KEA Recruitment: ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿಸುದ್ದಿ! 218 ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು: ಕರ್ನಾಟಕ ಗೃಹ ಮಂಡಳಿ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ನಗರ ಯೋಜನಾ ಆಯುಕ್ತಾಲಯ ಸೇರಿದಂತೆ ವಿವಿಧ ನಿಗಮ-ಇಲಾಖೆಗಳಲ್ಲಿ ಖಾಲಿ ಇರುವ ಒಟ್ಟು 218 ಕಿರಿಯ ಎಂಜಿನಿಯರ್ ಗಳ (JE) ನೇಮಕಾತಿ ಸಂಬಂಧ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಅಧಿಸೂಚನೆ ಹೊರಡಿಸಿದೆ.
ಕಲ್ಯಾಣ ಕರ್ನಾಟಕ ಹಾಗೂ ಇತರ ಉದ್ಯೋಗಾಕಾಂಕ್ಷಿಗಳಿಗೆ ಈ ಮೂಲಕ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಗುಡ್‌ನ್ಯೂಸ್ ಕೊಟ್ಟಿದೆ. ಈ ಬಗ್ಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಕಾರ್ಯ ನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಅವರು ಅಧಿಕೃತ ಮಾಹಿತಿ ನೀಡಿದ್ದಾರೆ. ಉಳಿಕೆ ಮೂಲ ವೃಂದಕ್ಕೆ ಸೇರಿದ 187 ಹಾಗೂ ಕಲ್ಯಾಣ ಕರ್ನಾಟಕ ವೃಂದಕ್ಕೆ ಸೇರಿದ 31 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ ನವೆಂಬರ್ 26 ಎಂದು ಹಾಗೂ ಶುಲ್ಕ ಪಾವತಿಗೆ ನವೆಂಬರ್ 27 ಕೊನೆ ದಿನವಾಗಿದೆ ಎಂದು ಅವರು ತಿಳಿಸಿದ್ದಾರೆ.

ವಿದ್ಯಾರ್ಹತೆ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
ಡಿಪ್ಲೊಮಾ ಅಥವಾ ತತ್ಸಮಾನ ವಿದ್ಯಾರ್ಹತೆ ಇರುವ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಜನವರಿ ತಿಂಗಳಲ್ಲಿ ಲಿಖಿತ ಪರೀಕ್ಷೆ ಇರಲಿದೆ. ಆದರೆ ಕನ್ನಡ ಭಾಷಾ ಪರೀಕ್ಷೆ ಮಾತ್ರ ಜನವರಿ 8ರಂದು ನಡೆಸಲಾಗುತ್ತದೆ ಎಂದರು.
ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದಲ್ಲಿ ಖಾಲಿ ಇದ್ದ ಸಹಾಯಕ ನಗರ ಯೋಜಕರ ಹುದ್ದೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಕೆಎಚ್ ಬಿ, ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ, ಅಂತರ್ಜಲ ನಿರ್ದೇಶನಾಲಯ, ಕರ್ನಾಟಕ ರಾಜ್ಯ ಖನಿಜ ನಿಗಮ, ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ನಿಗಮ ದಲ್ಲಿನ ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಅಭ್ಯರ್ಥಿಗಳು ಅಧಿಸೂಚನೆ ಓದಿಕೊಂಡು, ವಿವರ ತಿಳಿದು ಅರ್ಜಿ ಸಲ್ಲಿಸಬೇಕು. ಈ ನೇಮಕಾತಿ ಮತ್ತು ಹೆಚ್ಚಿನ ವರಗಳಿಗೆ KEA ಅಧಿಕೃತ ವೆಬ್ ಸೈಟ್ ಗೆ (https://cetonline.karnataka.gov.in/kea/) ಭೇಟಿ ನೀಡುವಂತೆ ಅವರು ಕೋರಿದ್ದಾರೆ.
UGNEET 2026 ಅಭ್ಯರ್ಥಿಗಳ ಗಮನಕ್ಕೆ: ನ.2 ರಿಂದ ಅರ್ಜಿ ಸಲ್ಲಿಸಿ
UGNEET ಗೆ ಸಂಬಂಧಿಸಿದಂತೆ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ಹಂಚಿಕೆಯಾಗದೆ ಉಳಿದಿರುವ ಸೀಟುಗಳ ಪ್ರವೇಶಕ್ಕೆ KEA ವಿಶೇಷ ಸ್ಟ್ರೇ ವೇಕೆನ್ಸಿ ಸುತ್ತಿನ ಕೌನ್ಸೆಲಿಂಗ್ ನಡೆಸಲಿದೆ. MCC ಯವರು ವಿಶೇಷ ಕೌನ್ಸೆಲಿಂಗ್ ಗೆ ವೇಳಾಪಟ್ಟಿ ಪ್ರಕಟಿಸಿರುವ ಕಾರಣ ಈ ತೀರ್ಮಾನ ಮಾಡಲಾಗಿದೆ. ಇದುವರೆಗೂ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳು ಕೂಡ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಿ, ಈ ಸುತ್ತಿನಲ್ಲಿ ಭಾಗವಹಿಸಬಹುದು ಎಂದು ಕೆಇಎ ತಿಳಿಸಿದೆ.
ಇದುವರೆಗೂ ಯಾವುದೇ ವೈದ್ಯಕೀಯ ಸೀಟು ಹಂಚಿಕೆ ಮಾಡಿಕೊಳ್ಳದ ಅಭ್ಯರ್ಥಿಗಳು ಈ ಸುತ್ತಿನಲ್ಲಿ ಭಾಗವಹಿಸಬಹುದು. ದಂತ ವೈದ್ಯಕೀಯ ಸೀಟು ಹಂಚಿಕೆಯಾದವರು ವೈದ್ಯಕೀಯ ಸೀಟುಗಳಿಗೆ ಮಾತ್ರ ಭಾಗವಹಿಸಬಹುದು. ನವೆಂಬರ್ 2 ರಿಂದ 4ರವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಈ ಸುತ್ತಿನಲ್ಲಿ ಭಾಗವಹಿಸಲು ವೈದ್ಯಕೀಯ ಸೀಟಿಗೆ ₹25 ಲಕ್ಷ ಹಾಗೂ ದಂತ ವೈದ್ಯಕೀಯ ಸೀಟಿಗೆ ₹1 ಲಕ್ಷ ಮುಂಗಡ ಶುಲ್ಕ ಪಾವತಿಸಬೇಕು. ಇದಕ್ಕೆ ನ.4ರಿಂದ 6ರವರೆಗೆ ಅವಕಾಶ ನೀಡಲಾಗಿದೆ. ನವಂಬರ್ 6 ರಿಂದ 9ರ ವರೆಗೆ ಹೊಸದಾಗಿ ಇಚ್ಛೆ ದಾಖಲಿಸಬೇಕು ಎಂದು ಪ್ರಾಧಿಕಾರವು ಮಾಹಿತಿ ನೀಡಿದೆ.


Click it and Unblock the Notifications
