Karnataka Rains: ವಾಯುಭಾರ ಕುಸಿತ, ರಾಜ್ಯದಲ್ಲಿ ಮತ್ತೆ 5 ದಿನ ಬಿರುಗಾಳಿ ಮಳೆ ಮುನ್ಸೂಚನೆ, ಆರೆಂಜ್ ಅಲರ್ಟ್
ಬೆಂಗಳೂರು: ಸಮುದ್ರ ಮತ್ತು ಭೂಮಿ ಮೇಲ್ಮೈನಲ್ಲಿ ಉಂಟಾಗಿರುವ ಟ್ರಫ್, ವಿವಿಧ ಕಡೆಗಿನ ವಾಯುಭಾರ ಕುಸಿತಗಳ ಪ್ರಭಾವದಿಂದ ಮುಂಗಾರು ಮಳೆ ಮತ್ತಷ್ಟು ಚುರುಕಾಗಿದೆ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮುಂದಿನ 3ದಿನ ಬಿರುಗಾಳಿ ಮಳೆ ಸುರಿಸಲಿದ್ದು, ನಂತರ ಎರಡು ದಿನ (ಆಗಸ್ಟ್ 4ರವರೆಗೆ) ಸಾಧಾರಣದಿಂದ ಭಾರೀ ಮಳೆ ಆಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿದೆ.
ಒಡಿಶಾ ರಾಜ್ಯದ ಒಳನಾಡು, ದಕ್ಷಿಣ ಜಾರ್ಖಂಡ್ ಪ್ರದೇಶ, ಛತ್ತೀಸ್ಗಢ ಪ್ರದೇಶಗಳ ಮೇಲೆ ಉಂಟಾದ ವಾಯುಭಾರ ಕುಸಿತವು ಬುಧವಾರ ಸಂಜೆ ಪ್ರತಿ ಗಂಟೆಗೆ 15 ಕಿಲೋ ಮೀಟರ್ ವೇಗದಲ್ಲಿ ಪಶ್ಚಿಮದತ್ತ ಚಲಿಸಿದೆ. ಛತ್ತೀಸ್ಗಢದ ರಾಯಗಢದಿಂದ ಪಶ್ಚಿಮ-ವಾಯವ್ಯ ದಿಕ್ಕಿಗೆ, ಚಾಂಪಾದಿಂದ ಸುಮಾರು 60 ಕಿಮೀ ಪೂರ್ವ-ಆಗ್ನೆಯಕ್ಕೆ, ಒಡಿಶಾದ ಸಂಬಲ್ಪುರದಿಂದ ಸುಮಾರು 80 ಕಿಮೀ ವಾಯವ್ಯ ದಿಕ್ಕಿನಲ್ಲಿ ವೈಪರೀತ್ಯ ಕೇಂದ್ರೀಕೃತವಾಗಿದೆ.

ಕರ್ನಾಟಕದ ಮೇಲೆ ವೈಪರೀತ್ಯಗಳ ಪ್ರಭಾವ
ಒಡಿಶಾದ ವಿವಿಧ ಭಾಗಗಳಲ್ಲಿ ಹವಾಮಾನ ವೈಪರೀತ್ಯದ ತೀವ್ರತೆ ಮುಂದುವರಿಯಲಿದೆ. ಮುಂದಿನ 24 ಗಂಟೆಗಳ ಅವಧಿಯಲ್ಲಿ ಛತ್ತೀಸ್ಗಢದಿಂದ ಪೂರ್ವ ಮಧ್ಯಪ್ರದೇಶದ ಮೂಲಕ ಪಶ್ಚಿಮ ದಿಕ್ಕಿನತ್ತ ಸಾಗುವ ಸಾಧ್ಯತೆ ಇದೆ. ಇನ್ನೂ ಮಧ್ಯ ಭಾರತಾದ್ಯಂತ 3.1 ಕಿಮೀ ಮತ್ತು 7.6 ಕಿಮೀ ಎತ್ತರದಲ್ಲಿ ತೀವ್ರ ಸುಳಿಗಾಳಿ ಬೀಸಿದೆ. ಇದೆಲ್ಲದರ ಪ್ರಭಾವವು ಕರ್ನಾಟಕದ ಮೇಲೂ ಆಗಲಿದೆ. ಬಂಗಾಳಕೊಲ್ಲಿ, ಅರಬ್ಬಿ ಸಮುದ್ರ ಮೇಲ್ಮೈ ಬದಲಾವಣೆ ಕಾರಣದಿಂದ ಕರ್ನಾಟಕ ಕರಾವಳಿ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಮುಂದಿನ 5 ದಿನ ವ್ಯಾಪಕ ಮಳೆ ಆಗಲಿದೆ.
5 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ರಾಜ್ಯದಲ್ಲಿ ಮಳೆ ದುರ್ಬಲವಾಯಿತು ಎನ್ನುವಷ್ಟರಲ್ಲಿ ಮತ್ತೆ ಮುಂಗಾರು ಸಕ್ರಿಯವಾಗಿದೆ. ಮುಂದಿನ ಎರಡು (ಜುಲೈ 31ರವರೆಗೆ) ಕರಾವಳಿ ಕರ್ನಾಟಕ ಹಾಗೂ ದಕ್ಷಿಣ ಒಳನಾಡು ಕರ್ನಾಟಕದ ಒಂದೆರಡು ಸ್ಥಳಗಳಲ್ಲಿ ಭಾರಿಯಿಂದ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗರಿಷ್ಠ 200 ಮಿಲಿ ಮೀಟರ್ವರೆಗೆ ಭಾರೀಯಿಂದ ಅತ್ಯಧಿಕ ಭಾರೀ ಮಳೆ ಸುರಿಯಲಿದ್ದು, ಎರಡು ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರ್ನಾಟಕದ ಉತ್ತರ ಒಳನಾಡಿಗೂ ಭಾರೀ ಮಳೆ
ಉತ್ತರ ಒಳನಾಡಿನ ಕೆಲವೆಡೆ ಭಾರೀ, ಉಳಿದೆಲ್ಲ ಕಡೆ ತುಂತುರು ಮಳೆ ಮಾತ್ರವೇ ಆಗಿತ್ತಿತ್ತು. ಕಳೆದ ಎರಡು ವಾರಗಳಿಂದ ಮಬ್ಬು ಕವಿದ ವಾತಾವರಣವೇ ಕಂಡು ಬರುತ್ತಿದೆ. ಇದೀಗ ಈ ಭಾಗದಲ್ಲೂ ಜೋರು ಮಳೆಯ ಲಕ್ಷಣಗಳು ಕಂಡು ಬಂದಿವೆ.
ಬೆಳಗಾವಿ, ಬೀದರ್ ಹಾಗೂ ಕಲಬುರಗಿ ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ. ವೇಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದ್ದು, 'ಯೆಲ್ಲೋ ಅಲರ್ಟ್' ಕೊಡಲಾಗಿದೆ. ಇನ್ನೂ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ರಾಯಚೂರು, ವಿಜಯಪುರ ಹಾಗೂ ಯಾದಗಿರಿ ಜಿಲ್ಲೆಗಳ ಅನೇಕ ಸ್ಥಳಗಳಲ್ಲಿ ಗಂಟೆಗೆ 40-50 ಕಿ.ಮೀ. ವೇಗದ ನಿರಂತರ ಗಾಳಿಯೊಂದಿಗೆ ಹಗುರದಿಂದ ಸಾಧಾರಣ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ತಜ್ಞರು ತಿಳಿಸಿದ್ದಾರೆ.
ದಕ್ಷಿಣ ಒಳನಾಡಿನ ಕೊಡಗು, ಹಾಸನ, ಬಳ್ಳಾರಿ, ಬೆಂಗಳೂರು (ಗ್ರಾಮಾಂತರ), ಬೆಂಗಳೂರು (ನಗರ), ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳ ಕೆಲವೆಡೆ ಸಾಮಾನ್ಯ ಮಳೆ ಸಂಭವವಿದೆ.


Click it and Unblock the Notifications
