Karnataka Rain Alert: ಕರ್ನಾಟಕದ ಈ ಜಿಲ್ಲೆಯಲ್ಲಿ ಭರ್ಜರಿ ಮಳೆ ಹೆಚ್ಚಳ: ಹವಾಮಾನ ಇಲಾಖೆ ಮುನ್ಸೂಚನೆ
ಬೆಂಗಳೂರು, ಮಾರ್ಚ್ 26: ರಾಜ್ಯದಲ್ಲಿ ಬಿರು ಬಿಸಿಲಿಗೆ ಜನತೆ ಕಂಗಾಲಾಗಿದ್ದು, ಪೂರ್ವ ಮುಂಗಾರು ಮಳೆಯಿಂದ ತಕ್ಕ ಮಟ್ಟಿಗೆ ತಂಪಾಗಿದ್ದಾರೆ. ಕಳೆದ ಒಂದು ವಾರದಿಂದ ಬೆಂಗಳೂರು ಸೇರಿದಂತೆ ಹಲವೆಡೆ ಭಾರೀ ಮಳೆಯಾಗುತ್ತಿದೆ. ದಕ್ಷಿಣ ಒಳನಾಡು ಪ್ರದೇಶದಲ್ಲಿ ಮಳೆಯಾರ್ಭಟದಿಂದ ರಾಜ್ಯದ ಜನತೆ ಸಂತಸವನ್ನ ವ್ಯಕ್ತಪಡಿಸಿದ್ದಾರೆ. ಕರ್ನಾಟಕದ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಮುಂದಿನ ಐದು ದಿನಗಳ ಕಾಲ ರಾಜ್ಯದಾದ್ಯಂತ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಮಳೆಯಾಗಲಿದೆ. ಅಲ್ಲದೇ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ತುಂತುರು ಮಳೆಯಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿ ಮತ್ತು ಆಯ್ದ ಒಳನಾಡಿನ ಜಿಲ್ಲೆಗಳಲ್ಲಿ ಲಘು ಮಳೆ ಮತ್ತು ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದ್ದರೆ, ಇತರ ಪ್ರದೇಶಗಳು ಬುಧವಾರ ಒಣಹವೆಯನ್ನು ಅನುಭವಿಸಲಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರತದ ಹವಾಮಾನ ಇಲಾಖೆ (ಐಎಂಡಿ) ದಕ್ಷಿಣ ಛತ್ತೀಸ್‌ಗಢದಿಂದ ಉತ್ತರ ಒಳನಾಡಿನ ತಮಿಳುನಾಡಿನವರೆಗೆ ವಿಸ್ತರಿಸಿರುವ ಉತ್ತರ-ದಕ್ಷಿಣ ಟ್ರೋಫ್ ರಚನೆಯಾಗುತ್ತಿದೆ ಎಂದು ವರದಿ ಮಾಡಿದೆ. ಇದು ಸಮುದ್ರ ಮಟ್ಟದಿಂದ ಸರಾಸರಿ 0.9 ಕಿ.ಮೀ ಎತ್ತರದಲ್ಲಿ ಮಹಾರಾಷ್ಟ್ರ ಮತ್ತು ಕರ್ನಾಟಕದ ಮೂಲಕ ಹಾದುಹೋಗುತ್ತದೆ. ಈ ವ್ಯವಸ್ಥೆಯಿಂದಾಗಿ ಈಗಾಗಲೇ ಕರ್ನಾಟಕದ ಒಳನಾಡಿನ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ,ಉಡುಪಿ, ರಾಯಚೂರು, ವಿಜಯಪುರ ಸೇರದಿಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಕೊಡಗು, ಹಾಸನ, ಚಿಕ್ಕಮಗಳೂರು ಮತ್ತು ಶಿವಮೊಗ್ಗದಲ್ಲಿ ಪ್ರತ್ಯೇಕ ಮಳೆಯಾಗುವ ಸಾಧ್ಯತೆ ಇದೆ. ರಾಜ್ಯದ ಉಳಿದ ಭಾಗಗಳಲ್ಲಿ ಒಣ ಹವಾಮಾನವಿರುತ್ತದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಇನ್ನೂ, ಧಾರವಾಡ ತಾಲೂಕಿನ ಅನೇಕ ಗ್ರಾಮಗಳಲ್ಲಿ ಮಂಗಳವಾರ ಮಳೆರಾಯ ಅಬ್ಬರಿಸಿದ್ದಾನೆ. ಯಾದವಾಡ, ಲಕಮಾಪುರ, ಮರೇವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಮಳೆರಾಯ ಅಬ್ಬರಿಸಿದ್ದು, ಜನರಿಗೆ ಕೊಂಚ ತಂಪಿನ ಅನುಭವವಾಗಿದೆ. ರೈತರ ಇನ್ನೂ ಕೃಷಿ ಕೆಲಸಗಳು ಬಾಕಿ ಇರುವುದರಿಂದ ಈ ಮಳೆ ರೈತರ ಕೃಷಿ ಕೆಲಸಕ್ಕೆ ಕೊಂಚ ಹಿನ್ನಡೆಯನ್ನುಂಟು ಮಾಡಿದೆ. ಬಿಸಿಲಿನ ಧಗೆಗೆ ಬಸವಳಿದ ತಾಲ್ಲೂಕಿನ ಜನತೆಗೆ ಮಂಗಳವಾರ ಮಧ್ಯಾಹ್ನ ಮತ್ತು ಸಂಜೆ ಸುರಿದ ಉತ್ತಮ ಮಳೆಗೆ ತಂಪಿನ ಅನುಭವ ಸವಿಯುವುದರ ಜೊತೆಗೆ ವರ್ಷದ ಪ್ರಥಮ ಮಳೆಯ ಆನಂದ ಸವಿದರು. ಈ ಮಳೆಯ ವಿಶೇಷವಾಗಿ ರೈತನ ಮೊಗದಲ್ಲಿ ಮಂದಹಾಸ ಮೂಡಿಸಿತ್ತು.
ಮಂಗಳವಾರ ಸಂಜೆ ವಾರದ ಸಂತೆಗೆ ಮಳೆಯಿಂದ ಅಡಚಣೆಯಾಯಿತು.ಮಳೆಯಿಂದ ರಕ್ಷಣೆ ಮಾಡಲು ಮಂಗಳವಾರ ಸಂತೆಯ ವ್ಯಾಪಾರಸ್ಥರು ತಾಡಪತ್ರಿಯ ಮೋರೆ ಹೋಗಿದ್ದರು. ಅಳ್ನಾವರ, ಕಾಶೇನಟ್ಟಿ, ಹೂಲಿಕೇರಿ, ಬೆಣಚಿ, ಕೋಗಿಲಗೇರಿ, ಕಡಬಗಟ್ಟಿ, ಡೋರಿ ಮುಂತಾದೆಡೆ ಮಳೆ ಸುರಿದ ಬಗ್ಗೆ ವರದಿಯಾಗಿದೆ. ಹಲವೆಡೆ ಜೋರಾದ ಗಾಳಿ ಬೀಸಿದ್ದರಿಂದ ಮಳೆ ಗಾಳಿಯ ಜೊತೆ ಹಾರಿ ಹೋಯಿತು ಎಂದು ರೈತ ಮಲ್ಲನಗೌಡ ಪಾಟೀಲ ತಿಳಿಸಿದರು.












Click it and Unblock the Notifications