KRS Dam: ತಮಿಳುನಾಡಿಗೆ ಹರಿಸುತ್ತಿದ್ದ ನೀರಿನ ಪ್ರಮಾಣದಲ್ಲಿ ಭಾರಿ ಹೆಚ್ಚಳ!
ಕರ್ನಾಟಕದಲ್ಲಿ ಮಳೆ ಕೊರತೆ, ಬರದ ಛಾಯೆ ನಡುವೆ ಎಂದಿನಂತೆ ತಮಿಳುನಾಡು ಕಿರಿಕ್ ತೆಗೆದಿದೆ. ನೀರು ಇಲ್ಲದಿದ್ದರೂ, ನೀರು ಬಿಡಬೇಕು ಅಂತಾ ಒತ್ತಡ ಹಾಕುತ್ತಿದೆ ನೆರೆ ರಾಜ್ಯ. ಹೀಗಾಗಿ ತಮಿಳುನಾಡು ಒತ್ತಡಕ್ಕೆ ರಾಜ್ಯ ಸರ್ಕಾರ ಕೂಡ ಮಣಿದಂತೆ ಕಾಣುತ್ತಿದ್ದು, ಭಾರಿ ಪ್ರಮಾಣದಲ್ಲಿ ಕೆಆರ್‌ಎಸ್ ಡ್ಯಾಂನಿಂದ ನೀರು ರಿಲೀಸ್ ಆಗುತ್ತಿದೆ. ಪರಿಣಾಮ ಆಕ್ರೋಶ ಮೊಳಗಿದ್ದು, ಕನ್ನಡಿಗರ ಸಿಟ್ಟು ಹೆಚ್ಚಾಗಿದೆ.
ಕಾವೇರಿ ಕೊಳ್ಳದ ಪರಿಸ್ಥಿತಿ ಹೇಗಾಗಿದೆ ಎಂದರೆ, ಹಾವು ಸಾಯಬಾರದು ಅಥವಾ ಕೋಲೂ ಮುರಿಯಬಾರದು. ಹೀಗಿದ್ದಾಗ ನೀರು ಬಿಡಲು ಒತ್ತಡ ಜೋರಾಗಿದೆ. ಸರಿಯಾಗಿ ಮಳೆಯೇ ಬಾರದಿದ್ದರೆ ಎಲ್ಲಿಂದ ನೀರು ಬಿಡಲು ಆಗುತ್ತೆ? ಈಗಾಗಲೇ ತಮಿಳುನಾಡು ಸರ್ಕಾರ ತನ್ನ ಮೆಟ್ಟೂರು ಜಲಾಶಯದಲ್ಲಿದ್ದ ನೀರನ್ನ ಬೇಕಾಬಿಟ್ಟಿ ಖರ್ಚು ಮಾಡಿದೆ. ಆದ್ರೆ ಈಗ ನಮ್ಮ ಮೇಲೆ ಒತ್ತಡ ಹಾಕಿ ನೀರು ಕಿತ್ತುಕೊಳ್ಳುತ್ತಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊದಲೇ ಮುಂಗಾರು ಕೈಕೊಟ್ಟು ಚಿಂತೆ ಕಾಡುವಾಗ, ಮಧ್ಯದಲ್ಲಿ ಮತ್ತೊಂದು ಮುಳ್ಳು ಸಿಕ್ಕಿಕೊಂಡಿದೆ. ಹಾಗಾದರೆ ತಮಿಳುನಾಡಿಗೆ ಕೆಆರ್‌ಎಸ್ ಮೂಲಕ ಹರಿಯುತ್ತಿರುವ ನೀರಿನ ಪ್ರಮಾಣ ಎಷ್ಟು? ಮುಂದೆ ಓದಿ.

ಕೆಆರ್‌ಎಸ್ ಖಾಲಿ ಮಾಡಿಸುತ್ತಾ ತಮಿಳುನಾಡು?
ಜುಲೈನಲ್ಲಿ ಉತ್ತಮವಾಗಿ ಮಳೆ ಬಿದ್ದಿದ್ದನ್ನು ಬಿಟ್ಟರೆ ಈ ವರ್ಷ ಮುಂಗಾರು ಮಾರುತಗಳು ಕೈಕೊಟ್ಟಿವೆ. ಉತ್ತರ ಭಾರತದಲ್ಲಿ ಭಾರಿ ಮಳೆಯಿಂದ ಎಲ್ಲ ಕೊಚ್ಚಿಕೊಂಡು ಹೋಗ್ತಿದ್ದು, ಆದರೆ ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಬಹುತೇಕ ರಾಜ್ಯಗಳಲ್ಲಿ ಬರದ ಛಾಯೆಯ ಪರಿಣಾಮ ಜನ ತತ್ತರಿಸಿದ್ದಾರೆ. ಅದರಲ್ಲೂ ಕರ್ನಾಟಕದಲ್ಲಿ ನೀರಿಗಾಗಿ ಬರ ಕಿತ್ತಾಟ ಶುರು ಆಗಿದ್ದು, ಕಾವೇರಿ ನೀರಿನ ಕೊರತೆ ಕರ್ನಾಟಕದಲ್ಲಿ ಆತಂಕ ಮೂಡಿಸಿದೆ. ಇಷ್ಟು ಕಷ್ಟವಿದ್ರು ತಮಿಳುನಾಡಿಗೆ ಕೆಆರ್‌ಎಸ್ ಮೂಲಕ ಪ್ರತಿದಿನ ಸುಮಾರು 1 ಟಿಎಂಸಿ ನೀರು ಹರಿಯುತ್ತಿದೆ ಎಂಬುದು ಸಂಚಲನ ಸೃಷ್ಟಿಸಿದೆ. ಹೀಗಾಗಿ ಕೆಆರ್‌ಎಸ್ ಹೊರ ಹರಿವು 15,939 ಕ್ಯೂಸೆಕ್ ತಲುಪಿದೆ.
ತಮಿಳುನಾಡಿಗೆ ನೀರು.. ನಮಗೆ ಏನು?
ಕಳೆದ 5-6 ವರ್ಷದಿಂದ ಸತತವಾಗಿ ತುಂಬಿ ಹರಿದಿತ್ತು ಕೆಆರ್‌ಎಸ್ ಜಲಾಶಯ. ಆದರೆ ಈ ಬಾರಿ ಕೆಆರ್‌ಎಸ್ ತುಂಬುವುದು ಬಿಡಿ, ಕರ್ನಾಟಕದ ರೈತರಿಗೆ ಹಾಗೂ ಕುಡಿಯುವ ನೀರಿಗೆ ಬೇಕಾದ ಜಲ ಮೂಲವೇ ಸಿಕ್ಕಿಲ್ಲ. ಇಷ್ಟಾದರೂ ತಮಿಳುನಾಡು ಮಾತ್ರ ಬೇಕು ಅಂತಲೇ ತನ್ನ ಹಠ ಮುಂದುವರಿಸಿದ್ದು ಕೆಆರ್‌ಎಸ್ ಡ್ಯಾಂ ನೀರು ದಿನದಿಂದ ದಿನಕ್ಕೆ ಕುಸಿಯುತ್ತಿದೆ. ಕೆಆರ್‌ಎಸ್ ಡ್ಯಾಂನ ಗರಿಷ್ಠ ಮಟ್ಟ 124.80 ಅಡಿ, ಆದ್ರೆ ಇಂದಿನ ಮಟ್ಟ 110.6 ಅಡಿಗೆ ಕುಸಿತ ಕಂಡಿದೆ. ಒಳ ಹರಿವು ಕೇವಲ 2933 ಕ್ಯೂಸೆಕ್ ಆಗಿದೆ. ತಮಿಳುನಾಡಿಗೆ ನೀರು ಹರಿಸುತ್ತಿರುವ ಕಾರಣ ಹೊರ ಹರಿವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದ್ದು, ಕೆಆರ್‌ಎಸ್ ಜಲಾಶಯದ ಹೊರಹರಿವು 15,939 ಕ್ಯೂಸೆಕ್ ದಾಖಲಾಗಿದೆ.

ಮಳೆಯ ಕೊರತೆ ಕೇಳಿದರೆ ಭಯವಾಗುತ್ತೆ
ಈ ವರ್ಷ ಮುಂಗಾರು ಮಳೆ ಶುರುವಾಗಿದ್ದೇ ತಡವಾಗಿತ್ತು. ಹೀಗೆ ಕಾವೇರಿ ಕೊಳ್ಳದ ಭಾಗದಲ್ಲು ದುರ್ಬಲ ಮುಂಗಾರಿನ ಕಾರಣದಿಂದ ಕಾವೇರಿ ಜಲಾನಯನ ಪ್ರದೇಶದ ಅಣೆಕಟ್ಟುಗಳಿಗೆ ನೀರಿನ ಒಳಹರಿವು ಶೇ 42.54ರಷ್ಟು ತಗ್ಗಿದೆ. ಜೂನ್ 1, 2023ರಿಂದ ಆಗಸ್ಟ್ 9, 2023 ತನಕ ಕಾವೇರಿ ಕೊಳ್ಳದ ಅಣೆಕಟ್ಟುಗಳಾದ ಕಬಿನಿ, ಹಾರಂಗಿ, ಹೇಮಾವತಿ & ಕೆಆರ್‌ಎಸ್‌ನಲ್ಲಿ ಒಳ ಹರಿವಿನ ಪ್ರಮಾಣ 30 ವರ್ಷ ಸರಾಸರಿಗೆ ಹೋಲಿಸಿದರೆ ಶೇ 42.54ರಷ್ಟು ಇಳಿಮುಖವಾಗಿದೆ. ಜೂನ್ 1ರಿಂದ ಆಗಸ್ಟ್ 10ರ ತನಕ ಕೆಆರ್‌ಎಸ್ ಡ್ಯಾಂ ವ್ಯಾಪ್ತಿ ಪ್ರದೇಶಗಳಲ್ಲಿ ಶೇಕಡಾ 23ರಷ್ಟು, ಕಬಿನಿ ವ್ಯಾಪ್ತಿಯಲ್ಲಿ ಶೇ 22ರಷ್ಟು ಮಳೆ ಕೊರತೆಯಾಗಿದೆ. ಹೀಗೆ ಕರ್ನಾಟಕ ನೀರಿನ ಕೊರತೆಯಿಂದ ನರಳುವಾಗ ತಮಿಳುನಾಡು ಸರ್ಕಾರ ಹಾಗೂ ಅಲ್ಲಿನ ರಾಜಕಾರಣಿಗಳು ತಮ್ಮ ಹಠವನ್ನು ಮುಂದುವರಿಸಿದ್ದಾರೆ. ಹೀಗಾಗಿ ಮತ್ತೊಮ್ಮೆ ಕಾವೇರಿ ಕಿಚ್ಚು ಹೊತ್ತಿಕೊಳ್ಳುವ ಭಯವಿದೆ.












Click it and Unblock the Notifications