Karnataka Rains: ರಾಜ್ಯದ ವಿವಿಧ ಹೆದ್ದಾರಿಗಳು ಸಾಧಾರಣದಿಂದ ಭಾರಿ ಮಳೆ ಸಾಧ್ಯತೆ: ಐಎಂಡಿ
ಬೆಂಗಳೂರು, ಜಲೈ 05: ಕರ್ನಾಟಕ ರಾಜ್ಯದಲ್ಲಿ ಮುಂದಿನ ನಾಲ್ಕೈದು ದಿನಗಳ ಕಾಲ (ಜುಲೈ 5-9) ಧಾರಾಕಾರ ಮಳೆ ಸುರಿಯಲಿದೆ. ಈಗಾಗಲೇ ಬೀಳುತ್ತಿರುವ ರಣ ಮಳೆಯು ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಿಗೂ ಆವರಿಸಿದೆ. ಹಲವು ರಸ್ತೆಗಳಲ್ಲಿ ಅತ್ಯಧಿಕ ಮಳೆ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಹೈವೇ ಮಳೆ ಮುನ್ಸೂಚನೆ ತಿಳಿಸಿದೆ.
ಕರಾವಳಿ ಜಿಲ್ಲೆಗಳು ಸೇರಿದಂತೆ ರಾಜ್ಯದ ವಿವಿಧಡೆ ಕೆಲವು ದಿನಗಳಿಂದ ಭಾರಿ ಮಳೆ ಸುರಿಯುತ್ತಿದೆ. ಅದೇ ರೀತಿ ವಿವಿಧ ಹೆದ್ದಾರಿಗಳಲ್ಲೂ ಉತ್ತಮ ಮಳೆಯ ದರ್ಶನವಾಗುತ್ತಿದೆ. ಹೀಗಾಗಿ ಹೆದ್ದಾರಿ ಅನುಸರಿಸಿ ಬೆಳಗಾವಿ, ಕಲಬುರಗಿ, ಹುಬ್ಬಳ್ಳಿ, ಹಾಸನ, ಮಂಗಳೂರು ಮತ್ತು ಮೈಸೂರು ಸೇರಿದಂತೆ ಇನ್ನಿತರೆಡೆ ಹೋಗುವ ಜನರು ಐಎಂಡಿ ನೀಡಿರುವ ಮುನ್ಸೂಚನೆ ಗಮನಿಸಿ ತೆರಳಿದರೆ ಉತ್ತಮ. ಇಲ್ಲವಾದರೆ ಅಗತ್ಯ ಮುಂಜಾಗ್ರತೆ ವಹಿಸಬೇಕಾದ ಅನಿವಾರ್ಯತೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಹವಾಮಾನ ವರದಿ ಪ್ರಕಾರ, ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಸಾಂಸ್ಕೃತಿಕ ನಗರಿ ಮೈಸೂರು ತೆರಳುವ ಎಕ್ಸ್‌ಪ್ರೆಸ್ ವೇನಲ್ಲಿ ಇಂದಿನಿಂದಲೇ ಸಾಧಾರಣದಿಂದ ವ್ಯಾಪಕ ಮಳೆ ಬೀಳಲಿದೆ. ಅದೇ ರೀತಿ ಬೆಂಗಳೂರು ನಿಂದ ಮಂಗಳೂರು ಹೆದ್ದಾರಿ ರಸ್ತೆ ಅಂದರೆ ಹಾಸನ, ಸಕಲೇಶಪುರ, ಚಾರ್ಮಾಡಿ ಜೊತೆಗೆ ಶಿರಾಡಿ ಘಾಟ್ ರಸ್ತೆಗಳಲ್ಲಿ ಕೆಲವೊಮ್ಮೆ ಧಾರಾಕಾರ ಮಳೆ ಆಗಲಿದೆ. ಉಳಿದ ಸಮಯ ನಿರಂತರ ಜಿಟಿ ಜಿಟಿ ಮಳೆ ಕಂಡು ಬರಲಿದೆ.
ಕರಾವಳಿಯಲ್ಲಿ ಗಾಳಿಯ ವೇಗ 80kmh
ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಕರಾವಳಿ ಭಾಗದಲ್ಲಿ ಒಂದು ವಾರದಿಂದ ಬಿಟ್ಟು ಬಿಡದೇ ಅತ್ಯಧಿಕ ಭಾರಿ ಮಳೆ ಬೀಳುತ್ತಿದೆ. ಬೆಂಗಳೂರು ಇಲ್ಲವೇ ಉತ್ತರ ಕರ್ನಾಟಕ ಭಾಗದಿಂದ ಕರಾವಳಿಯತ್ತ ತೆರಳುವವರಿಗೆ ಮಳೆ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಿದೆ. ಇಂದು ಬುಧವಾರ ಜುಲೈ 5ರಂದು ಕರಾವಳಿ ಭಾಗದಲ್ಲಿ ಗಂಟೆಗೆ 80ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸಿದೆ. ಆದ್ದರಿಂದ ಈ ವಾರ ನಿಮ್ಮ ಪ್ರವಾಸಗಳನ್ನು ಮುಂದೂಡಿದರೆ ಒಳಿತು.
ರಾಜಧಾನಿ ಬೆಂಗಳೂರುನಿಂದ ಉತ್ತರ ಕರ್ನಾಟಕದ ಚಿತ್ರದುರ್ಗ ಹಾವೇರಿ, ಹುಬ್ಬಳ್ಳಿ ಮಾರ್ಗವಾಗಿ ಬೆಳಗಾವಿ ತಲುಪುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರೀ ವರ್ಷಧಾರೆ ಸುರಿಯಲಿದೆ. ಇದರಲ್ಲಿ ಬೆಂಗಳೂರಿನಿಂದ ಚಿತ್ರದುರ್ಗದವರೆಗೆ ಕೆಲವು ಸ್ಥಳಗಳಲ್ಲಿ ಮಾತ್ರ ಹಗುರ ಮಳೆ ಕಂಡು ಬಂದರೆ, ಚಿತ್ರದುರ್ಗದಿಂದ ಬೆಳಗಾವಿ ವರೆಗೆ ಅನೇಕ ಪ್ರದೇಶಗಳಲ್ಲಿ ಗಾಳಿ ಸಹಿತ ಜೋರು ಮಳೆ ಸುರಿಯಲಿದೆ. ಈಗಾಗಲೇ ಕೆಲವು ದಿನಗಳಿಂದ ಈ ಭಾಗದಲ್ಲಿ ಮಳೆ ದಾಖಲಾಗಿದೆ ಎಂದು ಐಎಂಡಿ ವರದಿ ತಿಳಿಸಿದೆ.

ಅಂತೆಯೇ ಬೆಂಗಳೂರಿನಿಂದ ಕಲ್ಯಾಣ ಭಾಗದ ಕಲಬುರಗಿಗೆ ಸಂಪರ್ಕಿಸುವ ರಾಷ್ಟ್ರೀಯ ಹೈವೇಯಲ್ಲಿಯೂ ಕೂಡ ಆಗಾಗ ಸಾಮಾನ್ಯದಿಂದ ಉತ್ತಮ ಮಳೆ ಬೀಳಲಿದೆ. ಇದರಿಂದ ಪ್ರಯಾಣಿಕರಿಗೆ ಮತ್ತು ವಾಹನ ಸವಾರರಿಗೆ ಕಿರಿಕಿರಿ ನೀಡಲಿದೆ. ಬೆಂಗಳೂರಿನಿಂದ ಚಿತ್ರದುರ್ಗವರೆಗೆ ಬೀಳಲಿರುವ ಜಿಟಿ ಜಿಟಿ ಮಳೆ ಚಿತ್ರದುರ್ಗದಿಂದ ಕಲಬುರಗಿ ಜಿಲ್ಲೆ ತನಕ ಒಂದೆರಡು ಕಡೆಗಳಲ್ಲಿ ಬೀಳುವ ಲಕ್ಷಣಗಳು ಇವೆ. ಇದರ ಹೊರತು ಈ ಭಾಗಕ್ಕೆ ಅಷ್ಟಾಗಿ ಗಂಭೀರ ಸ್ವರೂಪದ ಮಳೆ ಮುನ್ಸೂಚನೆ ಇಲ್ಲ ಎನ್ನಲಾಗಿದೆ.
ಅಧಿಕ ತಾಪಮಾನ ವಿವರ
ರಾಜ್ಯದ ಎಲ್ಲ ಹೆದ್ದಾರಿಗಳ ಪೈಕಿ ಕಲಬುರಗಿ ಭಾಗದಲ್ಲಿ ಇಂದು ಜುಲೈ 5 ಬುಧವಾರ ಅಧಿಕ ಉಷ್ಣಾಂಶ ಗರಿಷ್ಠ 35.8 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಹೆದ್ದಾರಿಗಳಲ್ಲಿ ಮೂರು ನಾಲ್ಕು ದಿನಗಳಿಂದ ಅಷ್ಟಾಗಿ ಬಿಸಿಲಿನ ದರ್ಶನವಾಗಿಲ್ಲ. ಮಳೆ, ಮೋಡ ಕವಿದ ವಾತಾವರಣವೇ ಕಂಡು ಬಂದಿದ್ದು, ಅದೇ ಇನ್ನು ಕೆಲವು ದಿನ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.












Click it and Unblock the Notifications