Karnataka MLAs Salary: ಕರ್ನಾಟಕದ ಶಾಸಕರ ವೇತನ ಏರಿಕೆ, ಈಗ ಎಷ್ಟಿದೆ?
ಬೆಂಗಳೂರು, ಮಾರ್ಚ್ 04: ಕರ್ನಾಟಕದಲ್ಲಿ ನಮ್ಮ ಮೆಟ್ರೋ, ಸರ್ಕಾರಿ ಬಸ್‌ಗಳ ಪ್ರಯಾಣ ದರ ಏರಿಕೆಯಾಗಿ ಜನರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗೃಹ ಲಕ್ಷ್ಮಿ ಯೋಜನೆ ಹಣ ಇನ್ನೂ ಮಹಿಳೆಯರ ಬ್ಯಾಂಕ್ ಖಾತೆಗೆ ಜಮಾವಣೆಗೊಂಡಿಲ್ಲ. ಜನರು ಸರ್ಕಾರದ ವಿರುದ್ಧ ಅಕ್ರೋಶಗೊಂಡಿರುವ ಹೊತ್ತಿನಲ್ಲಿಯೇ ನಮ್ಮ ಶಾಸಕರ ವೇತನ ಹೆಚ್ಚಿಸಿಕೊಳ್ಳಲು ತೀರ್ಮಾನಿಸಿದ್ದಾರೆ. ಸರ್ಕಾರದ ಒಪ್ಪಿಗೆ ಸಿಕ್ಕಿದರೆ ಶಾಸಕರ ವೇತನ (ಭತ್ಯೆ ಹೊರತುಪಡಿಸಿ) ತಿಂಗಳಿಗೆ 80,000 ರೂ. ಆಗಲಿದೆ.
ಸೋಮವಾರ ಬಜೆಟ್ ಅಧಿವೇಶನ ಆರಂಭವಾಗಿದೆ. ಸ್ಪೀಕರ್ ಯು. ಟಿ. ಖಾದರ್, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅಧ್ಯಕತೆಯಲ್ಲಿ ಸದನದ ವ್ಯವಹಾರಗಳಿಗೆ ಸಂಬಂಧಿಸಿದ ಕಾರ್ಯಸೂಚಿಯನ್ನು ಪರಿಗಣಿಸಲು ವ್ಯವಹಾರ ಸಲಹಾ ಸಮಿತಿ ಸಭೆ ನಡೆಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ವಿರೋಧ ಪಕ್ಷದ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಈ ಸಭೆಯಲ್ಲಿ ಶಾಸಕರ ವೇತನ ಹೆಚ್ಚಳ ಮಾಡುವ ಮಸೂದೆ ಮಂಡನೆ ಮಾಡುವ ಕುರಿತು ಚರ್ಚಿಸಲಾಗಿದೆ. ಕಳೆದ ಚಳಿಗಾಲದ ಅಧಿವೇಶನದ ಸಮಯದಲ್ಲಿಯೇ ಬಿಜೆಪಿಯ ಸದಸ್ಯ ಅರವಿಂದ ಬೆಲ್ಲದ್ ಶಾಸಕರ ವೇತನ ಹೆಚ್ಚಳದ ಪ್ರಸ್ತಾಪವನ್ನು ಮಾಡಿದ್ದರು. ಬಜೆಟ್ ಅಧಿವೇಶನ ಮಾರ್ಚ್ 21ರ ತನಕ ನಡೆಯಲಿದ್ದು, ಅಧಿವೇಶನದಲ್ಲಿ ಮಸೂದೆ ಮಂಡಿಸುವ ನಿರೀಕ್ಷೆ ಇದೆ.
ಕರ್ನಾಟಕ ಮಂತ್ರಿಗಳ ಸಂಬಳಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022 ಹಾಗೂ ಕರ್ನಾಟಕ ವಿಧಾನಮಂಡಲದವರ ಸಂಬಳಗಳು, ನಿವೃತ್ತಿ ವೇತನಗಳು ಮತ್ತು ಭತ್ಯೆಗಳ (ತಿದ್ದುಪಡಿ) ಮಸೂದೆ 2022 ವಿಧೇಯಕ ಮಂಡನೆ ಮಾಡಲಾಗುತ್ತದೆ. ಶಾಸಕರ ವೇತನ ಹೆಚ್ಚಳ ಮಸೂದೆ ಮಂಡನೆ ಮಾಡಿದರೆ ಯಾವ ಸದಸ್ಯರ ವಿರೋಧವೂ ಇಲ್ಲದೇ ಮಸೂದೆ ಅನುಮೋದನೆಯಾಗಲಿದೆ. ಈ ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಶಾಸಕರ ವೇತನ 80,000 ರೂ.ಗಳಿಗೆ ಏರಿಕೆಯಾಗಲಿದೆ (ಭತ್ಯೆ ಹೊರತುಪಡಿಸಿ).
ಈಗ ಎಷ್ಟು ವೇತನ ಸಿಗುತ್ತಿದೆ?; ಪ್ರಸ್ತುತ ಮುಖ್ಯಮಂತ್ರಿ, ವಿಧಾನಸಭೆ ಸ್ಪೀಕರ್, ಪರಿಷತ್ ಸಭಾಪತಿ, ಸಂಪುಟ ದರ್ಜೆ ಸಚಿವರು, ರಾಜ್ಯ ಖಾತೆ ಸಚಿವರು, ವಿರೋಧ ಪಕ್ಷದ ನಾಯಕರು, ಶಾಸಕರು, ಎಂಎಲ್‌ಸಿಗಳು ವಿವಿಧ ಮಾದರಿಯ ವೇತನ ಶ್ರೇಣಿ ಹೊಂದಿದ್ದಾರೆ.
ಹಾಲಿ ಮುಖ್ಯಮಂತ್ರಿಗಳ ವೇತನ 75,000 ರೂ.ಗಳು. ವಿರೋಧ ಪಕ್ಷದ ನಾಯಕರ ವೇತನ 60,000 ರೂ.ಗಳು, ಸಂಪುಟ ದರ್ಜೆ ಸಚಿವರು 60,000 ರೂ., ರಾಜ್ಯ ಸಚಿವರು 50,000 ರೂ., ವಿಧಾನಸಭೆ ಸ್ಪೀಕರ್ ಮತ್ತು ಪರಿಷತ್ ಸಭಾಪತಿಗಳು 75,000 ರೂ., ವಿಪಕ್ಷದ ಮುಖ್ಯ ಸಚೇತಕರು 50,000 ರೂ. ಮತ್ತು ವಿಧಾನ ಪರಿಷತ್ ಸದಸ್ಯರು 40,000 ರೂ. ವೇತನ ಪಡೆಯುತ್ತಿದ್ದಾರೆ.
ಶಾಸಕರ ವೇತನ, ಭತ್ಯೆಗಳು
* ಶಾಸಕರ ಪ್ರತಿ ತಿಂಗಳ ವೇತನ 40,000 ರೂ.
* ಕ್ಷೇತ್ರ ಭತ್ಯೆ 60,000 ರೂ.
* ಪ್ರಯಾಣ ಭತ್ಯೆ 60,000 ರೂ.
* ಆಪ್ತ ಸಹಾಯಕರ ವೇತನ 20,000 ರೂ.
* ದೂರವಾಣಿ ವೆಚ್ಚ 20,000 ರೂ.
* ಅಂಚೆ ವೆಚ್ಚ 5000 ರೂ.
ಪ್ರಸ್ತಾವಿತ ಮಸೂದೆಗೆ ಒಪ್ಪಿಗೆ ಸಿಕ್ಕಿದರೆ ಶಾಸಕರ ವೇತನ ಪ್ರತಿ ತಿಂಗಳಿಗೆ 80,000 ರೂ.ಗಳಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಆಗ ವಿವಿಧ ಭತ್ಯೆಗಳು ಸಹ ಏರಿಕೆಯಾಗಲಿವೆ.
ಮುಖ್ಯಮಂತ್ರಿಗಳು ಒಟ್ಟು 2.45 ಲಕ್ಷ ರೂ. ವೇತನ ರೂಪದಲ್ಲಿ (ವಿವಿಧ ಭತ್ಯೆಗಳು ಸೇರಿ) ಪಡೆಯುತ್ತಿದ್ದಾರೆ. ಸಚಿವರು 2.35 ಲಕ್ಷ ರೂ. ವೇತನ ರೂಪದಲ್ಲಿ (ವಿವಿಧ ಭತ್ಯೆ ಸೇರಿ) ಪಡೆಯುತ್ತಿದ್ದಾರೆ.
ಶಾಸಕರ ಮನೆ ಬಾಡಿಗೆ ಭತ್ಯೆ 1.20 ಲಕ್ಷ ರೂ., ಮನೆ ನಿರ್ವಹಣೆ 30 ಸಾವಿರ ರೂ., ಪೆಟ್ರೋಲ್ 2 ಸಾವಿರ ಲೀಟರ್ (ಸಮನಾದ ಭತ್ಯೆ), ಆತಿಥ್ಯ 4.50 ಲಕ್ಷ ರೂ.ಗಳು.












Click it and Unblock the Notifications