KSRTC Mysuru: ಎಕ್ಸ್‌ಪ್ರೆಸ್ ವೇ ಮಾರ್ಗವಾಗಿ ಸಂಚರಿಸುವ ಬಸ್‌ಗಳ ಮಾರ್ಗದಲ್ಲಿ ಬದಲಾವಣೆ, ಇಲ್ಲಿದೆ ಹೊಸ ರೂಟ್ಸ್
ಮೈಸೂರು: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ (Bengaluru-Mysuru Expressway) ಮಾರ್ಗದಲ್ಲಿ ಸಂಚಾರ ಮಾಡುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (KSRTC) ಬಸ್‌ಗಳ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ. ಇದಕ್ಕೆ ಕಾರಣವೇನು? ಬಸ್ ಸಂಚಾರಕ್ಕೆ ಪರ್ಯಾಯ ಮಾರ್ಗಗಳು ಯಾವುವು? ಎಂಬ ಮಾಹಿತಿಯನ್ನು ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ತಿಳಿಸಿದ್ದಾರೆ.
ಮೈಸೂರು ನಗರ ಕೆಂಪೇಗೌಡ ವೃತ್ತವು (ಮಣಿಪಾಲ್ ಜಂಕ್ಷನ್) ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಹಾಗೂ ರಿಂಗ್ ರಸ್ತೆ ಮೂಲಕ ಸಂಚರಿಸುವ ವಾಹನಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಜಂಕ್ಷನ್ ಆಗಿದೆ. ಸದ್ಯ ಈ ಜಂಕ್ಷನ್ ಮೂಲಕ ಸರಕು ಸಾಗಾಣಿಕೆ ವಾಹನಗಳು, ಭಾರಿ ವಾಹನಗಳು, ಕೆ.ಎಸ್.ಆರ್.ಟಿ.ಸಿ ಮತ್ತು ಖಾಸಗಿ ಬಸ್ ಸೇರಿದಂತೆ ಎಲ್ಲಾ ಮಾದರಿಯ ವಾಹನಗಳು ಹಾದು ಹೋಗುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ.

ಫ್ಲೈಓವರ್ ಕಾಮಗಾರಿ ಹಿನ್ನೆಲೆ ಬದಲಾವಣೆ
ಈ ಜಂಕ್ಷನ್ ನಾಲ್ಕು ಮಾರ್ಗಗಳಲ್ಲಿಯೂ ಫ್ಲೈಓವರ್ ಕಾಮಗಾರಿ ಪ್ರಗತಿಯಲ್ಲಿದೆ. ಜಂಕ್ಷನ್‌ಗೆ 10ಲೇನ್ ಎಕ್ಸ್‌ಪ್ರೆಸ್ ವೇ ಮೂಲಕ ಆಗಮಿಸುವ ವಾಹನಗಳು ಈ ಭಾಗದಲ್ಲಿ (Bottle Neck) ನಿಧಾನಗತಿಯಲ್ಲಿ ಒಂದನೇ ಲೈನ್ ರಸ್ತೆ ಮೂಲಕ ನಗರಕ್ಕೆ ಪ್ರವೇಶಿಸಬೇಕಾಗಿರುತ್ತದೆ.
ಇನ್ನೂ ಮೈಸೂರು ನಗರಕ್ಕೆ ಆಗಮಿಸುವ ಬೆಂಗಳೂರು, ಮಂಡ್ಯ, ಹಾಸನ, ತುಮಕೂರು, ಶಿವಮೊಗ್ಗ ಹಾಗೂ ಇತರೆ ಜಿಲ್ಲೆಗಳ ಕೆ.ಎಸ್.ಆರ್.ಟಿ.ಸಿ ಬಸ್‌ಗಳು ಇದೇ ಜಂಕ್ಷನ್ ಮೂಲಕ ನಗರಕ್ಕೆ ಆಗಮಿಸುವುದರಿಂದ ವಾಹನ ಸಂಚಾರ ನಿಧಾನಗತಿಯಾಗಲಿದ್ದು, ದಟ್ಟಣೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ವಾಹನಗಳ ಸುಗಮ ಸಂಚಾರ ಮತ್ತು ಸಾರ್ವಜನಿಕರ ಹಿತದೃಷ್ಟಿಯಿಂದ ನಾಡಪ್ರಭು ಕೆಂಪೇಗೌಡ ಜಂಕ್ಷನ್ ಮೂಲಕ ಆಗಮಿಸುವ ಮತ್ತು ನಿರ್ಗಮಿಸುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಮಾರ್ಗ ಬದಲಾವಣೆ ಮಾಡಿ ನಿರ್ಬಂಧ ಮತ್ತು ನಿಯಮಗಳನ್ನು ಜಾರಿಗೊಳಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂದು ಪೊಲೀಸ್ ಆಯುಕ್ತಾಲಯವು ತಿಳಿಸಿದೆ.
ಕಾಮಗಾರಿ ಪೂರ್ಣವರೆಗೆ ಆದೇಶ ಜಾರಿ
ಮಣಿಪಾಲ್ ಜಂಕ್ಷನ್ ನಲ್ಲಿ ಫೈಓವರ್ ಕಾಮಗಾರಿ ಮುಕ್ತಾಯವಾಗುವವರೆಗೆ ಸದರಿ ಜಂಕ್ಷನ್‌ಗೆ ವಿವಿಧ ಜಿಲ್ಲೆಗಳಿಂದ ಆಗಮಿಸುವ ಮತ್ತು ಬಸ್ ನಿಲ್ದಾಣದಿಂದ ವಿವಿಧ ಜಿಲ್ಲೆಗಳಿಗೆ ನಿರ್ಗಮಿಸುವ ಸಾರಿಗೆ ಬಸ್‌ಗಳಿಗೆ ಅನ್ವಯವಾಗುವಂತೆ ಮಾರ್ಗ ಬದಲಾವಣೆ ಮಾಡಲಾಗಿದೆ ಮೈಸೂರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರು ತಿಳಿಸಿದ್ದಾರೆ.
ಮೈಸೂರಿಗೆ ತೆರಳುವ ಬಸ್‌ಗಳ ಮಾರ್ಗ ಬದಲಾವಣೆ
ಮೈಸೂರು ನಗರಕ್ಕೆ ಆಗಮಿಸುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ಮಾರ್ಗವು ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ- ನಾಡಪ್ರಭು ಕೆಂಪೇಗೌಡ ವೃತ್ತ- ಎಡತಿರುವು ರಿಂಗ್ ರಸ್ತೆ ಮೂಲಕ ಪುಷ್ಪಾಶ್ರಮ ಜಂಕ್ಷನ್- ಮಹದೇವಪುರ ರಸ್ತೆ ಜಂಕ್ಷನ್ (ಸಾತಗಳ್ಳಿ ಡಿಪೋ ಜಂಕ್ಷನ್) ಬಲತಿರುವು ಪಡೆದು ಅಲ್ಲಿಂದ ಮಹದೇವಪುರ ರಸ್ತೆ- ಉದಯಗಿರಿ ಸಿಗ್ನಲ್ ಜಂಕ್ಷನ್- ಸಮೋಸಾ ಕಾರ್ನರ್- ಕಾಳಿಕಾಂಭ ಜಂಕ್ಷನ್ ನಿಂದ ಮುಂದೆ ಸಾಗಬೇಕು. ಅಲ್ಲಿಂದ ಬಲ ತಿರುವು- ಅಬ್ಬಾ ರಸ್ತೆ- ಸರ್ಕಾರಿ ಉತ್ತರ ದ್ವಾರ ಜಂಕ್ಷನ್- ಪೈಲಟ್ ವೃತ್ತ- ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಆರ್ಚ ಜಂಕ್ಷನ್- ಎಡ ತಿರುವು- ಮಿನಿ ವಿಧಾನಸೌಧ ಜಂಕ್ಷನ್- ಹುತಾತ್ಮ ಹೇಮಚಂದ್ರ ವೃತ್ತ-ಹಾರ್ಡಿಂಜ್ ವೃತ್ತ- ಬಲ ತಿರುವು ಪಡೆದು ಬಿ.ಎನ್.ರಸ್ತೆ- ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣ ತಲುಪಬಹುದಾಗಿದೆ.
ಮೈಸೂರಿನಿಂದ ನಿರ್ಗಮನ ಮಾರ್ಗ ಬದಲಾವಣೆ
ಮೈಸೂರು ನಗರದಿಂದ ನಿರ್ಗಮಿಸುವ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ನಿಲ್ದಾಣದಿಂದ ಪೈಲೆಟ್ ಸರ್ಕಲ್ ಮೂಲಕ ಸರ್ಕಾರಿ ಅತಿಥಿಗೃಹ ಉತ್ತರ ಗೇಟ್-ಎಡತಿರುವು ಪಡೆದು ಡಾ. ಬಿ.ಆರ್.ಅಂಬೇಡ್ಕರ್ ವೃತ್ತ- ಡಾ. ರಾಜ್ ಕುಮಾರ್ ವೃತ್ತ- ಎಲ್.ಐ.ಸಿ ವೃತ್ತ- ಲಿಂಕ್ ರಸ್ತೆ ಜಂಕ್ಷನ್ ಓಲ್ಡ್ ಮೈಸೂರು ಮೂಲಕ ಸಾಗಿ ಬೆಂಗಳೂರು ರಸ್ತೆ-ದಂಡಿನ ಮಾರಮ್ಮ ದೇವಸ್ಥಾನ ಜಂಕ್ಷನ್- ಓಲ್ಡ್ ಟೋಲ್‌ಗೇಟ್- ನಾಡಪ್ರಭು ಕೆಂಪೇಗೌಡ ವೃತ್ತ- ಮೈಸೂರು-ಬೆಂಗಳೂರು ಎಕ್ಸ್‌ಪ್ರೆಸ್ ವೇ ಮೂಲಕ ಸಾಗಬೇಕೆಂದು ಪೊಲೀಸ್ ಆಯುಕ್ತರು ಅಧಿಸೂಚನೆಯಲ್ಲಿ ತಿಳಿಸಿದ್ದಾರೆ.


Click it and Unblock the Notifications
