Karnataka Rains: ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಭರ್ಜರಿ ಮಳೆ: ಆರೆಂಜ್ ಅಲರ್ಟ್ ಎಲ್ಲೆಲ್ಲಿ? ಇಲ್ಲಿದೆ ಮಾಹಿತಿ
ಬೆಂಗಳೂರು, ಮೇ 17: ಕರ್ನಾಟಕದಲ್ಲಿ ಮುಂಗಾರು ಪೂರ್ವ ಮಳೆ ಅಬ್ಬರಿಸುತ್ತಿದ್ದು, ಇತ್ತ ರಾಜ್ಯಲ್ಲಿ ವರುಣನ ಕೃಪೆಯಿಂದ ರೈತ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾನೆ. ಮೇ 22 ರವರೆಗೂ ವರುಣನ ಆರ್ಭಟ ರಾಜ್ಯದಲ್ಲಿ ಮುಂದುವರಿಯಲಿದೆ. ಅದರಲ್ಲೂ ದಕ್ಷಿಣ ಕರ್ನಾಟಕದಲ್ಲಿ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ಸೇರಿ ಕರ್ನಾಟಕದ 16ಕ್ಕೂ ಅಧಿಕ ಜಿಲ್ಲೆಗಳಲ್ಲಿ ಇಂದಿನಿಂದ ಭಾರಿ ಮಳೆ ಸುರಿಯಲಿದೆ. ಮೇ 18, 19 ಮತ್ತು 20ರಂದು ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಅನ್ನು ಐಎಂಡಿ ಘೋಷಿಸಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೊಡಗು, ಕೋಲಾರ, ಮೈಸೂರು ಜಿಲ್ಲೆಗಳಲ್ಲಿ ಮೇ 19ರಿಂದ ಅತಿ ಹೆಚ್ಚು ಮಳೆಯಾಗಲಿದ್ದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ಕೊಡಗು, ಮೈಸೂರು, ಹಾಸನ, ಮಂಡ್ಯ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.

ಇನ್ನೂ ನಾಳೆಯಿಂದ ಮೂರು ದಿನಗಳ ಕಾಲ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯಲಿದ್ದು, ಸುಮಾರು 115.5 ಮಿಮೀನಿಂದ 204.5 ಮಿಮೀ ಮಳೆಯಾಗಬಹುದು ಎಂದು ಮುನ್ಸೂಚನೆ ನೀಡಲಾಗಿದೆ. ಈ ಹಿನ್ನೆಲೆ ಆರೆಂಜ್ ಅಲರ್ಟ್ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದ್ದು, ಬೆಂಗಳೂರಿನ ಸುತ್ತಮುತ್ತ ಜಿಲ್ಲೆಗಳು ಹಾಗೂ ಶಿವಮೊಗ್ಗ ಸುತ್ತಮುತ್ತಿನ ಜಿಲ್ಲೆಗಳಲ್ಲಿ ಭರ್ಜರಿ ಮಳೆಯಾಗುವ ಸಾಧ್ಯತೆ ಇದೆ. ಇತ್ತ ಗದಗ, ಕೊಪ್ಪಳ, ರಾಯಚೂರು, ಬಾಗಲಕೋಟೆ ಜಿಲ್ಲೆಗಳಲ್ಲಿ ಬಿರುಗಾಳಿಯೊಂದಿಗೆ ಗಾಳಿ ಬೀಸಲಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ಬೆಳಗಾವಿ, ಬೀದರ್, ಧಾರವಾಡ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿಯಲ್ಲಿ ಕೂಡ ಮಳೆಯಾಗಲಿದೆ.

ಜೂನ್ 7, 8ರಂದು ಕರ್ನಾಟಕಕ್ಕೆ ಮುಂಗಾರು ಎಂಟ್ರಿ!
ಕಳೆದ ಬಾರಿ ಮಳೆ ಇಲ್ಲದೇ ರೈತ ಕಂಗಾಲಾಗಿದ್ದ, ಇದೀಗ ಮುಂಗಾರು ಆರಂಭಕ್ಕೂ ಮೊದಲೇ ರಾಜ್ಯದಲ್ಲಿ ಭರ್ಜರಿ ಮಳೆಯಾಗುತ್ತಿದ್ದು, ಇತ್ತ ಪೂರ್ವ ಮುಂಗಾರು ಮಳೆಯ ಅಬ್ಬರದ ನಡುವೆ ರಾಜ್ಯಕ್ಕೆ ಗುಡ್‌ನ್ಯೂಸ್ ಸಿಕ್ಕಿದೆ. ಜೂನ್ 7 ಅಥವಾ 8 ರಂದು ರಾಜ್ಯದಲ್ಲಿ ಮುಂಗಾರು ಮಾರುತಗಳು ಕರ್ನಾಟಕ ಪ್ರವೇಶಿಸಲಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆಯ ಅಬ್ಬರ ಮುಂದುವರೆದಿದೆ. ಮೇ 19ರಂದು ನೈಋತ್ಯ ಮುಂಗಾರು ಮಾರುತಗಳು ಅಂಡಮಾನ್ ನಿಕೋಬಾರ್ ಮೂಲಕ ಭಾರತವನ್ನು ಪ್ರವೇಶ ಮಾಡಲಿವೆ. ಮೇ 31 ರಂದು ಕೇರಳಕ್ಕೆ ಮಾರುತಗಳು ತಾಕಲಿವೆ. ಜೂನ್ ಮೊದಲ ವಾರದಲ್ಲಿ ಈ ಮಾರುತಗಳು ಕರ್ನಾಟಕವನ್ನು ಪ್ರವೇಶ ಮಾಡಲಿವೆ. ಈ ಬಾರಿ ಕರ್ನಾಟಕ ಸೇರಿ ದಕ್ಷಿಣ ಭಾರತದಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜನ ತತ್ತರಿಸಿದ್ದಾರೆ. ಕೆಲವೆಡೆ ಸಂಚಾರ ಅಸ್ತವ್ಯಸ್ಥಗೊಂಡಿದೆ.












Click it and Unblock the Notifications