ಸಮ್ಮಿಶ್ರ ಸರ್ಕಾರ ಉಳಿಯಬೇಕು, ಸಿದ್ದರಾಮಯ್ಯಗೆ ರಾಹುಲ್ ಗಾಂಧಿ ಸೂಚನೆ
Recommended Video

ಬೆಂಗಳೂರು, ಜನವರಿ 31 : 'ಯಾವುದೇ ಕಾರಣಕ್ಕೂ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಳ್ಳಬಾರದು' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಕರ್ನಾಟಕದ ಕಾಂಗ್ರೆಸ್ ನಾಯಕರಿಗೆ ಸೂಚನೆ ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಮತ್ತು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ದೆಹಲಿಯಲ್ಲಿ ಗುರುವಾರ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಮಹತ್ವದ ಮಾತುಕತೆ ನಡೆಸಿದ ಅವರು, ಮೈತ್ರಿ ಸರ್ಕಾರ ಉಳಿಯಬೇಕು ಎಂಬ ಸಂದೇಶ ನೀಡಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 'ನಾನು ರಾಜೀನಾಮೆ ನೀಡಲು ಸಿದ್ಧ' ಹೇಳಿಕೆ. ಕಾಂಗ್ರೆಸ್ ಶಾಸಕರ 'ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿಗಳು' ಹೇಳಿಕೆ, ಜೆಡಿಎಸ್ ಶಾಸಕರಿಂದ ಕಾಂಗ್ರೆಸ್ ನಾಯಕರ ಮೇಲೆ ವಾಗ್ದಾಳಿ ಬಳಿಕ ಸಮ್ಮಿಶ್ರ ಸರ್ಕಾರದ ಸ್ಥಿರತೆ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಸಿದ್ದರಾಮಯ್ಯ ಅವರು ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರ ಜೊತೆ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ರಾಜ್ಯದ ರಾಜಕೀಯ ಚಿತ್ರಣದ ಬಗ್ಗೆ ರಾಹುಲ್ ಗಾಂಧಿ ಮಾಹಿತಿ ಪಡೆದರು.

ಮಾಹಿತಿ ಪಡೆದ ರಾಹುಲ್ ಗಾಂಧಿ
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ 'ನಾನು ರಾಜೀನಾಮೆ ನೀಡಲು ಸಿದ್ಧ' ಎಂಬ ಹೇಳಿಕೆ ಬಗ್ಗೆ ಸಿದ್ದರಾಮಯ್ಯ ಅವರಿಂದ ರಾಹುಲ್ ಗಾಂಧಿ ಅವರು ಮಾಹಿತಿ ಪಡೆದರು. ದೋಸ್ತಿ ಸರ್ಕಾರದಲ್ಲಿ ಯಾವುದೇ ಗೊಂದಲಗಳು ಉಂಟಾಗಬಾರದು. ಮೈತ್ರಿ ಸರ್ಕಾರ ಪತನಗೊಳ್ಳಬಾರದು ಎಂದು ರಾಹುಲ್ ಗಾಂಧಿ ಅವರು ಸಿದ್ದರಾಮಯ್ಯ ಅವರಿಗೆ ಸೂಚನೆ ನೀಡಿದ್ದಾರೆ.

ಲೋಕಸಭಾ ಚುನಾವಣೆ ಸೀಟು ಹಂಚಿಕೆ
2019ರ ಲೋಕಸಭಾ ಸೀಟು ಹಂಚಿಕೆಯಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಳ್ಳಲು ಜೆಡಿಎಸ್ ನಾಯಕರು ಬೆದರಿಕೆ ಹಾಕುತ್ತಿದ್ದಾರೆ. ಆದಷ್ಟು ಬೇಗ ಸೀಟು ಹಂಚಿಕೆ ಪ್ರಕ್ರಿಯೆ ಅಂತಿಮಗೊಳಿಸಿ ಎಂದು ಸಿದ್ದರಾಮಯ್ಯ ಮತ್ತು ಕೆ.ಸಿ.ವೇಣುಗೋಪಾಲ್ ಅವರು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದರು.

ಫೆಬ್ರವರಿ ಮೊದಲ ವಾರ ಸಭೆ
ಲೋಕಸಭಾ ಸೀಟು ಹಂಚಿಕೆ ಕುರಿತು ಚರ್ಚೆ ನಡೆಸಲು ಫೆಬ್ರವರಿ ಮೊದಲ ವಾರದಲ್ಲಿ ಸಭೆ ನಡೆಸಲಾಗುತ್ತದೆ ಎಂದು ರಾಹುಲ್ ಗಾಂಧಿ ಅವರು ಹೇಳಿದ್ದಾರೆ. ಜೆಡಿಎಸ್ 12 ಸ್ಥಾನಗಳಿಗಾಗಿ ಬೇಡಿಕೆ ಇಟ್ಟಿದೆ. ಕರ್ನಾಟಕ ಕಾಂಗ್ರೆಸ್ 8 ರಿಂದ 9 ಸ್ಥಾನಗಳನ್ನು ಜೆಡಿಎಸ್‌ಗೆ ಬಿಟ್ಟುಕೊಡುವ ಚಿಂತನೆಯಲ್ಲಿದೆ.

ಶಾಸಕರ ನಿರ್ಲಕ್ಷ್ಯ
ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ಶಾಸಕರನ್ನು ನಿರ್ಲಕ್ಷ್ಯ ಮಾಡಲಾಗುತ್ತಿದೆ. ಆದ್ದರಿಂದ, ಶಾಸಕರಲ್ಲಿ ಅಸಮಾಧಾನವಿದೆ. ಲೋಕಸಭಾ ಚುನಾವಣೆಯಲ್ಲಿಯೂ ಮೈತ್ರಿ ಮಾಡಿಕೊಳ್ಳಲು ಕೆಲವು ಕ್ಷೇತ್ರಗಳಲ್ಲಿ ವಿರೋಧವಿದೆ ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ವಿವರಿಸಿದರು.












Click it and Unblock the Notifications