ಕೋಲಾರ : ಹೆಣ್ಣು ಕೊಡದ ಮಾವನನ್ನು ಕೊಚ್ಚಿ ಕೊಂದ
ಕೋಲಾರ, ಜೂ.9 : ಹೆಣ್ಣು ಕೊಡಲು ನಿರಾಕರಿಸಿದ ಮಾವನನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ ಸೋದರ ಅಳಿಯ ಪೊಲೀಸರ ಗುಂಡಿಗೆ ಬಲಿಯಾದ ಘಟನೆ ಕೋಲಾರ ಜಿಲ್ಲೆಯ ಕಾಜಿಕಲ್ಲಹಳ್ಳಿ ಗ್ರಾಮದಲ್ಲಿ ಭಾನುವಾರ ತಡರಾತ್ರಿ ನಡೆದಿದೆ.
ಸೋದರಳಿಯನಿಂದ ಹತ್ಯೆಯಾದವರನ್ನು ಮುನಿಯಪ್ಪ (51) ಎಂದು ಗುರುತಿಸಲಾಗಿದೆ. ಮಾವನನ್ನು ಕೊಂದ ಅಳಿಯ ರಾಮು, ಪೊಲೀಸರು ಮೇಲೆಯೂ ಹಲ್ಲೆಗೆ ಯತ್ನಿಸಿದ್ದರಿಂದ ಅವನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಇದರಿಂದ ಗಾಯಗೊಂಡ ಆತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ರಾಮುವಿನ ಹಲ್ಲೆಯಿಂದಾಗಿ ಪೊಲೀಸ್ ಪೇದೆಯೊಬ್ಬರು ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆ ವಿವರ : ಮೃತ ಮುನಿಯಪ್ಪ ಅವರ ಮಗಳನ್ನು ರಾಮು ವಿವಾಹವಾಗಲು ಇಚ್ಛಿಸಿದ್ದ. ಈ ಕುರಿತು ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆಯುತ್ತಿತ್ತು. ಆದರೆ, ಮುನಿಯಪ್ಪ ಅವರು ಮಾತ್ರ ರಾಮುವಿಗೆ ಮಗಳನ್ನು ಕೊಡುವುದಿಲ್ಲ ಎಂದು ಹಠ ಹಿಡಿದಿದ್ದರು.
ಭಾನುವಾರ ರಾತ್ರಿ ಮದುವೆಯೊಂದಕ್ಕೆ ಮನಿಯಪ್ಪ ಕುಟುಂಬ ತೆರಳಿತ್ತು. ರಾಮುವೂ ಆ ಮದುವೆ ಮುಗಿದ ನಂತರ ಮುನಿಯಪ್ಪ ಮನೆಗೆ ಬಂದಿದ್ದ. ರಾತ್ರಿ ಸುಮಾರು 11 ಗಂಟೆಯ ವೇಳೆಗೆ ರಾಮು, ಮನೆಯ ಕಿಟಕಿ ಮತ್ತು ಬಾಗಿಲುಗಳನ್ನು ಮುಚ್ಚಿ, ಮಚ್ಚಿನಿಂದ ಮುನಿಯಪ್ಪನ ಮೇಲೆ ಹಲ್ಲೆ ನಡೆಸಿದ್ದಾನೆ. ತಕ್ಷಣ ಮುನಿಯಪ್ಪ ಪತ್ನಿ ವೆಂಕಟಮ್ಮ ಜೋರಾಗಿ ಕೂಗಿಕೊಂಡಿದ್ದಾರೆ.
ಮನೆಯವರ ಚೀರಾಟ ಕೇಳಿ ಆಗಮಿಸಿದ ಅಕ್ಕಪಕ್ಕದ ಮನೆಯವರು ರಾಮುವಿನ ಮನವೊಲಿಸಲು ಮುಂದಾಗಿದ್ದಾರೆ. ಆದರೆ, ಅವನು ಒಪ್ಪದಿದ್ದಾಗ ಪೊಲೀಸರಿಗೆ ಕರೆ ಮಾಡಿದ್ದಾರೆ. ತಡರಾತ್ರಿ 1.30ರ ವೇಳೆಗೆ ವೇಮಗಲ್ ಪೊಲೀಸ್ ಠಾಣೆಯ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿದರು. ರಾಮುವಿನ ಮನವೊಲಿಸಲು ಅವರ ನಡೆಸಿದ ಪ್ರಯತ್ನವೂ ವಿಫಲವಾಗಿದೆ. ಅಷ್ಟರಲ್ಲೇ ಮಚ್ಚಿನ ಏಟು ತಿಂದಿದ್ದ ಮುನಿಯಪ್ಪ ಮೃತಪಟ್ಟಿದ್ದ.
ಪೊಲೀಸರ ಮೇಲೆ ಹಲ್ಲೆ : ಮನೆಯ ಬಾಗಿಲು ತೆರೆಯುವಂತೆ ಪೊಲೀಸರು ಮಾಡಿದ ಮನವಿಗೆ ರಾಮು ಸ್ಪಂದಿಸದಿದ್ದಾಗ ಪೊಲೀಸ್ ಪೇದೆಯನ್ನು ಮನೆಯೊಳಗೆ ಕಳುಹಿಸಿದ್ದಾರೆ. ಆಗ ಅವರ ಮೇಲೆಯೂ ಮಚ್ಚಿನಿಂದ ಹಲ್ಲೆ ಮಾಡಿದ ರಾಮು ಅವರ ಗನ್ ಕಸಿದುಕೊಂಡು ಮನೆಯಿಂದ ಹೊರಗೋಡಿ ಬಂದಿದ್ದಾನೆ.
ಪೊಲೀಸರು ಮೊದಲು ಶರಣಾಗುವಂತೆ ರಾಮುವಿಗೆ ಮನವಿ ಮಾಡಿದ್ದಾರೆ. ನಂತರ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಪೊಲೀಸರಿಗೆ ರಾಮು ಗುಂಡು ಹಾರಿಸಲು ಮುಂದಾದಾಗ ಪೊಲೀಸರು ಅವನಿಗೆ ಗುಂಡು ಹಾರಿಸಿದ್ದಾರೆ. ತೊಡೆ ಮತ್ತು ಹೊಟ್ಟೆಯ ಭಾಗಕ್ಕೆ ಪೊಲೀಸರ ಗುಂಡು ತಗುಲಿದ ರಾಮು ಕುಸಿದು ಬಿದ್ದಿದ್ದಾನೆ.
ತಕ್ಷಣ ರಾಮುವನ್ನು ಆರ್.ಎಲ್. ಜಾಲಪ್ಪ ಆಸ್ಪತ್ರೆಗೆ ದಾಖಲಿಸಲಾಯಿತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಕರೆತರಲಾಯಿತು. ಸೋಮವಾರ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರಾಮು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ವೇಮಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications