ಕೋಲಾರ ಕದನ: ಕಾಂಗ್ರೆಸ್‌ನಲ್ಲಷ್ಟೇ ಇಲ್ಲ ಗುಂಪುಗಾರಿಕೆ; ಬಿಜೆಪಿಯಲ್ಲೂ ಇದೆ ಟಿಕೆಟ್ ಫೈಟ್!
ಸಿದ್ದರಾಮಯ್ಯ ಸ್ಪರ್ಧೆಯಿಂದಾಗಿ ಕೋಲಾರ ಕದನ ಸಾಕಷ್ಟು ಪ್ರಾಮುಖ್ಯತೆಯನ್ನ ಪಡೆದಿದ್ದು, ಕೋಲಾರ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಏರ್ಪಟಿದೆ.
ಬೆಂಗಳೂರು,ಮಾರ್ಚ್ 6: ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇತ್ತ ರಾಜಕೀಯ ಪಕ್ಷಗಳು ಭರ್ಜರಿ ಪ್ರಚಾರವನ್ನ ಆರಂಭಿಸಿದೆ. ಆದರೆ, ಈ ಬಾರೀ ಸಾಕಷ್ಟು ಕುತೂಹಲವನ್ನ ಹುಟ್ಟಿಸಿದ ಕ್ಷೇತ್ರ ಅಂದ್ರೆ ಅದು ಕೋಲಾರ.
ಹೌದು, ಕಾಂಗ್ರೆಸ್ ನ ಪ್ರಭಾವಿ ನಾಯಕ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈ ಬಾರಿ ಕೋಲಾರದಿಂದ ಸ್ಪರ್ಧೆಗೆ ರೆಡಿಯಾಗಿದ್ದಾರೆ. ಇತ್ತ ಬಿಜೆಪಿ ನಾಯಕರು ಸಿದ್ದರಾಮಯ್ಯ ಅವರನ್ನ ಚುನಾವಣೆಯಲ್ಲಿ ಸೋಲಿಸಲು ಸಾಕಷ್ಟು ತಯಾರಿ ನಡೆಸಿದ್ದಾರೆ. ಇತ್ತ ವರ್ತೂರ್ ಪ್ರಕಾಶ್ ನಾನು ಬಿಜೆಪಿ ಅಭ್ಯರ್ಥಿ ಎಂದು ಹೇಳಿದ್ದು, ಆದರೆ ಇದುವರೆಗೂ ಬಿಜೆಪಿ ಅಭ್ಯರ್ಥಿ ಮಾತ್ರ ಅಧಿಕೃತವಾಗಿ ಘೋಷಣೆಯಾಗಿಲ್ಲ.
ಕೋಲಾರದಲ್ಲಿ ಕೆ.ಹೆಚ್ ಮುನಿಯಪ್ಪ ಹಾಗೂ ಮಾಜಿ ಸ್ವೀಕರ್ ರಮೇಶ್ ಕುಮಾರ್ ನಡುವೆ ಜಿದ್ದಾಜಿದ್ದಿ ನಡೆಯುತ್ತಿದ್ದು, ಈ ಮಧ್ಯ ಸಿದ್ದರಾಮಯ್ಯ ಸ್ಪರ್ಧಿಯಿಂದಾಗಿ ಇಬ್ಬರು ನಾಯಕರ ನಡುವಿನ ಜಿದ್ದಾಜಿದ್ದಿ ಶಮನವಾಗಿದೆ ಎಂದು ಹೇಳಲಾಗಿದೆ. ಇನ್ನೂ ಕಾಂಗ್ರೆಸ್ ನಲ್ಲಿ ಮಾತ್ರವಲ್ಲದೆ ಬಿಜೆಪಿಯಲ್ಲೂ ಗುಂಪುಗಾರಿಕೆ, ಟಿಕೆಟ್ ಗಾಗಿ ಮೂಲ ಹಾಗೂ ವಲಸಿಗರ ನಡುವೆ ಬಿರುಕು ಹೆಚ್ಚಾಗಿದೆ. ಇತ್ತ ಈ ಗುಂಪುಗಾರಿಕೆಯಿಂದಾಗಿ ಚುನಾವಣೆ ವೇಳೆ ಸಾಕಷ್ಟು ಸಮಸ್ಯೆಗಳು ಉದ್ಭವಿಸುತ್ತವೆ ಎಂದು ಗುಂಪುಗಾರಿಕೆಯ ಬಿಸಿಯನ್ನ ಶಮನ ಮಾಡುವ ತಂತ್ರ ಬಿಜೆಪಿಯಿಂದ ನಡೆಯುತ್ತಿದೆ.

ಕೋಲಾರದಲ್ಲಿ ಟಿಕೆಟ್ ಗಾಗಿ ಮೂಲ-ವಲಸಿಗರಲ್ಲಿ ಫೈಟ್?
ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಮೂಲ ಹಾಗೂ ವಲಸಿಗರ ನಡುವೆ ಟಿಕೆಟ್ ಗಾಗಿ ಪೈಟ್ ಜೋರಾಗಿ ನಡೆಯುತ್ತಿದೆ. ಒಂದೆಡೆ ಮೂಲ ಬಿಜೆಪಿಗರಲ್ಲಿ ಗುರುತಿಸಿಕೊಂಡಿರುವ ಹಾಗೂ ಸಂಸದ ಮುನಿಸ್ವಾಮಿ ಅವರ ಬೆಂಬಲಿಗರಾದ ಓಂಶಕ್ತಿ ಚಲಪತಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಇತ್ತ, ಜಿಲ್ಲಾ ಉಸ್ತುವಾರಿಯಾಗಿರುವ ಸಚಿವ ಮುನಿರತ್ನ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ವಲಸೆ ಬಿಜೆಪಿಗರಾದ ವರ್ತೂರ್ ಪ್ರಕಾಶ್ ನಡುವೆ ಬಿಜೆಪಿಯಲ್ಲೇ ಟಿಕೆಟ್ಗಾಗಿ ಪೈಪೋಟಿ ಇದೆ. ಆದರೆ, ಈ ಇಬ್ಬರು ಟಿಕೆಟ್ ಆಕಾಂಕ್ಷಿಗಳ ನಡುವಿನ ಅಸಮಾಧಾನವನ್ನ ಶಮನ ಮಾಡುವ ಪ್ರಯತ್ನವಂತು ಇನ್ನೂ ಯಶಸ್ಸಿಯಾಗಿಲ್ಲ ಎನ್ನಲಾಗಿದೆ.

ಮಾಲೂರಿನಲ್ಲೂ ಟಿಕೆಟ್ ಗಾಗಿ ಫೈಟ್! ಯಾರಿಗೆ ಟಿಕೆಟ್?
ಹೇಳಿಕೇಳಿ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಮುನಿರತ್ನ ಅವರು ಕೋಲಾರ ಜಿಲ್ಲೆಗೆ ಉಸ್ತುವಾರಿಯಾಗಿ ಬಂದಾಗಿನಿಂದ ಮೂಲ ಬಿಜೆಪಿಗರಿಗೂ ಹಾಗೂ ಮುನಿರತ್ನ ಬೆಂಬಲಿಗರಲ್ಲಿ ಗುಂಪುಗಾರಿಕೆ ಆರಂಭವಾಗಿದೆ. ಇನ್ನೂ ಮಾಲೂರು ವಿಧಾನಸಭಾ ಕ್ಷೇತ್ರದಲ್ಲೂ ಮೂಲ ಬಿಜೆಪಿಗರಾದ ವಿಜಯ ಕುಮಾರ್ ಅವರು ಹಲವು ವರ್ಷಗಳಿಂದ ಪಕ್ಷ ಸಂಘಟನೆಯನ್ನ ಮಾಡಿಕೊಂಡು ಬಂದಿದ್ದಾರೆ. ಇತ್ತ ಸಚಿವ ಮುನಿರತ್ನ ಅವರ ಗುಂಪಿನಲ್ಲಿ ಗುರುತಿಸಿಕೊಂಡಿರುವ ಹಾಗೂ ಜೆಡಿಎಸ್ ತೊರೆದ ಬಿಜೆಪಿ ಸೇರ್ಪಡೆಗೊಂಡ ಮಾಜಿ ಶಾಸಕ ಮಂಜುನಾಥ ಗೌಡ ಅವರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ಇಬ್ಬರ ನಡುವೆ ಟಿಕೆಟ್ ಗಾಗಿ ಬಾರಿ ಫೈಪೋಟಿ ಏರ್ಪಟ್ಟಿದು, ವಿಜಯ್ ಕುಮಾರ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ.

ಕೆಜಿಎಫ್ನಲ್ಲೂ ಟಿಕೆಟ್ ಗಾಗಿ ಪೈಪೋಟಿ!
ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಕಾಂಗ್ರೆಸ್ ಶಾಸಕರಾಗಿರುವ ರೂಪಕಲಾ ಶಶಿಧರ್ ಕಳೆದ ವಿಧಾನಸಭಾ ಚುನಾವಣೆಯಲ್ಲಿ 40,850 ಮತಗಳ ಅಂತರದಿಂದ ಗೆಲುವು ಸಾದಿಸಿದ್ದು, ಈ ಬಾರಿಯೂ ಸಹ ಕ್ಷೇತ್ರದಲ್ಲಿ ತಮ್ಮ ವರ್ಚಸ್ಸು ಹೆಚ್ಚಾಗಿದೆ. ಈ ನಡುವೆ ಬಿಜೆಪಿಯಲ್ಲಿ ಟಿಕೆಟ್ ಗಾಗಿ ಪೈಪೋಟಿ ಏರ್ಪಟಿದೆ. 2018 ರಲ್ಲಿ ಸ್ಪರ್ಧೆ ನಡೆಸಿ ಸೋಲು ಕಂಡಿದ್ದ ಅಶ್ವಿನಿ ಸಂಪಂಗಿ ಒಂದು ಕಡೆ ಟಿಕೆಟ್ ಗಾಗಿ ಪ್ರಯತ್ನ ಪಡುತ್ತಿದ್ದಾರೆ.
ಇತ್ತ ಟಿಕೆಟ್ ಗಾಗಿ ಮೂಲ ಹಾಗೂ ವಲಸಿಗರ ನಡುವೆ ತಿಕ್ಕಾಟ ಹೆಚ್ಚಾಗಿದ್ದು, ಸಚಿವ ಮುನಿರತ್ನ ಅವರ ಬೆಂಬಲಿಗರಾಗಿರುವ ಮಾಜಿ ಶಾಸಕ ವೈ ಸಂಪಂಗಿ ಟಿಕೆಟ್ ಗಾಗಿ ಬೇಡಿಕೆ ಇಟ್ಟಿದ್ರೆ, ಅತ್ತ ಸಂಸದ ಮುನಿಸ್ವಾಮಿ ಬೆಂಬಲಿಗನಾಗಿರುವ ಮೋಹನ್ ಕೃಷ್ಣ ಅವರು ಪ್ರಬಲ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಬಂಗಾರಪೇಟೆಯಲ್ಲೂ ಟಿಕೆಟ್ ಗಾಗಿ ಭುಗಿಲೆದ್ದ ಭಿನ್ನಮತ!
ಇನ್ನೂ ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲೂ ಟಿಕೆಟ್ ಗಾಗಿ ನಾಲ್ಕೈದು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ, ಮಾಜಿ ಶಾಸಕ ಎಂ.ನಾರಾಯಣಸ್ವಾಮಿ ಹಾಗೂ ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಬಿ.ವಿ.ಮಹೇಶ್ ಹಾಗೂ ಶೇಷು ಎಂಬ ನಾಲ್ಕು ಜನ ಟಿಕೆಟ್ ಆಕಾಂಕ್ಷಿಗಳಿದ್ದಾರೆ.
ಬಂಗಾರಪೇಟೆಯಲ್ಲಿ ಹಾಲಿ ಕಾಂಗ್ರೆಸ್ ಶಾಸಕ ಎಂ ನಾರಾಯಣ ಸ್ವಾಮಿ ಅವರು 2018 ರ ವಿಧಾನಸಭಾ ಚುನಾವಣೆಯಲ್ಲಿ 21 ಸಾವಿರ ಮತಗಳ ಅಂತರದಿಂದ ಜಯಗಳಿಸಿದ್ದು, ಎರಡನೇ ಸ್ಥಾನವನ್ನ ಜೆಡಿಎಸ್ ಪಡೆದುಕೊಂಡಿದ್ರೆ, ಮೂರನೇ ಸ್ಥಾನವನ್ನ ಬಿಜೆಪಿ ಪಡೆದುಕೊಂಡಿತ್ತು. ಈ ಹಿಂದೆ ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಆದರೆ, ಈ ಬಾರಿ ಬಿಜೆಪಿಯಲ್ಲಿ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದ್ದು, ಟಿಕೆಟ್ ಗಾಗಿ ಬಾರೀ ಪೈಪೋಟಿ ಏರ್ಪಟಿದೆ.
ಟಿಕೆಟ್ ಗಾಗಿ ನಡೆದ ಅಸಮಾಧಾನವನ್ನ ಶಮನಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುನಿರತ್ನ ಅವರು, ಟಿಕೆಟ್ ಆಕಾಂಕ್ಷಿಗಳ ಜೊತೆಗೆ ಸಭೆ ನಡೆಸಿ, ಪಕ್ಷ ಯಾರಿಗೆ ಟಿಕೆಟ್ ನೀಡಿದರು ಒಟ್ಟಾಗಿ ಕೆಲಸ ಮಾಡಬೇಕು ಎಂದು ಕೋಲಾರಮ್ಮ ದೇವರ ಮೇಲೆ ಆಣೆ ಮಾಡಿಸಿದ್ದಾರೆ.
ಒಟ್ನಲಿ ಸಿದ್ದರಾಮಯ್ಯ ಅವರ ಸ್ಪರ್ಧೆಯಿಂದಾಗಿ ಕೋಲಾರ ಕ್ಷೇತ್ರ ಸಾಕಷ್ಟು ಪ್ರಾಮುಖ್ಯತೆಯನ್ನ ಪಡೆದುಕೊಂಡಿದ್ದು, ಕಾಂಗ್ರೆಸ್ ನಾಯಕರಲ್ಲಿ ಅಸಮಾಧಾನ ಶಮನವಾದ್ರೂ ಬಿಜೆಪಿ ಯಲ್ಲಿ ಟಿಕೆಟ್ ಆಕಾಂಕ್ಷಿಗಳ ನಡುವೆ ಬಿರುಕು ಹೆಚ್ಚಾಗಿದ್ದು, ಈ ಅಸಮಾಧಾನವನ್ನ ಬಿಜೆಪಿ ಯಾವ ರೀತಿಯಲ್ಲಿ ಶಮನ ಮಾಡುತ್ತೇ ಅಂತ ಕಾದುನೋಡ್ಬೇಕಾಗಿದೆ.












Click it and Unblock the Notifications