Defence Corridor: ಕರ್ನಾಟಕದ ಇಲ್ಲಿ 2 ಡಿಫೆನ್ಸ್ ಕಾರಿಡಾರ್ ಸ್ಥಾಪನೆಗೆ ಪ್ರಸ್ತಾವನೆ...
ನವದೆಹಲಿ/ಬೆಂಗಳೂರು, ಜುಲೈ 10: ಕೇಂದ್ರ ಸರ್ಕಾರ 2018ರಲ್ಲಿ ಉತ್ತರಪ್ರದೇಶ ಮತ್ತು ತಮಿಳುನಾಡಿಗೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಿದೆ. ಅದರಂತೆ ಕರ್ನಾಟಕ ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ ತಲಾ ಒಂದರಂತೆ ಎರಡು ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡುವಂತೆ ಸಿಎಂ ನೇತೃತ್ವದಲ್ಲಿ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ, ಇಂಧನ ಸಚಿವ ಕೆ ಜೆ ಜಾರ್ಜ್, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರಿದ್ದ ನಿಯೋಗ ಕೇಂದ್ರ ರಕ್ಷಣಾ ಸಚಿವರಿಗೆ ಮನವಿ ಮಾಡಿದೆ. ಹಾಗಾದ್ರೆ ಎಲ್ಲೆಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಏನಿದು? ಎಂಬ ಪೂರ್ಣ ಮಾಹಿತಿ ಇಲ್ಲಿದೆ.
ಕೇಂದ್ರವು ಬೇರೆ ಎರಡು ರಾಜ್ಯಗಳಿಗೆ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಿದೆ. ದೇಶದ ರಕ್ಷಣಾ ಮತ್ತು ವೈಮಾಂತರಿಕ್ಷ ವಲಯದಲ್ಲಿ ಕರ್ನಾಟಕವು ಶೇ.75ರಷ್ಟು ಪಾಲು ಹೊಂದಿದೆ. ಜಾಗತಿಕವಾಗಿ ಮೂರನೇ ಅತ್ಯುತ್ತಮ ಕಾರ್ಯಪರಿಸರ ಹೊಂದಿರುವ ಹೆಗ್ಗಳಿಕೆ ಸಂಪಾದಿಸಿದೆ. ಹೀಗಾಗಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕಗಳಿಗೆ ಒಂದೊಂದು ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಬೇಕು. ಇದು ಮೇಕ್ ಇನ್ ಇಂಡಿಯಾ ಉಪಕ್ರಮಕ್ಕೂ ಬಲ ತುಂಬುತ್ತದೆ ಎಂದು ಸಿದ್ದರಾಮಯ್ಯ ಮನದಟ್ಟು ಮಾಡಿಕೊಟ್ಟಿದ್ದಾರೆ ಎಂದು ಎಂಬಿ ಪಾಟೀಲರು ಕೇಂದ್ರ ಸಚಿವ ರಾಜನಾಥ್ ಸಿಂಗ್ ಅವರಿಗೆ ಮಾಹಿತಿ ನೀಡಿದರು.

ಡಿಫೆನ್ಸ್ ಕಾರಿಡಾರ್ ಉದ್ದೇಶಿತ ಸ್ಥಳಗಳು ಯಾವುವು?
ಕರ್ನಾಟಕದ ದಕ್ಷಿಣ ಭಾಗವಾದ ಬೆಂಗಳೂರು ಗ್ರಾಮಾಂತರ-ಕೋಲಾರ-ಚಿಕ್ಕಬಳ್ಳಾಪುರ ಹಾಗೂ ಉತ್ತರ ಕರ್ನಾಟಕದ ಹುಬ್ಬಳ್ಳಿ ಧಾರವಾಡ-ಬೆಳಗಾವಿ-ವಿಜಯಪುರ ಜಿಲ್ಲೆಗಳಿಗೆ ಕೇಂದ್ರ ಸರ್ಕಾರ ಎರಡು ಪ್ರತ್ಯೇಕ ಡಿಫೆನ್ಸ್ ಕಾರಿಡಾರ್ ಮಂಜೂರು ಮಾಡಬೇಕೆಂದು ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ನಿಯೋಗವು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಬುಧವಾರ ಮನವಿ ಸಲ್ಲಿಸಿತು.
ಉತ್ತರ ಕರ್ನಾಟಕಕ್ಕೆ ಯಾಕೆ ಬೇಕು?
ಉತ್ತರ ಕರ್ನಾಟಕದ ಮೇಲ್ಕಂಡ ಮೂರು ಜಿಲ್ಲೆಗಳಲ್ಲಿ ರಕ್ಷಣಾ ವಲಯದ ಉತ್ಪಾದನಾ ಕಂಪನಿಗಳಾದ ಬಾಲೂ ಫೋರ್ಜ್, ಏಕಸ್, ಬಿಕಾರ್ ಏರೋಸ್ಪೇಸ್, ವಾಲ್‌ಚಂದ್ ನಗರ್ ಇಂಡಸ್ಟ್ರೀಸ್ ಮುಂತಾದವು ನೆಲೆಯೂರಿವೆ. ಜತೆಗೆ ಬೆಳಗಾವಿಯಲ್ಲಿ 250 ಎಕರೆಯಲ್ಲಿ ದೇಶದ ಪ್ರಪ್ರಥಮ ಪ್ರಿಸಿಶನ್ ಉತ್ಪಾದನೆಯ ವಿಶೇಷ ಆರ್ಥಿಕ ವಲಯವು ಸಕ್ರಿಯವಾಗಿದೆ. ಇಲ್ಲಿ 31 ಘಟಕಗಳಿದ್ದು, 5 ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿವೆ ಎಂದು ನಿಯೋಗದ ಸದಸ್ಯರು ತಿಳಿಸಿದರು.

ಇನ್ನೂ ದಕ್ಷಿಣ ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ರಕ್ಷಣಾ ಸಾಮಗ್ರಿ ಮತ್ತು ವೈಮಾಂತರಿಕ್ಷ ಕಂಪನಿಗಳಾದ ಸಾರ್ವಜನಿಕ ವಲಯದ ಎಚ್‌ಎಎಲ್, ಕಾಲಿನ್ಸ್ ಏರೋಸ್ಪೇಸ್, ಡೈನಮ್ಯಾಟಿಕ್ ಟೆಕ್ನಾಲಜೀಸ್, ಸೆಂಟಮ್, ಸಾಸ್ಮೋಸ್, ಬೆಲ್ಲಾಟ್ರಿಕ್ಸ್ ಮುಂತಾದವು ಇವೆ. ಇವುಗಳೊಂದಿಗೆ ಟಿಎಎಸ್‌ಎಲ್ ತನ್ನ ಅಂತಿಮ ಜೋಡಣಾ ಘಟಕವನ್ನು ಆರಂಭಿಸುತ್ತಿದೆ.
ಏರ್ ಇಂಡಿಯಾ ಮತ್ತು ಇಂಡಿಗೋ ಸಾವಿರಾರು ಕೋಟಿ ರೂ. ಬಂಡವಾಳ ಹೂಡಿಕೆಯೊಂದಿಗೆ ತಮ್ಮ ಎಂಆರ್‌ಒ ಘಟಕಗಳನ್ನು ಬೆಂಗಳೂರಿನ ಸಮೀಪದಲ್ಲಿ ಸ್ಥಾಪಿಸುತ್ತಿವೆ. ದೇವನಹಳ್ಳಿಯಲ್ಲಿ 2 ಸಾವಿರ ಎಕರೆ ವಿಸ್ತಾರದ ಹೈಟೆಕ್ ರಕ್ಷಣಾ ಮತ್ತು ವೈಮಾಂತರಿಕ್ಷ ಪಾರ್ಕ್ ಇದೆ. ಈ ಭಾಗದಲ್ಲಿ ದೇಶದ ಏರ್‌ಕ್ರಾಫ್ಟ್ ಮತ್ತು ಸ್ಪೇಸ್‌ಕ್ರಾಫ್ಟ್ ವಲಯದ ಶೇಕಡ 25ರಷ್ಟು ತಯಾರಿಕೆ ನಡೆಯುತ್ತಿದೆ. ವಿಮಾನ ಮತ್ತು ಹೆಲಿಕಾಪ್ಟರ್ ತಯಾರಿಕೆಯಲ್ಲಿ ರಾಜ್ಯದ ಕೊಡುಗೆ ಶೇ.67ರಷ್ಟಿದೆ. ಇದೆಲ್ಲ ಅಂಶಗಳನ್ನು ಪರಿಗಣಿಸಿ, ಎರಡು ಡಿಫೆನ್ಸ್ ಕಾರಿಡಾರ್‌ಗಳನ್ನು ಮಂಜೂರು ಮಾಡಬೇಕೆಂದು ನಿಯೋಗವು ಒತ್ತಾಯಿಸಿದೆ.
ಮನವಿ ಸ್ವೀಕರಿಸಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಇವುಗಳನ್ನು ಸೂಕ್ತವಾಗಿ ಪರಿಶೀಲಿಸುವ ಭರವಸೆ ನೀಡಿದ್ದಾರೆ ಎಂದು ಕೈಗಾರಿಕೆ ಸಚಿವರ ಎಂಬಿ ಪಾಟೀಲ್ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.












Click it and Unblock the Notifications