ಕರ್ನಾಟಕಕ್ಕೆ ಹೊಸ ವರ್ಷದ ಕೊಡುಗೆ ಕೊಟ್ಟ ಕೇಂದ್ರ ಸರ್ಕಾರ
ಬೆಂಗಳೂರು, ಡಿಸೆಂಬರ್ 03: ಕರ್ನಾಟಕದಲ್ಲಿ ಎರಡು ವಿಮಾನ ಚಾಲನೆ ತರಬೇತಿ ಕೇಂದ್ರ ಸ್ಥಾಪನೆಯಾಗಲಿದೆ. ಬೆಂಗಳೂರಿನ ಜಕ್ಕೂರಿನಲ್ಲಿ ಈಗಾಗಲೇ ದೇಶದ ಅತಿ ಹಳೆಯ ವಿಮಾನ ಚಾಲನೆ ತರಬೇತಿ ಶಾಲೆ ಇದೆ.
ಕೇಂದ್ರ ವಿಮಾನಯಾನ ಸಚಿವಾಲಯ ಕರ್ನಾಟಕದಲ್ಲಿ ಎರಡು ವಿಮಾನ ಚಾಲನೆ ತರಬೇತಿ ಶಾಲೆ ಆರಂಭಿಸಲು ಒಪ್ಪಿಗೆ ನೀಡಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಯೋಜನೆಯ ನಿರ್ವಹಣೆ ನೋಡಿಕೊಳ್ಳಲಿದೆ. ಮುಂದಿನ ಐದು ವರ್ಷಗಳಲ್ಲಿ ವಿಮಾನಯಾನ ಕ್ಷೇತ್ರದಲ್ಲಿ 9 ಸಾವಿರಕ್ಕೂ ಅಧಿಕ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ಬೆಳಗಾವಿ ಮತ್ತು ಕಲಬುರಗಿಯಲ್ಲಿ ವಿಮಾನ ಚಾಲನೆ ತರಬೇತಿ ಶಾಲೆ ಆರಂಭವಾಗಲಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಶಾಲೆಗೆ ಅಗತ್ಯವಿರುವ ಭೂಮಿಯನ್ನು ಲೀಸ್‌ಗೆ ನೀಡುವಂತೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ವಿಮಾನ ಓಡಿಸುವ ರಾಜ್ಯದ ಯುವಕ/ಯುವತಿಯರ ಕನಸಿಗೆ ರೆಕ್ಕೆ ಬಂದಂತಾಗಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ ಕಲಬುರಗಿ, ಬೆಳಗಾವಿ, ಜಲಗಾಂವ್, ಖಜುರಾಹೊ, ಲೀಲಾಬರಿ ಹಾಗೂ ಸೇಲಂ ಜಿಲ್ಲೆಗಳಲ್ಲಿ ಹೊಸದಾಗಿ ವಿಮಾನ ಚಾಲನೆ ತರಬೇತಿ ಶಾಲೆಯನ್ನು ಆರಂಭಿಸಲಿದೆ.

ಅಂತರಾಷ್ಟ್ರೀಯ ಮಟ್ಟದ ಶಾಲೆಗಳು
ರಾಜ್ಯ ಸರ್ಕಾರಗಳು ಭೂಮಿಯನ್ನು ಗುತ್ತಿಗೆ ನೀಡಿದ ಬಳಿಕ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಶಾಲೆಗಳನ್ನು ಆರಂಭಿಸಲು ಟೆಂಡರ್ ಕರೆಯಲಿದೆ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ತರಬೇತಿ ಸಂಸ್ಥೆಗಳಿಗೆ ಶಾಲೆಗಳನ್ನು ಆರಂಭಿಸಲು ಆಹ್ವಾನವನ್ನು ನೀಡಲಿದೆ.

ಪೈಲೆಟ್‌ಗಳ ಕೊರತೆ
ಭಾರತದ ವಿಮಾನಯಾನ ಕ್ಷೇತ್ರ ಅಭಿವೃದ್ಧಿಗೊಳ್ಳುತ್ತಿದೆ. ಮುಂದಿನ 5 ವರ್ಷಗಳಲ್ಲಿ 9,488 ಪೈಲೆಟ್ ಉದ್ಯೋಗಗಳು ಸೃಷ್ಟಿಯಾಗಲಿವೆ. ದೇಶದ ಪ್ರಮುಖ ವಿಮಾನಯಾನ ಸಂಸ್ಥೆಗಳು ಈಗಾಗಗಲೇ ಪೈಲೆಟ್‌ಗಳ ಕೊರತೆ ಎದುರಿಸುತ್ತಿವೆ. ವಿಮಾನ ಚಾಲನೆ ತರಬೇತಿ ಶಾಲೆಯಲ್ಲಿ ತರಬೇತಿ ಪಡೆದು ಯುವಕ/ಯುವತಿಯರು ಪೈಲೆಟ್ ಆಗಬಹುದಾಗಿದೆ.

ಕರ್ನಾಟಕದಲ್ಲಿ 2 ಶಾಲೆ
ಕರ್ನಾಟಕದಲ್ಲಿ 2 ವಿಮಾನ ಚಾಲನೆ ತರಬೇತಿ ಶಾಲೆ ಆರಂಭವಾಗಲಿದೆ. ಇದರಿಂದಾಗಿ ಕಲಬುರಗಿ, ಬೆಳಗಾವಿ ಮಾತ್ರವಲ್ಲ ಇತರ ಜಿಲ್ಲೆಗಳು ಮತ್ತು ತೆಲಂಗಾಣ ಮತ್ತು ಆಂಧ್ರ ಪ್ರದೇಶದ ಯುವಕ/ಯುವತಿಯರಿಗೆ ತರಬೇತಿ ಪಡೆಯಲು ಅನುಕೂಲವಾಗಲಿದೆ. ಪ್ರಸ್ತುತ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ತರಬೇತಿ ಶಾಲೆ ಇದೆ.
Recommended Video

ಹಿಂದೆಯೂ ಪ್ರಯತ್ನ ನಡೆದಿತ್ತು
ಕಲಬುರಗಿ ವಿಮಾನ ನಿಲ್ದಾಣದಲ್ಲಿ ವಿಮಾನ ಚಾಲನೆ ತರಬೇತಿ ಶಾಲೆ ಆರಂಭಿಸಬೇಕು ಎಂಬ ಬೇಡಿಕೆ ಹಿಂದೆಯೇ ಇತ್ತು. ಸುಮಾರು 800 ಎಕರೆ ಪ್ರದೇಶದಲ್ಲಿ ರಾಜ್ಯ ಸರ್ಕಾರವೇ ವಿಮಾನ ನಿಲ್ದಾಣ ನಿರ್ಮಾಣ ಮಾಡಿದೆ. ರಾಜ್ಯದ ಮೂಲ ಸೌಕರ್ಯ ಅಭಿವೃದ್ಧಿ ನಿಗಮ ವಿಮಾನ ಚಾಲನೆ ತರಬೇತಿ ಶಾಲೆ ಆರಂಭಿಸಬಹುದು ಎಂದು ಹಿಂದಯೇ ಹೇಳಿತ್ತು.












Click it and Unblock the Notifications