ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದ ಕೆ. ಸಿ. ರಾಮಮೂರ್ತಿ
ನವದೆಹಲಿ, ಅಕ್ಟೋಬರ್ 22 : ರಾಜ್ಯಸಭಾ ಸದಸ್ಯತ್ವ ಮತ್ತು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದ ಕೆ. ಸಿ. ರಾಮಮೂರ್ತಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದರು. ಬಿಜೆಪಿ ಸೇರುವುದಾಗಿ ಕಾಂಗ್ರೆಸ್ ತೊರೆದ ದಿನವೇ ಅವರು ಸೂಚನೆ ನೀಡಿದ್ದರು.
ನವದೆಹಲಿಯಲ್ಲಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕೆ. ಸಿ. ರಾಮಮೂರ್ತಿ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದರು. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ಕೇಂದ್ರ ಸಚಿವ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Recommended Video
ಮಾಧ್ಯಮಗಳ ಜೊತೆ ಮಾತನಾಡಿದ ಕೆ. ಸಿ. ರಾಮಮೂರ್ತಿ, "ಅತ್ಯಂತ ಸಂತೋಷದಿಂದ ಬಿಜೆಪಿ ಸೇರುತ್ತಿದ್ದೇನೆ. ಎರಡೂವರೆ ವರ್ಷದಿಂದ ಕೈಲಾದಷ್ಟು ಕೆಲಸ ಮಾಡಿದ್ದೇನೆ. ಆದರೂ ಬಹಳ ಬಾರಿ ಆತ್ಮವಂಚನೆ ಮಾಡಿಕೊಂಡಿದ್ದೆ" ಎಂದರು.
"ಮೊದಲು ದೇಶದಲ್ಲಿ ಈ ರೀತಿಯ ನಾಯಕ ಇರಲಿಲ್ಲ. ಈಗ ಪ್ರಧಾನಿ ನರೇಂದ್ರ ಮೋದಿ ನಾಯಕತ್ವ ಮೆಚ್ಚಿ ಬಿಜೆಪಿ ಸೇರಿದ್ದೇನೆ. ಪಕ್ಷ ವಹಿಸುವ ಜವಾಬ್ದಾರಿಯನ್ನು ಸಂತೋಷದಿಂದ ಮಾಡುತ್ತೇನೆ" ಎಂದು ಹೇಳಿದರು.

ಕೆ. ಸಿ. ರಾಮೂರ್ತಿ ಯಾರು?
ಮಾಜಿ ಐಪಿಎಸ್ ಅಧಿಕಾರಿ ಕೆ. ಸಿ. ರಾಮಮೂರ್ತಿ ಬೆಂಗಳೂರಿನ ನಿವಾಸಿ. ಸಿಎಂಆರ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರು. ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್, ಯುವಜನ ಸೇವೆ, ಸಂಚಾರ ಮತ್ತು ರಸ್ತೆ ಸುರಕ್ಷತೆ ಇಲಾಖೆ ಆಯುಕ್ತರಾಗಿ ಕೆಲಸ ಮಾಡಿದ್ದಾರೆ. ಬೆಂಗಳೂರು ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಕಾಂಗ್ರೆಸ್ ಪಕ್ಷ ಸೇರಿದ ರಾಮಮೂರ್ತಿ
ಕೆ. ಸಿ. ರಾಮಮೂರ್ತಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. 2016ರಲ್ಲಿ ಕರ್ನಾಟಕದಿಂದ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸಲಾಯಿತು. ರಾಜ್ಯಸಭಾ ಸದಸ್ಯತ್ವದ ಅವಧಿ ಮುಗಿಯುವ ಮೊದಲೇ ಅವರು ಕಾಂಗ್ರೆಸ್ ಪಕ್ಷ ಮತ್ತು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಅವರ ಸದಸ್ಯತ್ವದ ಅವಧಿ 2022ರ ಜೂನ್ ತನಕ ಇತ್ತು.

ಬಿಜೆಪಿ ಸೇರುವ ಕಾರ್ಯಕ್ರಮ ಮುಂದಕ್ಕೆ
ಕಳೆದ ಬುಧವಾರ ಕಾಂಗ್ರೆಸ್ ಪಕ್ಷ ತೊರೆದಿದ್ದ ಕೆ. ಸಿ. ರಾಮಮೂರ್ತಿ ಅಂದೇ ಬಿಜೆಪಿ ಸೇರಬೇಕಾಗಿತ್ತು. ಆದರೆ, ದೆಹಲಿಯ ಬಿಜೆಪಿ ನಾಯಕರು ಮಹಾರಾಷ್ಟ್ರ, ಹರ್ಯಾಣ ವಿಧಾನಸಭೆ ಚುನಾವಣೆಯಲ್ಲಿ ಬ್ಯುಸಿ ಇದ್ದ ಕಾರಣ ಮಂಗಳವಾರ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿದ್ದಾರೆ.

ಆಮಿಷಕ್ಕೆ ಒಳಗಾಗಿಲ್ಲ
"ನಾನು ಬಿಜೆಪಿ ಆಮಿಷಕ್ಕೆ ಒಳಗಾಗಿ ರಾಜೀನಾಮೆ ನೀಡಿಲ್ಲ. ತರಾತುರಿಯಲ್ಲಿ ಕಾಂಗ್ರೆಸ್ ತೊರೆಯುವ ತೀರ್ಮಾನ ಕೈಗೊಂಡಿಲ್ಲ. ಹಲವು ದಿನಗಳಿಂದ ಆಲೋಚಿಸಿ, ಕಾಂಗ್ರೆಸ್ ಮುಖಂಡರ ಜೊತೆಗೂ ಈ ಕುರಿತು ಚರ್ಚಿಸಿ ನಿರ್ಧಾರ ಕೈಗೊಂಡಿದ್ದೇನೆ" ಎಂದು ಕೆ. ಸಿ. ರಾಮಮೂರ್ತಿ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications