Kasturirangan Report: ಕಸ್ತೂರಿ ರಂಗನ್ ವರದಿ ಜಾರಿ ಜನಸಾಮಾನ್ಯರ ಬದುಕಿಗೆ ಮರಣ ಶಾಸನ: ‌ಪರಿಷತ್‌ನಲ್ಲಿ ಚರ್ಚೆಯಾಗಿದ್ದೇನು?

ಬೆಂಗಳೂರು: ಕಸ್ತೂರಿ ರಂಗನ್ ವರದಿ ಯಥಾವತ್ತಾಗಿ ಅನುಷ್ಠಾನಗೊಂಡರೆ ಅದು ಮಲೆನಾಡು, ಕರಾವಳಿ ಹಾಗೂ ಪರಿಸರ ಸೂಕ್ಷ್ಮ ವಲಯದ ಜನರ ಬದುಕಿಗೆ 'ಮರಣ ಶಾಸನ'ವಾಗಲಿದೆ. ಈಗಿರುವ ಕಠಿಣ ಕಾನೂನುಗಳ ನಡುವೆಯೇ ಬದುಕು ನಡೆಸುವುದು ದುಸ್ತರವಾಗಿರುವಾಗ, ಈ ವರದಿ ಜಾರಿಯಾದರೆ ಜನಸಾಮಾನ್ಯರು ಜೀವಿಸುವುದೇ ಸಾಧ್ಯವಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಎಸ್. ರವಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

​ವಿಶೇಷ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಸುದೀರ್ಘವಾಗಿ ಮಾತನಾಡಿದ ಅವರು, ವರದಿಯಲ್ಲಿರುವ ನ್ಯೂನತೆಗಳು, ಸ್ಥಳೀಯ ಜನರ ಸಮಸ್ಯೆಗಳು ಹಾಗೂ ಸರ್ಕಾರದ ಮುಂದಿನ ನಡೆ ಕುರಿತು ಕಳಕಳಿಯ ವಿಚಾರಗಳನ್ನು ಮಂಡಿಸಿದರು.

Kasturirangan Report The Report Implementing Report Could Become a Death Warrant for Common People

ನಾವೇ ನಿಜವಾದ ಪರಿಸರ ಪ್ರೇಮಿಗಳು

ಭಾರತೀಯ ಸಂಸ್ಕೃತಿಯಲ್ಲಿ ಪರಿಸರವನ್ನು ಕೇವಲ ಪ್ರೀತಿಸುವುದಿಲ್ಲ, ಪೂಜಿಸುತ್ತೇವೆ. ಬಿಳಿಗಿರಿ ರಂಗನಾಥ, ಮಲೈ ಮಹದೇಶ್ವರ ಹಾಗೂ ಚಾಮುಂಡಿ ಬೆಟ್ಟದಂತಹ ಶ್ರದ್ಧಾ ಕೇಂದ್ರಗಳು ಕಾಡಿನಲ್ಲೇ ಇವೆ. ಆಲದ ಮರ, ಅರಳಿ ಮರಗಳನ್ನು ದೈವ ರೂಪದಲ್ಲಿ ಕಾಣುವ ನಮಗೆ ಪಾಶ್ಚಿಮಾತ್ಯರಿಂದ ಪರಿಸರ ಕಾಳಜಿ ಕಲಿಯಬೇಕಾದ ಅಗತ್ಯವಿಲ್ಲ.

ವರದಿಯಲ್ಲಿ 'ಹ್ಯಾಬಿಟ್ಯಾಟ್ ಪ್ರೆಶರ್' (ಮಾನವ ವಸತಿ ಒತ್ತಡ) ಹೆಚ್ಚಾಗಿದೆ ಎಂದು ತೋರಿಸಲಾಗಿದೆ. ಆದರೆ, ವಾಸ್ತವದಲ್ಲಿ ಚಿಕ್ಕಮಗಳೂರು (0.28%), ಕೊಡಗು (1.13%) ಹಾಗೂ ಹಾಸನದಲ್ಲಿ ಜನಸಂಖ್ಯೆ ಬೆಳವಣಿಗೆ ದರ ಋಣಾತ್ಮಕ ಅಥವಾ ಅತೀ ಕಡಿಮೆಯಾಗಿದೆ. ಯುವಕರು ನೌಕರಿ ಅರಸಿ ನಗರಗಳಿಗೆ ವಲಸೆ ಹೋಗಿದ್ದು, ಊರುಗಳಲ್ಲಿ ವೃದ್ಧರು ಮಾತ್ರ ಉಳಿದಿದ್ದಾರೆ. ವರದಿಯಲ್ಲಿ ಕಾಡುಪ್ರಾಣಿಗಳ ಸಂಖ್ಯೆ ವಿಪರೀತ ಹೆಚ್ಚಾಗಿರುವುದರ ಬಗ್ಗೆ ಅಥವಾ ಅವುಗಳಿಂದ ರೈತರಿಗಾಗುತ್ತಿರುವ ಹಾನಿಯ ಬಗ್ಗೆ ಯಾವುದೇ ಪ್ರಸ್ತಾಪವಿಲ್ಲ.

​ವನ್ಯಜೀವಿಗಳ ಹಾವಳಿ, ಅರಣ್ಯ ಇಲಾಖೆ ಕಿರುಕುಳ

ಕನಕಪುರ, ಕುಣಿಗಲ್, ಮಾಗಡಿ ಸೇರಿದಂತೆ ಬಯಲುಸೀಮೆ ಭಾಗಗಳಲ್ಲೂ ಚಿರತೆ, ಕಾಡುಹಂದಿ ಹಾಗೂ ಆನೆಗಳ ಹಾವಳಿ ವಿಪರೀತವಾಗಿದೆ. ರೈತರು ಕಷ್ಟಪಟ್ಟು ಬೆಳೆದ ಬೆಳೆಯನ್ನು ಆನೆಗಳು ಒಂದೇ ರಾತ್ರಿಯಲ್ಲಿ ನಾಶಪಡಿಸುತ್ತಿವೆ. ಬೆಳಗಿನ ಜಾವ ಆನೆಗಳ ತುಳಿತಕ್ಕೆ ಸಿಲುಕಿ ಬಡ ರೈತರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇತ್ತ, ಅರಣ್ಯದ ಅಂಚಿನಲ್ಲಿರುವ ಬಡವರು, ದಲಿತರು ಹಾಗೂ ಹಿಂದುಳಿದ ವರ್ಗದ ಜನರಿಗೆ ಮೂಲಸೌಕರ್ಯ ಕಲ್ಪಿಸಲು, ಕುಡಿಯುವ ನೀರಿನ ಪೈಪ್‌ಲೈನ್ ಅಥವಾ ರಸ್ತೆ ನಿರ್ಮಿಸಲು ಅರಣ್ಯ ಇಲಾಖೆ ತೀವ್ರ ಕಿರುಕುಳ ನೀಡುತ್ತಿದೆ.

ಏಕಾಏಕಿ ಸಾವಯವ ಕೃಷಿ ಜಾರಿಗೆ ತಂದು ಶ್ರೀಲಂಕಾ ದೇಶವೇ ಆರ್ಥಿಕ ಹಾಗೂ ಆಹಾರ ಬಿಕ್ಕಟ್ಟಿಗೆ ಸಿಲುಕಿದ್ದನ್ನು ನೆನಪಿಸಿದ ರವಿ, ಸ್ಥಳೀಯ ಪರಿಸ್ಥಿತಿಗಳನ್ನು ಪರಿಗಣಿಸದೆ ಇಂತಹ ಕಠಿಣ ನಿಯಮಗಳನ್ನು ಹೇರುವುದು ಅಪಾಯಕಾರಿ ಎಂದರು.

ಪ್ರವಾಸೋದ್ಯಮ ಮತ್ತು ಕೃಷಿಗೆ ಉತ್ತೇಜನ ಅಗತ್ಯ

ಪ್ರಕೃತಿಗೆ ಹಾನಿಯಾಗದಂತೆ ಕರಾವಳಿ ಹಾಗೂ ಮಲೆನಾಡು ಭಾಗಗಳಲ್ಲಿ ಪರಿಸರ ಪೂರಕ ಪ್ರವಾಸೋದ್ಯಮ ಬೆಳೆಸಬೇಕು. ಸ್ಥಳೀಯವಾಗಿ ಉದ್ಯೋಗಾವಕಾಶ ಸೃಷ್ಟಿಸಿ ಜನ ವಲಸೆ ಹೋಗುವುದನ್ನು ತಡೆಯಬೇಕು. ಸಂಪೂರ್ಣ ಮರಳು ಗಣಿಗಾರಿಕೆ ನಿಷೇಧಿಸುವುದು ಅವೈಜ್ಞಾನಿಕ, ಸ್ಥಳೀಯರ ಮನೆ ನಿರ್ಮಾಣಕ್ಕೆ ನಿಯಮಾವಳಿಗೊಳಪಟ್ಟು ಮರಳು ಸಿಗುವಂತಾಗಬೇಕು.

ರಾಜ್ಯ ಸರ್ಕಾರ, ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ಈ ವಿಷಯದಲ್ಲಿ ಸೃಷ್ಟಿಸಿರುವ ಜನಾಂದೋಲನ ಮತ್ತು ಕರೆದಿರುವ ವಿಶೇಷ ಅಧಿವೇಶನ ಶ್ಲಾಘನೀಯ. ಪಶ್ಚಿಮ ಘಟ್ಟ ವ್ಯಾಪ್ತಿಯ 6 ರಾಜ್ಯಗಳು (ಕರ್ನಾಟಕ, ಕೇರಳ, ಮಹಾರಾಷ್ಟ್ರ, ಗೋವಾ, ಗುಜರಾತ್, ತಮಿಳುನಾಡು) ಈಗಾಗಲೇ ಈ ವರದಿಗೆ ಆಕ್ಷೇಪಣೆ ಸಲ್ಲಿಸಿವೆ. ನಾವೆಲ್ಲರೂ ಪಕ್ಷಾತೀತವಾಗಿ ಒಗ್ಗೂಡಿ, ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ, ಅಗತ್ಯ ಕಾನೂನು ತಿದ್ದುಪಡಿ ತರಲು ಒತ್ತಡ ಹೇರಬೇಕೆಂದು ಅವರು ಸದನವನ್ನು ಆಗ್ರಹಿಸಿದರು.

ಎಸ್‌.ಎಲ್‌ ಭೋಜೇಗೌಡ ಅವರ ಆಕ್ರೋಶ

​ವಿಧಾನ ಪರಿಷತ್ತಿನ ವಿಶೇಷ ಚರ್ಚೆಯ ಸಮಯದಲ್ಲಿ ವಿಧಾನಪರಿಷತ್ ಸದಸ್ಯ ಎಸ್‌.ಎಲ್‌ ಭೋಜೇಗೌಡ ಅವರು ಮಲೆನಾಡು ಹಾಗೂ ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ವಲಯ ಮತ್ತು ಕಸ್ತೂರಿರಂಗನ್ ವರದಿ ಜಾರಿಯ ಕುರಿತು ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ.

ಕಸ್ತೂರಿರಂಗನ್ ಮತ್ತು ಗಾಡ್ಗಿಲ್ ವರದಿ

ಕಸ್ತೂರಿರಂಗನ್ ಹಾಗೂ ಗಾಡ್ಗಿಲ್ ವರದಿಗಳ ನಡುವೆ ದೊಡ್ಡ ಮಟ್ಟದ ವ್ಯತ್ಯಾಸವೇನೂ ಇಲ್ಲ. ಗಾಡ್ಗಿಲ್ ವರದಿ ನೀಡಿದ್ದ ವಿಸ್ತೀರ್ಣದಲ್ಲಿ ಕಸ್ತೂರಿರಂಗನ್ ವರದಿಯು ಸ್ವಲ್ಪ ಕಡಿತಗೊಳಿಸಿದೆಯಷ್ಟೇ. ಚಿಕ್ಕಮಗಳೂರಿನ ಉದಾಹರಣೆ ನೀಡಿದ ಅವರು, ತಮ್ಮ ವ್ಯಾಪ್ತಿಯ 9 ಹಳ್ಳಿಗಳಲ್ಲಿ ಸುಮಾರು 247 ಎಕರೆ ಪ್ರದೇಶ ಕಸ್ತೂರಿರಂಗನ್ ವರದಿಯಡಿ ಬಂದರೆ, 300ಕ್ಕೂ ಹೆಚ್ಚು ಎಕರೆ ಗಾಡ್ಗಿಲ್ ವರದಿಯಡಿ ಬರುತ್ತದೆ ಎಂದರು.

ಮಲೆನಾಡಿನ ಕಾಡುಗಳು ನಾಶವಾಗಲು ಅಲ್ಲಿನ ರೈತರು ಅಥವಾ ಸಾಮಾನ್ಯ ಜನರಲ್ಲ, ಬದಲಿಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೇ ನೇರ ಹೊಣೆ ಎಂದು ಆಪಾದಿಸಿದರು. ಕೆಳಹಂತದ ಅಧಿಕಾರಿಗಳಿಗೆ ಬೆಂಬಲ ನೀಡದ ಅಧಿಕಾರಿಗಳು, ಕಾಡುಗಳನ್ನು ಉಳಿಸುವ ಬದಲು ಹಾಳುಮಾಡಿದ್ದಾರೆ ಎಂದು ಕಿಡಿಕಾರಿದರು.

ವೈಜ್ಞಾನಿಕ ತನಿಖೆಗೆ ಒತ್ತಾಯ

ಭದ್ರಾ ಅಭಯಾರಣ್ಯ ಹಾಗೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಹೆಸರಿನಲ್ಲಿ ಕೈಗೊಂಡ ಯೋಜನೆಯಿಂದ ಎಷ್ಟು ಅರಣ್ಯ ಪ್ರದೇಶ ನಿಜವಾಗಿ ಉಳಿದಿದೆ ಎಂಬುದರ ಕುರಿತು ಆತ್ಮಾವಲೋಕನ ಹಾಗೂ ಸತ್ಯಾಸತ್ಯತೆ ತಿಳಿಯಲು ತನಿಖೆಯಾಗಬೇಕು ಎಂದು ಆಗ್ರಹಿಸಿದರು. ದಶಕಗಳಿಂದ ಮಲೆನಾಡಿನಲ್ಲಿ ಜೀವಿಸುತ್ತಿರುವ ರೈತರು ಹಾಗೂ ಸ್ಥಳೀಯ ಜನರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸರಕಾರ ನಿರ್ಧಾರ ಕೈಗೊಳ್ಳಬೇಕು ಎಂದು ಸದನದ ಗಮನ ಸೆಳೆದರು.

ಪಶ್ಚಿಮ ಘಟ್ಟ ಸಂರಕ್ಷಣೆ ಅತ್ಯವಶ್ಯಕ : ಡಿ.ಎಸ್. ಅರುಣ್ ಒತ್ತಾಯ

ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ವಿಶೇಷ ಅಧಿವೇಶನದಲ್ಲಿ ಸದಸ್ಯ ಡಿ.ಎಸ್. ಅರುಣ್ ಅವರು ರೈತರ ಮತ್ತು ಮಲೆನಾಡಿನ ಜನರ ಆತಂಕಗಳನ್ನು ಸರ್ಕಾರದ ಗಮನಕ್ಕೆ ತಂದಿದರು.

ಶಿವಮೊಗ್ಗ ಸೇರಿದಂತೆ ವಿವಿಧ ಭಾಗಗಳಲ್ಲಿ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ ಜನರಲ್ಲಿ ಮತ್ತು ರೈತರಲ್ಲಿ ತೀವ್ರ ಆತಂಕವಿದೆ. ಹಳದಿ ರೋಗ, ಎಲೆ ಚುಕ್ಕಿ ರೋಗ, ಅಡಿಕೆ ಬೆಲೆಯ ಏರಿಳಿತ ಹಾಗೂ ಮಳೆ ಕೊರತೆಯಿಂದ ರೈತರು ಈಗಾಗಲೇ ಸಂಕಷ್ಟದಲ್ಲಿದ್ದಾರೆ. ವರದಿ ಜಾರಿಯ ಭೀತಿಯಿಂದ ಭೂಮಿಯ ಮೌಲ್ಯ ಕುಸಿಯುತ್ತಿದ್ದು, ಸುಮಾರು 50 ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸುವ ಸ್ಥಿತಿ ಎದುರಾಗಿದೆ ಎಂದು ತಿಳಿಸಿದರು.

ಈ ಹಿಂದಿನ ವರ್ಷಗಳಿಂದ ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುತ್ತಾ ಬಂದಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಬಿ.ಎಸ್. ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಈ ವರದಿಯನ್ನು ತಿರಸ್ಕರಿಸಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆದಾಗ್ಯೂ, ಈಗ 7ನೇ ಬಾರಿಗೆ ಕರಡು ಅಧಿಸೂಚನೆ (Draft Notification) ಹೊರಬಿದ್ದಿದ್ದು, ಸುಪ್ರೀಂ ಕೋರ್ಟ್, ಎನ್‌ಜಿಟಿ (NGT) ಮತ್ತು ಕೇಂದ್ರ ಸರ್ಕಾರದ ಒತ್ತಡ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು.

Kasturirangan Report: ಕೇರಳ ಮಾದರಿ ಸಂಧಾನ

ಕೇವಲ ವರದಿಯನ್ನು 'ಬೇಡ' ಎಂದು ನಿರಾಕರಿಸುವ ಬದಲು, ಶಾಶ್ವತ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸರ್ವಪಕ್ಷಗಳ ನಿಯೋಗವು ಕೇಂದ್ರ ಸರ್ಕಾರಕ್ಕೆ ತೆರಳಿ ಮಾತುಕತೆ ನಡೆಸಬೇಕು ಎಂದು ಅರುಣ್ ಅವರು ಸಲಹೆ ನೀಡಿದರು. ಕೇರಳ ಸರ್ಕಾರವು ನೈಜ ಸ್ಥಿತಿಯನ್ನು ಮನವರಿಕೆ ಮಾಡಿ ತನ್ನ ವ್ಯಾಪ್ತಿಯ ಇಎಸ್‌ಝೆಡ್ (Eco-Sensitive Zone) ಪ್ರದೇಶವನ್ನು 13,108 ಚ.ಕಿ.ಮೀ ನಿಂದ 9,993 ಚ.ಕಿ.ಮೀ ಗೆ ಕಡಿಮೆ ಮಾಡಿಕೊಂಡ ಮಾದರಿಯನ್ನು ಕರ್ನಾಟಕವೂ ಅನುಸರಿಸಬೇಕು ಎಂದು ಪ್ರತಿಪಾದಿಸಿದರು.

Kasturirangan Report: ಗ್ರಾಮೀಣ ಸಭೆಗಳ ಅಗತ್ಯ

ಪಶ್ಚಿಮ ಘಟ್ಟಗಳ ಸಂರಕ್ಷಣೆ ಅತ್ಯಗತ್ಯ ಎಂಬ ವಿಷಯದಲ್ಲಿ ಎರಡನೇ ಮಾತಿಲ್ಲ. ಆದರೆ, ಲಿಂಗನಮಕ್ಕಿ, ಚಕ್ರಾ, ವರಾಹಿ ಮತ್ತು ಸಾವೇಹಕ್ಲು ಜಲಾಶಯಗಳ ನಿರ್ಮಾಣದ ಸಮಯದಲ್ಲಿ ದಶಕಗಳ ಹಿಂದೆ ತಮ್ಮ ಭೂಮಿಯನ್ನು ಕಳೆದುಕೊಂಡು ನಿರಾಶ್ರಿತರಾದ ಜನರಿಗೆ ಇಂದಿಗೂ ಹಕ್ಕುಪತ್ರ ಸಿಕ್ಕಿಲ್ಲ. ಆಂಗ್ಲ ಭಾಷೆಯಲ್ಲಿರುವ ಈ ಕರಡು ಅಧಿಸೂಚನೆಯನ್ನು ಕನ್ನಡಕ್ಕೆ ಅನುವಾದಿಸಿ, ಪ್ರತಿಯೊಂದು ಗ್ರಾಮ ಪಂಚಾಯತಿ ಹಾಗೂ ಗ್ರಾಮ ಸಭೆಗಳಲ್ಲಿ ವಿಸ್ತೃತವಾಗಿ ಚರ್ಚಿಸಿ ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಬೇಕು. ಏಕಪಕ್ಷೀಯ ನಿರ್ಧಾರ ಕೈಗೊಳ್ಳದೆ, ನೈಜ ಪರಿಸರವಾದಿಗಳು ಮತ್ತು ರೈತರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+