Heavy Rain: ಈ ದಿನದಿಂದ ರಾಜ್ಯದಲ್ಲಿ ಮಳೆ ಅಬ್ಬರ ಶುರು!
ರಾಜ್ಯದಲ್ಲಿ ಮಳೆ ಮತ್ತೆ ಅಬ್ಬರಿಸಲು ಸಿದ್ಧವಾಗುತ್ತಿದೆ. ಏಪ್ರಿಲ್ 30 ರಿಂದಲೇ ರಾಜ್ಯದಲ್ಲಿ ಮಳೆ ಶುರುವಾಗುವ ಮುನ್ಸೂಚನೆ ಇತ್ತಾದರೂ, ಈಗ ಮೇ ಎರಡನೇ ವಾರದವರೆಗೆ ಮುಂದೂಡಿದೆ. ಮೇ 6 ರಿಂದ ರಾಜ್ಯದಲ್ಲಿ ಮಳೆಯಾಗುವುದು ಪಕ್ಕಾ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಮಂಗಳವಾರ ಕೂಡ ರಾಜ್ಯದ ಹಲವು ಕಡೆಗಳಲ್ಲಿ ಮಳೆಯಾಗಿದೆ. ಹಾವೇರಿ ಜಿಲ್ಲೆಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಧಾರವಾಡ ಜಿಲ್ಲೆಯಲ್ಲಿ ಕೂಡ ಚದುರಿದಂತೆ ಮಳೆಯಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಉತ್ತಮ ಮಳೆ ಮುಂದುವರೆದಿದೆ.

ಮೇ 5 ರವರೆಗೆ ರಾಜ್ಯದಲ್ಲಿ ಶಾಖದ ಅಲೆ ಮುಂದುವರೆಯಲಿದೆ. ಬಿಸಿಲಿನ ಝಳ ಹೆಚ್ಚಾಗಿರಲಿದ್ದು, ಜನ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಹೇಳಿದೆ. ಮೇ 5 ರವರೆಗೆ ಹಲವು ಜಿಲ್ಲೆಗಳಿಗೆ ಶಾಖದ ಅಲೆಯ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ರಣಬಿಸಿಲು ಜನರನ್ನು ಹೈರಾಣಾಗಿಸಿದೆ.
ಬೆಂಗಳೂರಿನಲ್ಲಿ ಕೂಡ ತಾಪಮಾನ ಹೆಚ್ಚಾಗಿದ್ದು ಸಿಲಿಕಾನ್ ಸಿಟಿ ಕಾದ ಕಾವಲಿಯಂತಾಗಿದೆ. ಏಪ್ರಿಲ್ ತಿಂಗಳಲ್ಲಿ ಮಳೆಯ ನಿರೀಕ್ಷೆ ಇತ್ತಾದರೂ, ಕಾದ ಹೆಂಚಿನ ಮೇಲೆ ನೀರು ಚಿಮುಕಿಸಿದಂತೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಿದ್ದು ಬಿಟ್ಟರೆ ಬಿಸಿಲಿನ ತಾಪವೇ ಹೆಚ್ಚಿತ್ತು. ಈಗ ಮೇ ಎರಡನೇ ವಾರದ ಆರಂಭದಲ್ಲೇ ಮಳೆ ಅಬ್ಬರಿಸುವ ಸೂಚನೆ ಕೊಟ್ಟಿದೆ.
ಎಲ್ಲೆಲ್ಲಿ ಮಳೆ ಮುನ್ಸೂಚನೆ
ಮೇ 6 ರಂದು ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ, ಬಳ್ಳಾರಿ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮೇ 7 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ಶಿವಮೊಗ್ಗ, ವಿಜಯನಗರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಕೋಲಾರ, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ.
ಮಳೆಗಾಗಿ ಕಾಯುತ್ತಿದೆ ಕರುನಾಡು
ಕರ್ನಾಟಕದಲ್ಲಿ ಕಳೆದ ವರ್ಷ ಮುಂಗಾರು, ಹಿಂಗಾರು ಕೈಕೊಟ್ಟ ಬಳಿಕ ಭೀಕರ ಬರಗಾಲ ತಲೆದೋರಿದೆ, ಎಲ್‌ನಿನೋ ಪರಿಣಾಮ ತಾಪಮಾನ ಕೂಡ ಹೆಚ್ಚಿದ್ದು ಮತ್ತಷ್ಟು ಸಂಕಷ್ಟ ತಂದೊಡ್ಡಿದೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗಿದ್ದು ಮಳೆಯಾದರೆ ಸಾಕು ಎನ್ನುವ ಪರಿಸ್ಥಿತಿ ಇದೆ.
ಯುಗಾದಿ ದಿನದಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದ್ದು ನೆಮ್ಮದಿ ತಂದರೂ, ಇನ್ನೂ ಹಲವು ಜಿಲ್ಲೆಗಳು ಮೊದಲ ಮಳೆಗಾಗಿ ಕಾಯುತ್ತಿವೆ. ಶನಿವಾರದಿಂದ ಭರಣಿ ಮಳೆ ಶುರುವಾಗಿದ್ದು ಈ ಮಳೆಯಾದರೂ ಧರಣಿಯನ್ನು ತಂಪಾಗಿಸಲಿ ಎಂದು ಜನ ಕಾಯುತ್ತಿದ್ದಾರೆ.












Click it and Unblock the Notifications