ಬಿಜೆಪಿ ಜೊತೆಗಿನ ಮೈತ್ರಿ ವಿಚಾರ: ಒಡೆದ ಮನೆಯಂತಾದ ಜೆಡಿಎಸ್- ನಾಯಕರ ನಡುವೆಯೇ ಸ್ಫೋಟಗೊಂಡ ಅಸಮಾಧಾನ
ಬೆಂಗಳೂರು, ಜುಲೈ 21: ವಿಧಾನಸಭೆ ಚುಣಾವಣೆ ಫಲಿತಾಂಶ ಹೊರಬಂದಾಗಿಂದ ರಾಜ್ಯ ರಾಜಕಾರಣದಲ್ಲಿ ಹಲವು ಮಹತ್ವ ಬೆಳವಣಿಗೆಗಳು ನಡೆಯುತ್ತಿವೆ. ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಮೈತ್ರಿ ಮಾಡಿಕೊಳ್ಳುವ ಮೂಲಕ ಮುಂದಿನ ಲೋಕಸಭಾ ಚುನಾವಣೆಯನ್ನು ಎದುರಿಸಲಿವೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಈ ವಿಚಾರವೀಗ ಜೆಡಿಎಸ್‌ನಲ್ಲಿಯೇ ಬಿರುಕನ್ನು ಮೂಡಿಸಿದೆ ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ಜೊತೆಗಿನ ಮೈತ್ರಿ ವಿಚಾರವಾಗಿ ಜೆಡಿಎಸ್ ನಾಯಕರಲ್ಲಿ ಒಮ್ಮತ ಮೂಡುತ್ತಿಲ್ಲ ಎಂಬುದು ಗೊತ್ತಾಗಿದೆ. ಜೆಡಿಎಸ್‌ನ 19 ಶಾಸಕರ ಪೈಕಿ ಕೆಲವು ಶಾಸಕರಿಗೆ ಬಿಜೆಪಿ ಮೈತ್ರಿ ಕುರಿತು ಭಿನ್ನಾಭಿಪ್ರಾಯವಿದೆ ಎಂದು ತಿಳಿದುಬಂದಿದೆ.

ವಿಧಾನಸಭೆಯಿಂದ ಅಮಾನತುಗೊಂಡಿರುವ ಬಿಜೆಪಿ ಶಾಸಕರಿಗೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಮಾಜಿ ಸಚಿವ, ಜೆಡಿಎಸ್ ಹಿರಿಯ ನಾಯಕ ಜಿ ಟಿ ದೇವೇಗೌಡ ಅವರು ಇದಕ್ಕೆ ವಿರೋಧವಾಗಿ ನಿಂತಿದ್ದಾರೆ.
ಪೇಪರ್ ಹರಿದು ಸ್ಪೀಕರ್ ಕುರ್ಚಿಯ ಮೇಲೆ ಎಸೆದದ್ದು ಅಶಿಸ್ತಿನ ವರ್ತನೆ ಎಂದು ಬಿಜೆಪಿ ಶಾಸಕರನ್ನು ಜಿ ಟಿ ದೇವೇಗೌಡ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಘಟನೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಸಮಾನ ಹೊಣೆಗಾರರು ಎಂದು ಅವರು ಹೇಳಿದ್ದಾರೆ.
ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಅಸ್ತಿತ್ವ ಉಳಿಯಲು ಎರಡೂ ರಾಷ್ಟ್ರೀಯ ಪಕ್ಷಗಳನ್ನು ಸಮಾನ ಅಂತರದಲ್ಲಿ ಇಡಬೇಕು ಎಂಬ ಸ್ಪಷ್ಟ ಸೂಚನೆಯನ್ನು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ನೀಡಿದ್ದಾರೆ. ಪಕ್ಷದ ಬಗ್ಗೆ ಗೌರವ ಹೊಂದಿರುವ ಕೆಲ ರಾಜಕೀಯ ತಜ್ಞರು ಇದೇ ಸಲಹೆಯನ್ನು ನೀಡಿದ್ದಾರೆ.

ಮಾಜಿ ಸಚಿವ ಹೆಚ್ ಡಿ ರೇವಣ್ಣ ಅವರಿಗೂ ಇದೇ ಭಾವನೆ ಇದೆ ಎಂದು ಹೇಳಲಾಗುತ್ತಿದೆ. ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ರದ್ದುಪಡಿಸಲು ಕಾಂಗ್ರೆಸ್ ಪಕ್ಷವು ಮಸೂದೆಯನ್ನು ಅಂಗೀಕರಿಸಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದು ಎಚ್‌ಡಿ ರೇವಣ್ಣ ಅವರಿಗೆ ಸರಿ ಕಂಡುಬರಲಿಲ್ಲ ಎಂದು ಮುಖಂಡರೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುಮಾರಸ್ವಾಮಿ ಅವರ ಬಯಕೆಗೆ ಸುಮಾರು 12 ಜೆಡಿಎಸ್ ಶಾಸಕರು ವಿರೋಧ ವ್ಯಕ್ತಪಡಿಸಿದ್ದಾರೆ. ಕನಿಷ್ಠ ಪಕ್ಷ, ದೇವೇಗೌಡರನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ಐಎನ್‌ಡಿಐಎ ಮೈತ್ರಿಕೂಟದ ನಾಯಕರಿಗೆ ಕುಮಾರಸ್ವಾಮಿ ಸೂಚಿಸಬಹುದಿತ್ತು ಎಂದು ಕೆಲ ಜೆಡಿಎಸ್ ನಾಯಕರು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿ ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಬಿಜೆಪಿ ಮತ್ತು ಜೆಡಿಎಸ್ ಪತ್ರ ಬರೆದಿದೆ. ಈ ಪತ್ರಕ್ಕೆ ಕುಮಾರಸ್ವಾಮಿ ಮೊದಲ ಸಹಿ ಹಾಕಿರುವುದು ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ.

2024 ರ ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳಬೇಕೆಂದು ಕುಮಾರಸ್ವಾಮಿ ಬಯಸಿದ್ದಾರೆ. ಆದರೆ, ಎಚ್‌ಡಿ ರೇವಣ್ಣ ಅವರು ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ತಮ್ಮ ಮಗ ಹಾಗೂ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ರಾಜಕೀಯ ಭವಿಷ್ಯದ ದೃಷ್ಟಿಯಿಂದ ಈ ಮೈತ್ರಿ ಒಳ್ಳೆಯದಲ್ಲ ಎಂಬ ಅಭಿಪ್ರಾಯವನ್ನು ಎಚ್‌ಡಿ ರೇವಣ್ಣ ಹೊಂದಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ - ಜೆಡಿಎಸ್ ಮೈತ್ರಿಯನ್ನು ಅವರು ವಿರೋಧಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜೆಡಿಎಸ್ ನಡೆಯ ಬಗ್ಗೆ ಕಾಂಗ್ರೆಸ್ ವ್ಯಂಗ್ಯ
ಬಿಜೆಪಿ ಮೈತ್ರಿ ಬಗೆಗಿನ ಊಹಾಪೋಹಗಳ ನಡುವೆಯೇ ಜೆಡಿಎಸ್ ಅನ್ನು ಕಾಂಗ್ರೆಸ್ ಟೀಕಿಸಿದೆ. ಈ ವಿಚಾರವಾಗಿ ವ್ಯಂಗ್ಯವಾಡಿ ಟ್ವೀಟ್ ಮಾಡಿರುವ ಕಾಂಗ್ರೆಸ್, 'ಜೆಡಿಎಸ್ ಹಾಗೂ ಬಿಜೆಪಿಯ ಹೊಂದಾಣಿಕೆಯು ಕುರುಡನ ಹೆಗಲ ಮೇಲೆ ಕುಂಟನ ಸವಾರಿಯಂತಿದೆ' ಎಂದು ಹೇಳಿದೆ.
'ಒಬ್ಬರಿಗೆ ನಡೆಯಲಾಗದು, ಮತ್ತೊಬ್ಬರಿಗೆ ಕಣ್ಣು ಕಾಣದು. ಒಟ್ಟಿನಲ್ಲಿ ಈ ಸವಾರಿಯು ದಾರಿ ತಪ್ಪಿ ಪ್ರಪಾತಕ್ಕೆ ಬೀಳುವುದು ನಿಶ್ಚಿತ' ಎಂದು ಹೇಳಿದೆ.
ನಾಯಕತ್ವವಿಲ್ಲದ ಬಿಜೆಪಿ ಜೆಡಿಎಸ್‌ನಿಂದ ನಾಯಕತ್ವದ ಎರವಲು ಪಡೆಯಲು ಮುಂದಾಗಿದ್ದು ನಾಚಿಕೆಗೇಡು. ಇತ್ತ ಜೆಡಿಎಸ್ ಕೋಮುವಾದಿಗಳ ಸಂಘ ಮಾಡಿದ್ದು ಮತಿಗೇಡಿತನ ಎಂದೂ ವಾಗ್ದಾಳಿ ನಡೆಸಿದೆ.












Click it and Unblock the Notifications