ಕೊಡಗು, ಕೇರಳ ಪ್ರವಾಹ : ಬಿಬಿಎಂಪಿಯಿಂದ 3.18 ಕೋಟಿ ದೇಣಿಗೆ
ಬೆಂಗಳೂರು, ಆಗಸ್ಟ್ 20 : ಕೊಡಗು ಮತ್ತು ಕೇರಳ ಪ್ರವಾಹದ ಪರಿಹಾರಕ್ಕಾಗಿ ಬಿಬಿಎಂಪಿ 3.18 ಕೋಟಿ ರೂ. ದೇಣಿಗೆ ನೀಡಿದೆ. ಇದರಲ್ಲಿ 1 ಕೋಟಿಯನ್ನು ಕೇರಳದ ಪ್ರವಾಹ ಸಂತ್ರಸ್ತರ ನಿಧಿಗಾಗಿ ನೀಡಲಾಗಿದೆ.
ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಸೋಮವಾರ ಉಪಮುಖ್ಯಮಂತ್ರಿ, ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ 3.18 ಕೋಟಿ ರೂ.ಗಳ ಚೆಕ್ ನೀಡಿದರು. ಪೊಲೀಸ್ ಇಲಾಖೆಯೂ ಇಂದು ಒಂದು ದಿನದ ಸಂಬಳವನ್ನು ಪರಿಹಾರ ನಿಧಿಗೆ ನೀಡಲಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ಡಾ.ಜಿ.ಪರಮೇಶ್ವರ ಅವರು, 'ಬಿಬಿಎಂಪಿಯ ಪರಿಹಾರ ನಿಧಿಯ ಚೆಕ್ ಸಿಕ್ಕಿದೆ. ಪೊಲೀಸ್ ಇಲಾಖೆಯ ಸಿಬ್ಬಂದಿಯಿಂದಲೂ ಒಂದು ದಿನದ ಸಂಬಳ ನೀಡಲು ಸೂಚನೆ ನೀಡಲಾಗಿದೆ. ಎರಡೂ ಸೇರಿಸಿ ಸುಮಾರು 5 ಕೋಟಿ ಮೊತ್ತವಾಗಲಿದ್ದು, ಪರಿಹಾರ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ' ಎಂದರು.
ಪೊಲೀಸ್ ಇಲಾಖೆ ಮತ್ತು ಬಿಬಿಎಂಪಿ ನೌಕರರು ಒಂದು ದಿನದ ಸಂಬಳ ಹಾಗು ಕಾರ್ಪೋರೇಟರ್ ಗಳು ಒಂದು ತಿಂಗಳ ಸಂಬಳವನ್ಮು ನೆರೆ ಪರಿಹಾರಕ್ಕೆ ಅರ್ಪಿಸಿರುವುದು ಪ್ರಶಂಸನೀಯ. ಒಬ್ಬರು ತೊಂದರೆಯಲ್ಲಿದ್ದಾಗ ಮತ್ತೊಬ್ಬರು ನೆರವಿಗೆ ಬರುವುದೇ ಮಾನವೀಯತೆ. ಕೊಡಗು, ಕೇರಳ ಜನರಿಗೆ ನಾವೆಲ್ಲರೂ ಸಹಾಯಹಸ್ತ ಚಾಚಿದರೆ ಕೆಲವೇ ದಿನದಲ್ಲಿ ಚೇತರಿಸಿಕೊಳ್ಳಲಿದ್ದಾರೆ. pic.twitter.com/GWX7fUenzC
— Dr. G Parameshwara (@DrParameshwara) August 20, 2018
'ಮಳೆ ಪ್ರವಾಹದಿಂದ ಹಾನಿಗೊಳಗಾಗಿರುವ ಜಿಲ್ಲೆಗಳಲ್ಲಿ ಎಲ್ಲಾ ರೀತಿಯ ತ್ವರಿತ ಕಾರ್ಯಾಚರಣೆ ಮಾಡಲಾಗಿದೆ. ಕೊಡಗಿನಲ್ಲಿ 850ಕ್ಕೂ ಹೆಚ್ಚು ಜನರನ್ನು ರಕ್ಷಣೆ ಮಾಡಲಾಗಿದೆ. 17 ಕಡೆ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದೆ' ಎಂದು ಪರಮೇಶ್ವರ ಹೇಳಿದರು.
'ಕೊಡಗಿನ ಪ್ರವಾಹ ಸಂತ್ರಸ್ಥರ ನೆರವಿಗೆ ಜನರು, ಸಂಘ-ಸಂಸ್ಥೆಗಳು ಸಾಕಷ್ಟು ಸ್ಪಂದಿಸಿವೆ. ಇಂದು ಕೊಡಗಿಗೆ ಭೇಟಿ ನೀಡುತ್ತಿದ್ದೇನೆ. ಫ್ರೀ ಫ್ಯಾಬ್ರಿಕೇಟೆಡ್ ಮನೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದ್ದೇವೆ. ಮಳೆ ನಿಂತ ಮೇಲೆ ಮನೆ ಕಟ್ಟುವ ಮತ್ತು ರಸ್ತೆ ರಿಪೇರಿ ಕಾರ್ಯ ಆರಂಭಿಸಲಾಗುತ್ತದೆ' ಎಂದು ಪರಮೇಶ್ವರ ತಿಳಿಸಿದರು.











Click it and Unblock the Notifications