KPSC: ಆ.27ರಂದು ಪೂರ್ವಭಾವಿ ಪರೀಕ್ಷೆ, ಪ್ರಶ್ನೆ ಪತ್ರಿಕೆ ಮುದ್ರಣ ಕುರಿತು ಪ್ರಶ್ನೆ
ಬೆಂಗಳೂರು, ಆಗಸ್ಟ್ 12: ಕೆಪಿಎಸ್‌ಸಿ ಆಗಸ್ಟ್ 27ರಂದು 2023-24ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ನೇಮಕಾತಿ ಪೂರ್ವಭಾವಿ ಪರೀಕ್ಷೆ ನಡೆಸಲಿದೆ. ಈಗಾಗಲೇ ಪರೀಕ್ಷೆ ವೇಳಾಪಟ್ಟಿ ಘೋಷಣೆ ಮಾಡಲಾಗಿದೆ. ಆದರೆ ಈಗ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮುದ್ರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆಗಳನ್ನು ಎತ್ತಲಾಗಿದೆ. ಪರೀಕ್ಷೆಯ ದಿನಾಂಕವನ್ನು ಮುಂದೂಡಿಕೆ ಮಾಡಿ ಅಭ್ಯರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಲಾಗಿದೆ.
ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ) ಕಾರ್ಯದರ್ಶಿಗಳು ಈಗಾಗಲೇ ಗೆಜೆಟೆಡ್ ಪ್ರೊಬೇಷನರ್ಸ್ 384 ಹುದ್ದೆಗಳ ಪೂರ್ವಭಾವಿ ಪರೀಕ್ಷೆ ವೇಳಾಪಟ್ಟಿ ಪ್ರಕಟಿಸಿದ್ದಾರೆ. ಒಟ್ಟು ಎರಡು ಪತ್ರಿಕೆಗಳ ಪರೀಕ್ಷೆಗಳು ಆಗಸ್ಟ್ 27ರ ಮಂಗಳವಾರ ಒಂದೇ ದಿನ ನಡೆಯಲಿದೆ. ಬೆಳಗ್ಗೆ 10 ರಿಂದ 12 ಗಂಟೆಯ ತನಕ ಪತ್ರಿಕೆ-1, ಮಧ್ಯಾಹ್ನ 2 ರಿಂದ 4 ಗಂಟೆಯ ತನಕ ಪತ್ರಿಕೆ-2ರ ಪರೀಕ್ಷೆಗಳು ನಿಗದಿಯಾಗಿದೆ.

ವರದಿಗಳ ಪ್ರಕಾರ ಗೆಜೆಟೆಡ್ ಪ್ರೊಬೇಷನರ್ಸ್ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಈಗಾಗಲೇ ಮುದ್ರಣವಾಗಿದೆ. ಪರೀಕ್ಷೆಗೆ ಒಂದು ವಾರ ಮೊದಲು ಪ್ರಶ್ನೆ ಪತ್ರಿಕೆ ಮುದ್ರಣ ಮಾಡಬೇಕು. ಕೇಂದ್ರ ಲೋಕಸೇವಾ ಆಯೋಗ ಇದೇ ಮಾದರಿ ಅನುಸರಿಸುತ್ತದೆ. ಆದರೆ ಈಗ ತರಾತುರಿಯಲ್ಲಿ ಪತ್ರಿಕೆ ಮುದ್ರಣ ಮಾಡಿದ್ದು ಏಕೆ? ಎಂದು ಪ್ರಶ್ನೆ ಮಾಡಲಾಗಿದೆ.
ಬಿಜೆಪಿ ನಾಯಕರ ಪ್ರಶ್ನೆ: ರಾಜ್ಯದ ಪ್ರತಿಪಕ್ಷ ಬಿಜೆಪಿ ನಾಯಕ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದಾರೆ. 'ಪ್ರಶ್ನೆ ಪತ್ರಿಕೆ ಪರೀಕ್ಷೆ ನಿಗದಿ ಆಗಿರುವ ಒಂದು ವಾರದ ಹಿಂದೆಯಷ್ಟೇ ಮುದ್ರಣ ಆಗಬೇಕು. ಲೋಕಸೇವಾ ಆಯೋಗವು ಈಗಾಗಲೇ ಮುದ್ರಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ' ಎಂದು ಹೇಳಿದ್ದಾರೆ.
'ಕೇಂದ್ರ ಲೋಕಸೇವಾ ಆಯೋಗ ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ ಮಾಡುತ್ತವೆ. ಪ್ರಶ್ನೆ ಪತ್ರಿಕೆಗಳು ಸೋರಿಕೆ ಆಗಬಾರದು ಹಾಗೂ ಪರೀಕ್ಷೆಯ ಪಾರದರ್ಶಕತೆಯನ್ನು ಪಾಲಿಸುವ ಸಲುವಾಗಿ ಈ ರೀತಿಯಾದ ಕ್ರಮವನ್ನು ಪಾಲಿಸಲಾಗಿದೆ' ಎಂದು ತಿಳಿಸಿದ್ದಾರೆ.
'ಆದರೆ, ಲೋಕಸೇವಾ ಆಯೋಗ ಮಾತ್ರ KAS ಪರೀಕ್ಷೆಯ ಒಂದು ತಿಂಗಳ ಮುಂಚೆ ಪತ್ರಿಕೆ ಮುದ್ರಣ ಮಾಡಿಟ್ಟುಕೊಂಡಿರುವುದು ಸಾಕಷ್ಟು ಅನುಮಾನ ಮೂಡಿಸಿದೆ. ಲೋಕಸೇವಾ ಆಯೋಗವು ಇದರ ಬಗ್ಗೆ ಸ್ಪಷ್ಟೀಕರಣವನ್ನು ನೀಡಬೇಕು. ಈಗಾಗಲೇ ಇರುವ ಪ್ರಮಾಣಿತ ಕಾರ್ಯ ವಿಧಾನ (Standard Operating Procedure)ನ ಬಿಟ್ಟು ಅವರ ಇಷ್ಟದಂತೆ ಮುದ್ರಣ ಮಾಡಿಟ್ಟುಕೊಳ್ಳುವುದು ಯಾಕೆ? ಅಂತ ತಿಳಿಸಲಿ' ಎಂದು ಒತ್ತಾಯಿಸಿದ್ದಾರೆ.
ಪ್ರಶ್ನೆ ಪತ್ರಿಕೆ ಪರೀಕ್ಷೆ ನಿಗದಿ ಆಗಿರುವ ಒಂದು ವಾರದ ಹಿಂದೆಯಷ್ಟೇ ಮುದ್ರಣ ಆಗಬೇಕು. ಲೋಕಸೇವಾ ಆಯೋಗವು [KPSC] ಈಗಾಗಲೇ ಮುದ್ರಣ ಮಾಡಿರುವುದು ಸಾಕಷ್ಟು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
— Basanagouda R Patil (Yatnal) (@BasanagoudaBJP) August 10, 2024
ಕೇಂದ್ರ ಲೋಕಸೇವಾ ಯೋಗ [UPSC] ಸೇರಿದಂತೆ ಪರೀಕ್ಷೆ ನಡೆಸುವ ಪ್ರಾಧಿಕಾರಗಳು ಒಂದು ವಾರದ ಹಿಂದೆಯಷ್ಟೇ ಪ್ರಶ್ನೆ ಪತ್ರಿಕೆಗಳನ್ನು ಮುದ್ರಣ… pic.twitter.com/4buWXhqcR7
ಈ ಮೊದಲು ಕೆಪಿಎಸ್‌ಸಿ ಪೂರ್ವಭಾವಿ ಪರೀಕ್ಷೆಯನ್ನು ಆಗಸ್ಟ್ 25ರಂದು ನಡೆಸಲು ವೇಳಾಪಟ್ಟಿ ಘೋಷಣೆ ಮಾಡಿತ್ತು. ಆದರೆ ಅಂದು ಐಬಿಪಿಎಸ್ ಪರೀಕ್ಷೆ ಇರುವ ಕಾರಣ ಪರೀಕ್ಷೆಗಳನ್ನು ಮುಂದೂಡಬೇಕು ಎಂದು ಒತ್ತಾಯಿಸಲಾಗಿತ್ತು. ಸ್ವತಃ ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಹ ಸೂಚನೆ ನೀಡಿದ್ದರು. ಆದ್ದರಿಂದ ಪರೀಕ್ಷೆಗಳನ್ನು ಅಲ್ಪಕಾಲ ಮುಂದೂಡಿಕೆ ಮಾಡಿ, ಆಗಸ್ಟ್ 27ಕ್ಕೆ ನಿಗದಿ ಮಾಡಲಾಗಿತ್ತು.
ಸರ್ಕಾರ ಅಭ್ಯರ್ಥಿಗಳ ಮನವಿಗೆ ಸ್ಪಂದಿಸಿ 2017-18ನೇ ಸಾಲಿನ ಗೆಜೆಟೆಡ್ ಪ್ರೊಬೇಷನರಿ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದ ಎಲ್ಲಾ ಅಭ್ಯರ್ಥಿಗಳಿಗೆ ವಯಸ್ಸಿನ ನಿರ್ಬಂಧವಿಲ್ಲದೆ ಒಂದು ಬಾರಿಗೆ ಸೀಮಿತಗೊಳಿಸಿ (one time measure) 2023-24ರ ನೇಮಕಾತಿಗೂ ಅರ್ಜಿ ಸಲ್ಲಿಸಲು ಹೆಚ್ಚುವರಿ ವಿಶೇಷ ಅವಕಾಶವನ್ನು ನೀಡಿತ್ತು. ಆದರೆ ಈ ಅಭ್ಯರ್ಥಿಗಳಿಗೆ ಪೂರ್ವಭಾವಿ ಪರೀಕ್ಷೆಗೆ ತಯಾರಾಗಲು ಕೇವಲ 1 ತಿಂಗಳ ಅವಕಾಶ ಸಿಕ್ಕಿದೆ. ಆದ್ದರಿಂದ ಪೂರ್ವಭಾವಿ ಪರೀಕ್ಷೆಯನ್ನು ಮತ್ತೆ ಮುಂದೂಡಿಕೆ ಮಾಡಬೇಕು ಎಂದು ಆಗ್ರಹಿಸಲಾಗುತ್ತಿದೆ.
ಸದ್ಯದ ಮಾಹಿತಿ ಪ್ರಕಾರ ಆಗಸ್ಟ್ 27ರ ಮಂಗಳವಾರ ಒಂದೇ ದಿನ ಪತ್ರಿಕೆ-1, ಪತ್ರಿಕೆ-2ರ ಪೂರ್ವಭಾವಿ ಪರೀಕ್ಷೆಗಳು ನಿಗದಿಯಾಗಿದೆ. ಪರೀಕ್ಷೆಗೆ ಎಲ್ಲಾ ತಯಾರಿಯನ್ನು ಮಾಡಿಕೊಳ್ಳಲಾಗಿದೆ. ಆದ್ದರಿಂದ ಮತ್ತೆ ಪರೀಕ್ಷೆಯನ್ನು ಮುಂದೂಡಿಕೆ ಮಾಡುವ ಸಾಧ್ಯತೆ ಕಡಿಮೆ ಇದೆ, ಆಗಸ್ಟ್ 15ರ ನಂತರ ಅಭ್ಯರ್ಥಿಗಳು ಕೆಪಿಎಸ್‌ಸಿ ವೆಬ್‌ಸೈಟ್‌ನಲ್ಲಿ ಹಾಲ್ ಟಿಕೆಟ್ ಡೌನ್‌ಲೋಡ್ ಮಾಡಿಕೊಳ್ಳಬಹುದು.












Click it and Unblock the Notifications