ಮಂತ್ರಿಗಿರಿ ಕೈ ತಪ್ಪಿದಕ್ಕಾಗಿ ಮುನಿಸು: ಅಪ್ಪ, ಮಗನ ಮುನಿಸು ಶಮನಗೊಳಿಸಲು ಡಿ ಕೆ ಶಿವಕುಮಾರ್ ಕಸರತ್ತು- ಆಗಿದ್ದೇನು?
ಬೆಂಗಳೂರು,ಡಿಸೆಂಬರ್ 28: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಜಯಗಳಿಸಿರುವ ಕಾಂಗ್ರೆಸ್ ಗೆ 2024 ರ ಲೋಕಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಹೀಗಾಗಿ ಕಾಂಗ್ರೆಸ್ ನಲ್ಲಿ ಸಚಿವ ಸ್ಥಾನ ಕೈ ತಪ್ಪಿದ ಹಿನ್ನಲೆ ಅಸಮಾಧಾನಗೊಂಡ ನಾಯಕರನ್ನ ಸಮಾಧನಗೊಳಿಸಲು ಕೆಪಿಸಿಸಿ ಅಧ್ಯಕ್ಷ ಕನಕಪುರ ಬಂಡೆ ಡಿ ಕೆ ಶಿವಕುಮಾರ್ ಕಸರತ್ತು ನಡೆಸಿದ್ದಾರೆ.
ಹೌದು, ಮಂತ್ರಿಗಿರಿಗಾಗಿ ಬೇಡಿಕೆ ಇಟ್ಟಿದ್ದ ವಿಜಯನಗರ ಶಾಸಕ ಎಂ ಕೃಷ್ಣಪ್ಪ ಹಾಗೂ ಗೋವಿಂದರಾಜನಗರ ಶಾಸಕ ಪ್ರಿಯಕೃಷ್ಣ ಸಚಿವ ಸ್ಥಾನಕ್ಕೆ ಕೈ ತಪ್ಪಿದ ಹಿನ್ನಲೆ ಮುನಿಸಿಕೊಂಡಿದ್ದಾರೆ. ಅಲ್ಲದೇ ಮಾಜಿ ಸಚಿವ ವಿ ಸೋಮಣ್ಣ ಅವರು ಕಾಂಗ್ರೆಸ್ ಗೆ ಕರೆತರುವ ಪ್ರಯತ್ನ ನಡೆಯುತ್ತಿದೆ ಎನ್ನಲಾಗಿದ್ದು, ಹಿರಿಯ ಕಾಂಗ್ರೆಸ್ ನಾಯಕರ ನಡೆಗೆ ಎಂ ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಬೇಸರಗೊಂಡಿದ್ದಾರೆ.

ಕಳೆದು ಎರಡು ದಿನಗಳ ಹಿಂದೆ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಈ ಇಬ್ಬರು ನಾಯಕರನ್ನ ಭೇಟಿ ಮಾಡಿ ಅಸಮಾಧಾನ ಶಮನಕ್ಕೆ ಮಾತುಕತೆ ನಡೆಸಿದ್ದಾರೆ. ಇನ್ನೂ ಪಕ್ಷದ ಕಾರ್ಯ ಚಟುಕವರಿಕೆಯಲ್ಲಿ ಭಾಗವಹಿಸದೇ ಪಕ್ಷದ ನಾಯಕರೊಂದಿಗೆ ತಂದೆ ಹಾಗೂ ಮಗ ಅಂತರವನ್ನ ಕಾಯ್ದುಕೊಂಡಿದ್ದಾರೆ. ಅಲ್ಲದೇ ಬೆಂಗಳೂರು ಅಭಿವೃದ್ದಿ ಸಚಿವರಾದ ಡಿ ಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಗಳಿಗೂ ಈ ಇಬ್ಬರು ನಾಯಕರು ಗೈರಾಗುವ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ.
ಹೀಗಾಗಿ ಲೋಕಸಭಾ ಚುನಾವಣೆಗೆ ತಯಾರಿ ನಡೆಸುತ್ತಿರುವ ಡಿ ಕೆ ಶಿವಕುಮಾರ್ ಬೆಂಗಳೂರು ವ್ಯಾಪ್ತಿಯಲ್ಲಿ ಹೆಚ್ಚು ಸ್ಥಾನವನ್ನ ಗೆಲ್ಲುವ ನಿಟ್ಟಿನಲ್ಲಿ ತಮ್ಮ ಪಕ್ಷದ ನಾಯಕರ ಅಸಮಾಧಾನವನ್ನ ಶಮನಗೊಳಿಸಲು ಮುಂದಾಗಿದ್ದು, ಮಾತುಕತೆ ನಡೆಸಿದ್ದಾರೆ. ಆದರೆ ಇಬ್ಬರನ್ನು ಸಮಾಧಾನಪಡಸುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರ ಯತ್ನ ಫಲ ನೀಡಿಲ್ಲ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಸಚಿವ ಸ್ಥಾನ ಪಡೆದೇ ತೀರುತ್ತೇನೆ ಎಂದು ಹಠಕ್ಕೆ ಬಿದ್ದಿರುವ ವಿಜಯನಗರ ಶಾಸಕ ಕೃಷ್ಣಪ್ಪ, ಪುತ್ರನಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಸ್ಥಾನ ನೀಡುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನೀಡಿದ ಭರವಸೆ ನೀಡಿದ್ದಾರೆ. ಆದರೆ, ಡಿ ಕೆ ಶಿವಕುಮಾರ್ ಭರವಸೆಗೆ ತಂದೆ ಹಾಗೂ ಪುತ್ರ ಮಣಿದಿಲ್ಲ. ತಮ್ಮನ್ನು ಕಡೆಗಣಿಸಿ ವಿ. ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಕರೆತರಲು ಶಿವಕುಮಾರ್ ತಂತ್ರ ರೂಪಿಸಿದ್ದಾರೆಂಬ ಕಾರಣಕ್ಕೆ ಕೃಷ್ಣಪ್ಪ ಸಿಡಿಮಿಡಿಗೊಂಡಿದ್ದಾರೆ ಎಂದು ಅವರ ಅಪ್ತ ಮೂಲಗಳು ಹೇಳಿವೆ.












Click it and Unblock the Notifications