ಮಂಡ್ಯದಿಂದ ಕುಮಾರಣ್ಣ ಸ್ಪರ್ಧೆ? ಅಲ್ಲಿಂದಲೇ ನಾನು ಕಣಕ್ಕಿಳಿಯೋದು ಎಂದ ಸುಮಲತಾ- ಗೌಡರ ಕುಟುಂಬಕ್ಕೆ ಮುಂದುವರಿದ ಸಂಸದೆಯ ಕಾಟ
ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ, ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಅವರು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಿಂದ ಕಣಕ್ಕಿಳಿಯುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಹೇಳಿಕೆ ನೀಡಿರುವ ಮಂಡ್ಯ ಸಂಸದೆ ಸುಮಲತಾ ಅಂಬರೀಷ್, ತಾವೂ ಸಹ ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಬೆಳವಣಿಗೆಗಳು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಪ್ರಕ್ರಿಯೆಗೆ ಪ್ರಾರಂಭದಲ್ಲೇ ಸಂಕಷ್ಟ ತಂದೊಡ್ಡಿವೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಳಿಕ ನವದೆಹಲಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಎಚ್‌ಡಿ ಕುಮಾರಸ್ವಾಮಿ ಮಂಡ್ಯದಿಂದ ಸ್ಪರ್ಧಿಸುವುದರ ಕುರಿತು ಯಾವುದೇ ಹೇಳಿಕೆ ನೀಡಿಲ್ಲ. ಆದರೂ, ಮಂಡ್ಯದಿಂದ ಕಣಕ್ಕಿಳಿಯುವಂತೆ ಬಿಜೆಪಿ ಹೈಕಮಾಂಡ್ ಕುಮಾರಸ್ವಾಮಿ ಅವರಿಗೆ ಒತ್ತಾಯಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಹಾಸನ ಹಾಗೂ ಮಂಡ್ಯ ಕ್ಷೇತ್ರಗಳು ಜೆಡಿಎಸ್ ಪಾಲಾಗಿವೆ. ಜೆಡಿಎಸ್‌ನ ಇಬ್ಬರು ಹಿರಿಯ ನಾಯಕರಾದ ಸಿಎಸ್ ಪುಟ್ಟರಾಜು ಮತ್ತು ಸುರೇಶ್‌ಗೌಡ ಮಂಡ್ಯದಿಂದ ಸ್ಪರ್ಧಿಸುವ ಬಗ್ಗೆ ಒಲವು ಹೊಂದಿದ್ದಾರೆ. ಹಾಸನ ಹಾಗೂ ಮಂಡ್ಯದಿಂದ ದೇವೇಗೌಡ ಕುಟುಂಬದ ಸದಸ್ಯರೇ ಸ್ಪರ್ಧೆ ಮಾಡಬೇಕೆಂಬುದು ಬಿಜೆಪಿ ನಾಯಕರ ಒತ್ತಾಯವಾಗಿದೆ.
ಕುಮಾರಸ್ವಾಮಿ ಸ್ಪರ್ಧೆಯಿಂದ ಜೆಡಿಎಸ್‌ಗೆ ಆಗುವ ಲಾಭಗಳೇನು?
ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿರುವ ಜೆಡಿಎಸ್ ಪಕ್ಷವು ಮತ್ತೆ ಪುಟಿದೇಳಲು ಶತಾಯಗತಾಯ ಯತ್ನ ನಡೆಸಿದೆ. ಒಂದು ವೇಳೆ ಕುಮಾರಸ್ವಾಮಿ ಅವರು ಮಂಡ್ಯದಿಂದ ಸ್ಪರ್ಧಿಸಿ ಗೆದ್ದರೆ ಕೇಂದ್ರ ಸಚಿವರಾಗಬಹುದು. ಈ ಮೂಲಕ ಪಕ್ಷಕ್ಕೆ ಬಲತಂದುಕೊಡಬಹುದು. ಪಕ್ಷಕ್ಕೆ ಸಂಪನ್ಮೂಲಗಳನ್ನು ಕ್ರೋಡಿಕರಿಸಿಕೊಳ್ಳಲು ಇದು ಸಹಾಯ ಮಾಡಬಹುದು. ಈಗಾಗಲೇ ಕೈತಪ್ಪುತ್ತಿರುವ ಒಕ್ಕಲಿಗ ಮತಗಳನ್ನು ಮತ್ತೆ ಸೆಳೆಯಬಹುದು ಎಂಬ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಮತ್ತೆ ಅತಂತ್ರವಾಗಲಿದ್ದಾರಾ ನಿಖಿಲ್ ಕುಮಾರಸ್ವಾಮಿ?
ಪುತ್ರ ನಿಖಿಲ್ ಅವರು ಮಂಡ್ಯದಿಂದ ಮತ್ತೆ ಕಣಕ್ಕಿಳಿಯಬೇಕೆಂಬುದು ಕುಮಾರಸ್ವಾಮಿ ಅವರ ಹೆಬ್ಬಯಕೆಯಾಗಿದೆ. ಆದರೆ, ಬಿಜೆಪಿ ಹೈಕಮಾಂಡ್ ಇದಕ್ಕೆ ಒಪ್ಪುತ್ತಿಲ್ಲವೆಂಬ ಮಾತುಗಳು ಕೇಳಿಬಂದಿವೆ. ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಅವರು ಸುಮಲತಾ ವಿರುದ್ಧ ಸ್ಪರ್ಧಿಸಿ ಹೀನಾಯ ಸೋಲು ಅನುಭವಿಸಿದ್ದರು. ಮೇ ತಿಂಗಳಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಮನಗರದಿಂದ ಕಣಕ್ಕಿಳಿದು ಪರಾಭವಗೊಂಡಿದ್ದರು. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಅವರು ಸ್ಪರ್ಧಿಸದೇ ಹೋದರೆ, ಅವರ ಭವಿಷ್ಯ ಮತ್ತೆ ಅತಂತ್ರವಾಗುವುದು ನಿಶ್ಚಿತವಾಗಿದೆ.
ಮುಂದುವರಿದ ಸುಮಲತಾ ಕಾಟ
ಕಳೆದ ಐದು ವರ್ಷಗಳಿಂದ ಜೆಡಿಎಸ್ ವಿರುದ್ಧ ಸಮರ ಸಾರಿರುವ ಸಂಸದೆ ಸುಮಲತಾ ಅವರು ಮಂಡ್ಯದಿಂದಲೇ ಸ್ಪರ್ಧಿಸುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಜೆಡಿಎಸ್ ವಿರುದ್ಧದ ಸಂಘರ್ಷವನ್ನು ಜೀವಂತವಾಗಿಟ್ಟಿದ್ದಾರೆ.

ಮಂಡ್ಯದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವುದು ಖಚಿತ ಎಂದು ಸಂಸದೆ ಸುಮಲತಾ ಅವರು ಶನಿವಾರ ಹೇಳಿದ್ದಾರೆ. ಮದ್ದೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
ಕಳೆದ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರೂ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಬೆಂಬಲ ಸೂಚಿಸಿದ್ದರು. ಚನ್ನಪಟ್ಟಣದಲ್ಲಿ ನಡೆದಿದ್ದ ಪ್ರಧಾನಿ ಮೋದಿಯವರ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು.
ಸುಮಲತಾ ಅವರು ಬಿಜೆಪಿಗೆ ಸೇರ್ಪಡೆಯಾಗುತ್ತಾರೆ. ಕಮಲದ ಚಿಹ್ನೆ ಅಡಿಯಲ್ಲಿ ಮಂಡ್ಯದಿಂದ ಮತ್ತೆ ಸ್ಪರ್ಧಿಸುತ್ತಾರೆ ಎಂದು ಊಹಿಸಲಾಗಿತ್ತು. ಆದರೆ ಬಿಜೆಪಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿರುವುದರಿಂದ ಸುಮಲತಾ ಭವಿಷ್ಯವೂ ಅತಂತ್ರವಾಗಿದೆ. ಮುಂಬರುವ ದಿನಗಳಲ್ಲಿ ಸುಮಲತಾ ಅಂಬರೀಷ್ ಅವರು ಕಾಂಗ್ರೆಸ್‌ಗೆ ಸೇರ್ಪಡೆಗೊಂಡರೂ ಅಚ್ಚರಿಪಡಬೇಕಿಲ್ಲ.












Click it and Unblock the Notifications