Rain Alert: ಕರ್ನಾಟಕದ 5 ಜಿಲ್ಲೆಗಳಿಗೆ ಭರ್ಜರಿ ಮಳೆ, ನವೆಂಬರ್ 3ರವರೆಗಿನ ಹವಾಮಾನ ಮುನ್ಸೂಚನೆ
ಬೆಂಗಳೂರು, ಅಕ್ಟೋಬರ್ 29: ಕರ್ನಾಟಕ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆ ಪ್ರಮಾಣ ತಗ್ಗಲಿದೆ. ಹವಾಮಾನ ವೈಪರೀತ್ಯಗಳು ಹಾಗೂ 'ಮೊಂಥಾ' ಚಂಡಮಾರುತ ಪ್ರಭಾವದಿಂದಾಗಿ ಸಾಧಾರಣದಿಂದ ಭಾರಿ ಮಳೆ, ಕೆಲವೆಡೆ ಅತ್ಯಧಿಕ ಮಳೆ ಆಗಿತ್ತು. ಈ ಮಳೆ ಇನ್ನೂ ಒಂದಷ್ಟು ದಿನ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನೆನ್ನೆ ಆಂಧ್ರಪ್ರದೇಶದ ಕರಾವಳಿಗೆ ಮೊಂಥಾ ಚಂಡಮಾರುತ ಅಪ್ಪಳಿಸಿದೆ. ಆ ಭಾಗಗಳಲ್ಲಿ ವ್ಯಾಪಕ ಮಳೆ ತಂದಿದೆ. ಅದರ ಪ್ರಭಾವದಿಂದ ಕರ್ನಾಟಕದ ಹಲವೆಡೆ ಜೋರು ಮಳೆ ಆಗಿದೆ. ಇಂದಿನಿಂದ ಮುಂದಿನ ಐದು (ನವೆಂಬರ್ 3) ದಿನಗಳವರೆಗೆ ಸಾಧಾರಣದಿಂದ ಭಾರೀ ಮಳೆ ಆಗಲಿದೆ. ಕರಾವಳಿ ಮತ್ತು ಮಲೆನಾಡು ಹಾಗೂ ಒಳನಾಡಿನ ಒಂದಷ್ಟು ಜಿಲ್ಲೆಗಳಲ್ಲಿ ವ್ಯಾಪಕ ಹಿಂಗಾರು ಮಳೆ ಸುರಿಯಲಿದೆ ಎಂದು ಐಎಂಡಿ ಮುನ್ಸೂಚನೆಯಲ್ಲಿ ತಿಳಿಸಿದೆ.

ಒಟ್ಟು ಐದು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಹವಾಮಾನ ಇಲಾಖೆ ಪ್ರಕಾರ, ಇವತ್ತು ಬುಧವಾರ ರಾಜ್ಯದ ಐದು ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ದಾಖಲಾಗಲಿದೆ. ಹೀಗಾಗಿಯೇ ಉತ್ತರ ಕನ್ನಡ, ಬೀದರ್, ಕಲಬುರಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆ ಆಗಲಿದೆ. ನಂತರ ನಾಳೆಯಿಂದ ಈ ಭಾಗಗಳಲ್ಲಿ ಮಳೆ ಪ್ರಮಾಣ ತಗ್ಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.
ರಾಜ್ಯದ ಕರಾವಳಿ ಹಾಗೂ ಇತರ ಭಾಗಗಳಲ್ಲಿ ಚಂಡಮಾರುತ ಅಬ್ಬರದ ನಡುವೆಯು ಮಳೆ ಕೊಂಚ ತಗ್ಗಿದೆ. ಮಲೆನಾಡಿನ ಶಿವಮೊಗ್ಗ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಚಾಮರಾಜನಗರ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ, ದಾವಣಗೆರೆ ಸೇರಿದಂತೆ ವಿವಿಧೆಗಳಲ್ಲಿ ಹಗುರ ಮಳೆ ನಿರೀಕ್ಷೆ ಇದೆ. ಒಂದೆಡೆ ಕಡೆಗಳಲ್ಲಿ ಜೋರು ಮಳೆ ಆಗಬಹುದೆಂದು ಐಎಂಡಿ ಊಹಿಸಿದೆ.
ರಾಜ್ಯದಲ್ಲಿ ಮಳೆ ಕಡಿಮೆ ಆಗುತ್ತಿದ್ದಂತೆ ಬಿಸಿಲಿನ ತಾಪ ಹೆಚ್ಚಾಲಿದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನದಲ್ಲಿ ಭಾರೀ ಬದಲಾವಣೆ ಆಗಲಿದೆ. ಬೆಂಗಳೂರು, ಮಂಗಳೂರು, ಮೈಸೂರು ಹಾಗೂ ಎಲ್ಲ ಒಳನಾಡಿನ ಜಿಲ್ಲೆಗಳಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕದಲ್ಲಿ ಬಿಸಿಲಿನ ವಾತಾವರಣವೇ ಕಂಡು ಬರಲಿದೆ. ಒಣಹವೆಯು ಸೃಷ್ಟಿಯಾಗುವ ನಿರೀಕ್ಷೆ ಇದೆ.
ಬೆಂಗಳೂರು ವಾತಾವರಣ
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಹಾಗೂ ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ನಿರೀಕ್ಷೆ ಇದೆ. ಉಳಿದಂತೆ ಸಂಜೆ ಹೊತ್ತು ಮಬ್ಬು ಕವಿದ ವಾತಾವರಣ ಕಂಡು ಬರಬಹದು. ಇದರ ಹೊರತು ಗಂಭೀರ ಸ್ವರೂಪದ ಬದಲಾವಣೆ ಇಲ್ಲ ಎಂದು ಐಎಂಡಿ ಖಚಿತಪಡಿಸಿದೆ.












Click it and Unblock the Notifications