.
ಕಾಂಗ್ರೆಸ್ ಪಕ್ಷ ಉಪ ಚುನಾವಣೆಗೆ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಿಲ್ಲ. ವಿಧಾನಸಭೆಯಲ್ಲಿ ಸ್ಪಷ್ಟ ಬಹುಮತ ಹೊಂದಿರುವ ಬಿಜೆಪಿ ಉಪ ಚುನಾವಣೆಯಲ್ಲಿ ನಿರಾಯಾಸವಾಗಿ ಗೆದ್ದು ಬರಲಿದೆ. ಯಾವ ಅಭ್ಯರ್ಥಿಯೂ ಕಣಕ್ಕಿಳಿಯದಿದ್ದಲ್ಲಿ ಅವಿರೋಧವಾಗಿ ಲಕ್ಷ್ಮಣ ಸವದಿ ಗೆದ್ದು ಬರಲಿದ್ದಾರೆ.

ಲಕ್ಷ್ಮಣ ಸವದಿ ಹೇಳಿದ್ದೇನು?
ಮಾಧ್ಯಮಗಳ ಜೊತೆ ಮಾತನಾಡಿದ ಲಕ್ಷ್ಮಣ ಸವದಿ, "ನನ್ನನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ನಾನು ಕಳೆದ ಐದು ತಿಂಗಳಿಂದ ಡಿಸಿಎಂ ಆಗಿ ಕೆಲಸ ಮಾಡುತ್ತಿದ್ದೇನೆ. ಮೇಲ್ಮನೆ ಅಥವಾ ಕೆಳಮನೆ ಸದಸ್ಯರಾಗಬೇಕಾದ ಅನಿವಾರ್ಯತೆ ಇತ್ತು. ಪಕ್ಷ ಅದಕ್ಕೆ ಅವಕಾಶ ಮಾಡಿಕೊಟ್ಟಿದೆ.ನಾಮಪತ್ರ ಸಲ್ಲಿಕೆ ಮಾಡಿದ್ದೇನೆ. ಎಲ್ಲಾ ಬಿಜೆಪಿ ಸದಸ್ಯರು ಬೆಂಬಲ ನೀಡಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಸದಸ್ಯರೂ ಬೆಂಬಲ ನೀಡುವ ವಿಶ್ವಾಸವಿದೆ" ಎಂದರು.

ಟಿಕೆಟ್ ಕೊಡುವುದು ಅನಿವಾರ್ಯವಾಗಿತ್ತು
ಲಕ್ಷ್ಮಣ ಸವದಿ ಯಡಿಯೂರಪ್ಪ ಸಂಪುಟದಲ್ಲಿ ಸಾರಿಗೆ ಸಚಿವರು. ಅಥಣಿ ಕ್ಷೇತ್ರದಲ್ಲಿ 2018ರ ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಆದ್ದರಿಂದ, ಫೆಬ್ರವರಿ 26ರೊಳಗೆ ಅವರು ವಿಧಾನಸಭೆ ಅಥವ ಪರಿಷತ್ ಸದಸ್ಯರಾಗುವುದು ಅನಿವಾರ್ಯವಾಗಿತ್ತು. ಇಲ್ಲವಾದಲ್ಲಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಿತ್ತು.

ಯಡಿಯೂರಪ್ಪ ಗೈರು
ಬುಧವಾರ ಉಪ ಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ ಸವದಿ ವಿಧಾನ ಪರಿಷತ್ ಉಪ ಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಆದರೆ, ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಗೈರಾಗಿದ್ದರು. ಕಲಬುರಗಿ ಪ್ರವಾಸದಲ್ಲಿ ಯಡಿಯೂರಪ್ಪ ಇದ್ದು, 85ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಇಲ್ಲ
ವಿಧಾನ ಪರಿಷತ್ ಉಪ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಕಣಕ್ಕಿಳಿಸುವುದಿಲ್ಲ. ಜೆಡಿಎಸ್ ಸಹ ಅಭ್ಯರ್ಥಿ ಹಾಕುವುದಿಲ್ಲ. ಆದ್ದರಿಂದ, ಲಕ್ಷ್ಮಣ ಸವದಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.












Click it and Unblock the Notifications