Santro Ravi arrest : 11 ದಿನಗಳ ಬಳಿಕ ಗುಜರಾತ್‌ನಲ್ಲಿ ಸ್ಯಾಂಟ್ರೊ ರವಿ ಬಂಧನ
ಬೆಂಗಳೂರು, ಜನವರಿ 13; ಕರ್ನಾಟಕದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಸ್ಯಾಂಟ್ರೊ ರವಿ ಬಂಧಿಸಲಾಗಿದೆ. ಕರ್ನಾಟಕದ ಪೊಲೀಸರು ಸ್ಯಾಂಟ್ರೊ ರವಿಯನ್ನು 11 ದಿನಗಳ ಬಳಿಕ ಗುಜರಾತ್‌ನಲ್ಲಿ ಬಂಧಿಸಿದ್ದಾರೆ.
ಶುಕ್ರವಾರ ಸ್ಯಾಂಟ್ರೊ ರವಿಯನ್ನು ವಡೋದರಾದಲ್ಲಿ ಬಂಧಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಯಾಂಟ್ರೊ ರವಿ ವಿರುದ್ಧ ದಾಖಲಾಗಿರುವ ದೂರಿನ ತನಿಖೆ ನಡೆಸಲು ಮೈಸೂರು ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಿದ್ದರು.

ಮೈಸೂರು, ರಾಮನಗರ ಪೊಲೀಸರು ವಿಶೇಷ ತಂಡಗಳನ್ನು ರಚನೆ ಮಾಡಿಕೊಂಡು ಸ್ಯಾಂಟ್ರೊ ರವಿಗಾಗಿ ಹುಡುಕಾಟ ನಡೆಸಿದ್ದರು. ಗುರುವಾರ ರಾಮನಗರದಲ್ಲಿ ರವಿ ಕಾರು ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿತ್ತು.
ನಾಲ್ವರು ಎಸ್ಪಿಗಳ ನೇತೃತ್ವದಲ್ಲಿ ಸ್ಯಾಂಟ್ರೊ ರವಿ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚನೆ ಮಾಡಲಾಗಿತ್ತು. ಗುಜರಾತ್‌ನಲ್ಲಿ ರವಿ ಬಂಧಿಸಿರುವ ಪೊಲೀಸರು ಕರ್ನಾಟಕಕ್ಕೆ ಕರೆತರುತ್ತಿದ್ದಾರೆ. ಸ್ಯಾಂಟ್ರೊ ರವಿ ಬಂಧನದ ಬಗ್ಗೆ ಎಡಿಜಿಪಿ ಅಲೋಕ್ ಕುಮಾರ್ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ.
ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಸ್ಯಾಂಟ್ರೊ ರವಿ ವಿರುದ್ಧ ದೂರು ದಾಖಲಾದ ಬಳಿಕ ಆತ ಪರಾರಿಯಾಗಿದ್ದ. ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಪೊಲೀಸ್ ಇಲಾಖೆಯ ವರ್ಗಾವಣೆ ದಂಧೆಯಲ್ಲಿ ತೊಡಗಿದ್ದ ರವಿ ಬಂಧಿಸುವುದು ಪೊಲೀಸರಿಗೆ ಸವಾಲಾಗಿತ್ತು.
ನಿರೀಕ್ಷಣಾ ಜಾಮೀನಿಗೂ ಸಹ ಸ್ಯಾಂಟ್ರೊ ರವಿ ಅರ್ಜಿ ಹಾಕಿದ್ದ. ಗುರುವಾರ ಮೈಸೂರಿನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಸ್ಯಾಂಟ್ರೊ ರವಿ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆಯನ್ನು ಜನವರಿ 17ಕ್ಕೆ ಮುಂದೂಡಿತ್ತು.
ಮಂಡ್ಯದ ಫಾರಂ ಹೌಸ್‌ನಲ್ಲಿದ್ದ ಸ್ಯಾಂಟ್ರೊ ರವಿ ಅಲ್ಲಿಂದ ಪುಣೆಗೆ ತೆರಳಿದ್ದ. ಅಲ್ಲಿಂದ ಗುಜರಾತ್‌ಗೆ ಪರಾರಿಯಾಗಿದ್ದ. ಮೊಬೈಲ್ ಕರೆಗಳ ಮಾಹಿತಿ ಅನ್ವಯ ಕಾರ್ಯಾಚರಣೆ ನಡೆಸಿ ಪೊಲೀಸರ ವಿಶೇಷ ತಂಡ ಗುಜರಾತ್‌ನಲ್ಲಿ ಬಂಧಿಸಿದೆ.












Click it and Unblock the Notifications