ಕೇಜ್ರಿವಾಲ್ ಗೆ ತಿರುಗೇಟು ಕೊಟ್ಟ ಡಿವಿಎಸ್, ಎಚ್ಡಿಕೆ
ಬೆಂಗಳೂರು, ಜ.31 : ಭ್ರಷ್ಟ ರಾಜಕಾರಣಿಗಳ ಪಟ್ಟಿ ತಯಾರಿಸಿ ಅದರಲ್ಲಿ ಕರ್ನಾಟಕ ನಾಲ್ವರನ್ನು ಸೇರಿಸಿದ್ದ ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗೆ ಕರ್ನಾಟಕದ ರಾಜಕಾರಣಿಗಳು ತಿರುಗೇಟು ನೀಡಿದ್ದಾರೆ. ಭ್ರಷ್ಟರ ಪಟ್ಟಿ ತಯಾರಿಸಲು ಕೇಜ್ರಿವಾಲ್ ಗೆ ನೈತಿಕತೆ ಇಲ್ಲ ಎಂದು ಗುಡುಗಿದ್ದಾರೆ.
ಶುಕ್ರವಾರ ಅರವಿಂದ್ ಕೇಜ್ರಿವಾಲ್ ಪಟ್ಟಿಯ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಕೇಜ್ರಿವಾಲ್ ಈ ಕುರಿತು ಬಹಿರಂಗವಾಗಿ ಕ್ಷಮೆ ಯಾಚಿಸಬೇಕು. ನಿರಾಧಾರವಾಗಿ ಅವರು ರಾಜ್ಯದ ಜನಪ್ರತಿನಿಧಿಗಳ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಅವರು ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಬೇಕು ಎಂದು ಸವಾಲು ಹಾಕಿದರು. [ಕೇಜ್ರಿವಾಲ್ ಪಟ್ಟಿಯಲ್ಲಿ ಸ್ಥಾನ ಪಡೆದವರು ಯಾರು]

ಡಿವಿಎಸ್ ಹೇಳಿದ್ದೇನು : ಅಧಿಕಾರದ ಆಸೆಗಾಗಿ ಭ್ರಷ್ಟ ಕಾಂಗ್ರೆಸ್ ಜೊತೆ ಕೈ ಜೋಡಿಸಿ ಸರ್ಕಾರ ರಚನೆ ಮಾಡಿರುವ ಅರವಿಂದ್ ಕೇಜ್ರಿವಾಲ್ ಅವರಿಗೆ ಭ್ರಷ್ಟ ರಾಜಕಾರಣಿಗಳ ಪಟ್ಟಿ ತಯಾರಿಸುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಡಿವಿ ಸದಾನಂದ ಗೌಡ ಕುಟುಕಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕ ಹಕ್ಕನ್ನು ಕೇಜ್ರಿವಾಲ್ ಕಳೆದುಕೊಂಡಿದ್ದಾರೆ. ಆದ್ದರಿಂದ ಅವರು ತಯಾರಿಸುವ ಪಟ್ಟಿಗೆ ಯಾವುದೇ ಆಧಾರವಿಲ್ಲ ಎಂದು ಹೇಳಿದರು.
ಅರವಿಂದ್ ಕೇಜ್ರಿವಾಲ್ ಭ್ರಷ್ಟ ರಾಜಕಾರಣಿಗಳ ಪಟ್ಟಿಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಮತ್ತು ಬಿ.ಎಸ್.ಯಡಿಯೂರಪ್ಪ ಅವರ ಹೆಸರು ಸೇರಿಸಿರುವುದನ್ನು ಖಂಡಿಸಿದ ಡಿವಿ ಸದಾನಂದ ಗೌಡ, ಅವರು ಭ್ರಷ್ಟರು ಎನ್ನುವುದಕ್ಕೆ ಸೂಕ್ತ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಸವಾಲು ಹಾಕಿದರು.
ಎಚ್ಡಿಕೆ ಹೇಳಿದ್ದಿಷ್ಟು : ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಹ ಅರವಿಂದ್ ಕೇಜ್ರಿವಾಲ್ ಭ್ರಷ್ಟರ ಪಟ್ಟಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ವಿರುದ್ಧ ಆರೋಪಗಳಿದ್ದರೆ, ಅವುಗಳ ಕುರಿತು ದಾಖಲೆಗಳನ್ನು ಬಿಡುಗಡೆ ಮಾಡಬೇಕು. ಯಾವುದೇ ರಾಜ್ಯದ ರಾಜಕಾರಣಿಗಳ ವಿರುದ್ಧ ನಿರಾಧಾರ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಜನಪ್ರತಿನಿಧಿಗಳ ವಿರುದ್ಧ ದಾಖಲೆಗಳಿಲ್ಲದೇ ಇಂತಹ ಆರೋಪಗಳನ್ನು ಮಾಡುವುದು. ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಂತಹವರಿಗೆ ಶೋಭೆ ತರುವುದಿಲ್ಲ. ನನ್ನ ಹೆಸರನ್ನು ಲಘುವಾಗಿ ಬಳಸಿದ ಕೇಜ್ರವಾಲ್ ಕ್ಷಮೆ ಯಾಚಿಸಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.












Click it and Unblock the Notifications