KSRTC: ಖಾಸಗಿ ಬಸ್‌ಗೆ ಪೈಪೋಟಿ, ಬರಲಿದೆ ಬಹು ಬೇಡಿಕೆ ಮಾರ್ಗದಲ್ಲಿ ಸ್ಲೀಪರ್ ಎಸಿ ಬಸ್
ಬೆಂಗಳೂರು, ಫೆಬ್ರವರಿ 17: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್‌ಟಿಸಿ) ಖಾಸಗಿ ಬಸ್‌ಗಳಿಗೆ ಪೈಪೋಟಿ ನೀಡಲು ಮುಂದಾಗಿದೆ. ಇದಕ್ಕಾಗಿ ಬಹು ಬೇಡಿಕೆಯ ಮಾರ್ಗದಲ್ಲಿ ಎಸಿ ಸ್ಲೀಪರ್ ಬಸ್‌ಗಳನ್ನು ಓಡಿಸಲಿದೆ. ಮೊದಲ ಹಂತದಲ್ಲಿ ಅಂತರರಾಜ್ಯಗಳ ನಡುವೆ ಈ ಮಾದರಿ ಬಸ್‌ಗಳು ಸಂಚಾರವನ್ನು ನಡೆಸಲಿವೆ. 34 ಹೊಸ ಎಸಿ ಸ್ಲೀಪರ್ ಬಸ್ ವಿನ್ಯಾಸಕ್ಕೆ ಟೆಂಡರ್ ಸಹ ಕರೆಯಲಾಗಿದೆ.
ಬೆಂಗಳೂರು-ತಿರುವನಂತಪುರಂ, ಬೆಂಗಳೂರು-ತಲಸ್ಸೆರಿ ಸೇರಿದಂತೆ ಅತಿ ಹೆಚ್ಚು ಪ್ರಯಾಣಿಕರ ಬೇಡಿಕೆ ಇರುವ ಅಂತರರಾಜ್ಯ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಸ್ಲೀಪರ್ ಎಸಿ ಬಸ್‌ಗಳು ಸಂಚಾರ ನಡೆಸಲಿವೆ. ಈ ಮಾರ್ಗದಲ್ಲಿ ಖಾಸಗಿ ಬಸ್‌ಗಳು ಈಗಾಗಲೇ ಸಂಚಾರ ನಡೆಸುತ್ತಿದ್ದು, ದುಬಾರಿ ದರವಿದೆ.

ಎಸಿ ಸ್ಲೀಪರ್ ಬಸ್‌ಗಳ ವಿನ್ಯಾಸ, ತಯಾರಿ, ಪೂರೈಕೆ, ಪ್ರಾಯೋಗಿಕ ಸಂಚಾರಕ್ಕೆ ಈಗಾಗಲೇ ಕೆಎಸ್ಆರ್‌ಟಿಸಿ ಟೆಂಡರ್ ಕರೆದಿದೆ. ಮೊದಲ ಹಂತದಲ್ಲಿ 34 ಎಸಿ ಸ್ಲೀಪರ್ ಬಸ್‌ಗಳು ಸಂಚಾರ ನಡೆಸಲಿವೆ. 16 ರಿಂದ 20 ಗಂಟೆ ಅವಧಿಯ ಮಾರ್ಗದಲ್ಲಿ ಈ ಮಾದರಿ ಬಸ್‌ಗಳು ಓಡಲಿವೆ.
ಖಾಸಗಿ ಜೊತೆ ಪೈಪೋಟಿ: ಅಧಿಕಾರಿಗಳ ಮಾಹಿತಿ ಪ್ರಕಾರ ಎಸಿ ಸ್ಲೀಪರ್ ಬಸ್‌ಗಳು 13.5 ಮೀಟರ್ ಉದ್ದ ಇರಲಿವೆ. ಡೀಸೆಲ್ ಬಸ್‌ಗಳನ್ನು ಅಂತರರಾಜ್ಯ ಬಹು ಬೇಡಿಕೆಯ ಮಾರ್ಗದಲ್ಲಿ ಖಾಸಗಿ ಬಸ್‌ಗಳಿಗಿಂತ ಕಡಿಮೆ ದರದಲ್ಲಿ ಓಡಿಸಲಾಗುತ್ತದೆ. ಈ ಸೇವೆಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂದು ಅಂದಾಜಿಸಲಾಗಿದೆ.
ಹೊಸ ಬಸ್‌ಗಳ ಖರೀದಿಗೆ ಕೆಎಸ್ಆರ್‌ಟಿಸಿಗೆ 107 ಕೋಟಿ ಅನುದಾನ ಸಿಗಲಿದ್ದು ಈ ಅನುದಾನದ ಮೂಲಕ ಹಳೆಯ ಬಸ್‌ಗಳನ್ನು ಬದಲಾವಣೆ ಮಾಡಲು ನಿಗಮ ಮುಂದಾಗಿದೆ. ದರಗಳನ್ನು ಏರಿಕೆ ಮಾಡದೇ ಸೂಪರ್ ಫಾಸ್ಟ್ ಎಸಿ ಬಸ್‌ಗಳನ್ನು ಪರಿಚಯಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಏರ್‌ಪೋರ್ಟ್‌ಗೆ ಪ್ರಯಾಣ ಮಾಡುವ ಪ್ರಯಾಣಿಕರಿಗಾಗಿಯೇ ಎಸಿ ಸೆಮಿ-ಸ್ಲೀಪರ್ ಬಸ್‌ಗಳನ್ನು ಕೆಎಸ್ಆರ್‌ಟಿಸಿ ಓಡಿಸಲಿದೆ. ಮೊದಲು ಈ ಮಾದರಿ ಬಸ್‌ಗಳನ್ನು ಕೊಚ್ಚಿ ಏರ್‌ಪೋರ್ಟ್‌ಗೆ ಬಿಡಲಾಗಿತ್ತು. ಈ ಬಸ್‌ಗಳಿಗೆ ವೇಳಾಪಟ್ಟಿ ನಿಗದಿ ಮಾಡಿಲ್ಲ. ಏರ್‌ಪೋರ್ಟ್‌ಗೆ ವಿಮಾನ ಆಗಮನದ ಬಳಿಕ ಬಸ್‌ಗಳು ಹೊರಡಲಿವೆ.
ಏರ್‌ಪೋರ್ಟ್ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಲಗೇಜ್ ಇಡಲು ಹೆಚ್ಚಿನ ಸ್ಥಳಾವಕಾಶ ಇರುವ ಮಾದರಿಯ 30 ಬಸ್‌ಗಳನ್ನು ಕೆಎಸ್ಆರ್‌ಟಿಸಿ ಖರೀದಿ ಮಾಡಲಿದೆ. ರಾತ್ರಿ ಹೊತ್ತು ವಿಮಾನ ನಿಲ್ದಾಣದ ಪ್ರಯಾಣಿಕರಿಗಾಗಿಯೇ ಈ ಮಾದರಿ ಬಸ್‌ಗಳನ್ನು ಪರಿಚಯಿಸಲು ಚಿಂತನೆ ನಡೆಸಲಾಗಿದೆ.
ಕೆಎಸ್ಆರ್‌ಟಿಸಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ರಾಜ್ಯದ ವಿವಿಧ ನಗರಕ್ಕೆ ಫ್ಲೈ ಬಸ್ ಸೇವೆಯನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಅಂತರರಾಜ್ಯ ವಿಮಾನ ನಿಲ್ದಾಣದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ಹೊಸ ಬಸ್ ಸೇವೆ ಆರಂಭಿಸಲಾಗುತ್ತದೆ.
ಈಗಾಗಲೇ ಕೆಎಸ್ಆರ್‌ಟಿಸಿ ಕೇರಳ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಿಗೆ ಅಂತರರಾಜ್ಯ ಬಸ್ ಸೇವೆಗಳನ್ನು ನೀಡುತ್ತಿದೆ. ಆದರೆ ಈಗ ಬೆಂಗಳೂರು ನಗರದಿಂದ ಬಹು ಬೇಡಿಕೆ ಇರುವ ಮಾರ್ಗದಲ್ಲಿ ಎಸಿ ಸ್ಲೀಪರ್ ಬಸ್ ಸೇವೆ ಆರಂಭಿಸುವ ಮೂಲಕ ಖಾಸಗಿ ಬಸ್‌ಗೆ ಪೈಪೋಟಿ ನೀಡಲು ಮುಂದಾಗಿದೆ.












Click it and Unblock the Notifications