Winter Session: ಬೆಳಗಾವಿ ಚಳಿಗಾಲ ಅಧಿವೇಶನಕ್ಕೆ ಮಹೂರ್ತ ಫಿಕ್ಸ್, ರಾಜ್ಯಪಾಲರ ಭಾಷಣದತ್ತ ಎಲ್ಲರ ಚಿತ್ತ
ಬೆಂಗಳೂರು, ನವೆಂಬರ್ 19: ಕರ್ನಾಟಕದಲ್ಲಿ ಚಳಿಗಾಲ ಅಧಿವೇಶನಕ್ಕೆ ಮಹೂರ್ತ ಫಿಕ್ಸ್ ಆಗಿದೆ. ಇದೇ ಡಿಸೆಂಬರ್ 09 ರಿಂದ ಹತ್ತು ದಿನಗಳ ಕಾಲ ಬೆಳಗಾವಿ ಸುವರ್ಣಸೌಧದಲ್ಲಿ ಅಧಿವೇಶನಗಳು ಜರುಗಲಿವೆ. ಈ ವರ್ಷ ಸರ್ಕಾರ vs ರಾಜ್ಯಪಾಲರ ಜಟಾಪಟಿಯು ಸದನದಲ್ಲಿ ಭಾರೀ ಸದ್ದು ಮಾಡಲಿದೆ. ಬಿಜೆಪಿಯು ವಿವಿಧ ವಿಷಯಗಳ ಮೇಲೆ ಸರ್ಕಾರದ ವಿರುದ್ಧ ಮುಗಿಬೀಳಲು ಸಜ್ಜಾಗಿದ್ದಾರೆ. ಕಾಂಗ್ರೆಸ್ ಸಹ ತೀಕ್ಷ್ಣ ಪ್ರತ್ಯುತ್ತರ ಕೊಡಲು ಸಜ್ಜಾಗಿದೆ.
ರಾಜ್ಯ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರಿಂದ ಅಧಿವೇಶನದ ಅಧಿಸೂಚನೆ ಪ್ರಕಟಗೊಳಿಸಿದೆ. ಈ ಕುರಿತು ಮಂಗಳವಾರ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಸಚಿವಾಲಯದಿಂದ ಆದೇಶ ನೀಡಲಾಗಿದ್ದು, ಡಿಸೆಂಬರ್ 9 ರಿಂದ 20 ರವರೆಗೆ 10 ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ.

ದಿನಾಂಕ 14 ರಂದು ಎರಡನೇ ಶನಿವಾರ ಮತ್ತು 15 ರಂದು ಭಾನುವಾರ ಹೊರತುಪಡಿಸಿ. ಉಳಿದ ಹತ್ತು ದಿನಗಳ ಕಾಲ ಸುವರ್ಣ ವಿಧಾನಸೌಧದಲ್ಲಿ ಕಾರ್ಯಕಲಾಪಗಳು ನಡೆಯಲಿವೆ. 16ನೇ ವಿಧಾನಸಭೆಯ ಚಳಿಗಾಲದ ಅಧಿವೇಶನ ಇದಾಗಿದೆ.
ಪ್ರತಿ ಭಾರಿ ಸರ್ಕಾರದ ಸಾಧನೆ ವಿವರಿಸುವ ರಾಜ್ಯಪಾಲರ ಭಾಷಣವು ಈ ಬಾರಿ ಹೇಗಿರಲಿದೆ? ಎಂಬ ಕುತೂಹಲ ಹೆಚ್ಚಾಗಲಿದೆ. ಏಕೆಂದರೆ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣದಲ್ಲಿ ಜಟಾಪಟಿ ಉಂಟಾಗಿತ್ತು. ರಾಜ್ಯಪಾಲರ ನಡೆಯನ್ನು ಸರ್ಕಾರ, ಸಿಎಂ ಸಿದ್ದರಾಮಯ್ಯ ಸೇರಿ ಅನೇಕರು ವಿರೋಧಿಸಿದ್ದರು. ರಾಜಕೀಯ ಕಾರಣದಿಂದ ಹೀಗೆ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.
ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಸರ್ಕಾರದ ಬಿಲ್ ವಾಪಸ್ ಕಳುಹಿಸಲಾಗಿತ್ತು. ಸಚಿವರ ಜಮೀರ್ ಅಹ್ಮದ್ ಖಾನ್ ವಿರುದ್ಧ ಕ್ರಮಕ್ಕೆ ಸರ್ಕಾರಕ್ಕೆ ಇತ್ತೀಚೆಗೆ ರಾಜ್ಯಪಾಲರು ಸೂಚಿಸಿದ್ದರು. ಇದೆಲ್ಲ ಕಾರಣದಿಂದ ರಾಜ್ಯಪಾಲರ ಭಾಷಣದ ಮೇಲೆ ಕುತೂಹಲ ಕೆರಳಿಸುಂತಾಗಿದೆ.
ಇನ್ನೂ ಬಿಜೆಪಿಯು ರಾಜ್ಯದಲ್ಲಿ ವಕ್ಫ್ ಬೋರ್ಡ್‌ನಿಂದ ಬಡವರು, ರೈತರ ಆಸ್ತಿ, ಮಠಗಳು, ಶಾಲೆಗಳು ಆಸ್ತಿಯಲ್ಲಿ ವಕ್ಫ್ ಎಂದು ಉಲ್ಲೇಖಿಸತ್ತು. ಇದೂ ಉತ್ತರ ಕರ್ನಾಟಕದ ವಿಜಯಪುರದಿಂದ ಶುರುವಾಗಿತ್ತು. ಈ ವಿವಾದ, ಬಿಪಿಎಲ್ ಕಾರ್ಡ್ ರದ್ದು, ಮುಡಾ ಪ್ರಕರಣದಲ್ಲಿ ಸಿಎಂ ತನಿಖೆ, ವಾಲ್ಮಿಕಿ ಹಗರಣ, ಅಧಿಕಾರಿಗಳ ಆತ್ಮಹತ್ಯೆ ಸೇರಿದಂತೆ ವಿವಿಧ ವಿಷಯಗಳನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಸಜ್ಜಾಗಿದೆ.












Click it and Unblock the Notifications