ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆ ವಿಸ್ತರಣೆ, 15 ಹೊಸ ಬಸ್ ಖರೀದಿ
ಬೆಂಗಳೂರು, ಅಕ್ಟೋಬರ್ 03 : ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಯನ್ನು ವಿವಿಧ ನಗರಗಳಿಗೆ ವಿಸ್ತರಣೆ ಮಾಡಲು ಮುಂದಾಗಿದೆ. ಇದಕ್ಕಾಗಿ 15 ವೋಲ್ವೊ ಬಸ್ಸುಗಳನ್ನು ಖರೀದಿ ಮಾಡಲಾಗುತ್ತದೆ.
ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಕೆಎಸ್ಆರ್‌ಟಿಸಿ ಫ್ಲೈ ಬಸ್ ಸಂಚಾರ ನಡೆಸುತ್ತದೆ. ಸದ್ಯ, ಮಡಿಕೇರಿ, ಕಲ್ಲಿಕೋಟೆ, ತಿರುಪತಿ, ಸೇಲಂ ಮತ್ತು ಕೊಯಮತ್ತೂರಿಗೆ ಬಸ್ ಸೇವೆ ವಿಸ್ತರಿಸಲು ನಿರ್ಧರಿಸಲಾಗಿದೆ.

ಈಗಾಗಲೇ ಕೆಎಸ್ಆರ್‌ಟಿಸಿಯ ಫ್ಲೈ ಬಸ್ ಸೇವೆಯಡಿ 7 ಬಸ್ಸುಗಳು ಸಂಚಾರ ನಡೆಸುತ್ತಿವೆ. ಈಗ ಸೇವೆ ವಿಸ್ತರಣೆ ಮಾಡಲು ಉದ್ದೇಶಿಸಿದ್ದು ಇದಕ್ಕಾಗಿ 15 ವೋಲ್ವೊ ಬಸ್ಸುಗಳನ್ನು ಖರೀದಿ ಮಾಡಲಾಗುತ್ತದೆ. ನವೆಂಬರ್ ತಿಂಗಳಿನಲ್ಲಿ ಈ ಬಸ್ಸುಗಳು ಸಂಚಾರ ಆರಂಭಿಸಲಿವೆ.
ಐಷಾರಾಮ ಬಸ್ಸುಗಳು : ಕೆಎಸ್ಆರ್‌ಟಿಸಿ ಫ್ಲೈ ಬಸ್ ಸೇವೆಯಡಿ ಐಷಾರಾಮಿ ಬಸ್ಸುಗಳನ್ನು ಓಡಿಸುತ್ತದೆ. ಈ ಬಸ್ಸುಗಳು ಉಪಹಾರ ಮತ್ತು ಶೌಚಾಲಯ ಸೌಲಭ್ಯವನ್ನು ಹೊಂದಿವೆ. ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಸಿಲುಕದೇ ಬಸ್ಸುಗಳು ನೇರವಾಗಿ ವಿಮಾನ ನಿಲ್ದಾಣದಿಂದ ವಿವಿಧ ನಗರಗಳಿಗೆ ಸಂಚಾರ ನಡೆಸುತ್ತವೆ.
2013ರಲ್ಲಿ ಫ್ಲೈ ಬಸ್ ಸೇವೆ ಆರಂಭಿಸಲಾಗಿದ್ದು 7 ಬಸ್ಸುಗಳು ಸಂಚಾರ ನಡೆಸುತ್ತಿವೆ. ಈಗ ಖರೀದಿ ಮಾಡುತ್ತಿರುವ ಬಸ್ಸುಗಳು 14.5 ಮೀಟರ್ ಉದ್ದ ಇರಲಿವೆ. ಒಂದು ಭಾಗದಲ್ಲಿ ಎರಡು ಆಸನಗಳು, ಮತ್ತೊಂದು ಭಾಗದಲ್ಲಿ ಒಂದು ಆಸನಗಳ ವ್ಯವಸ್ಥೆಯನ್ನು ಹೊಂದಿವೆ.












Click it and Unblock the Notifications