ಪುತ್ರನ ಟಿಕೆಟ್‌ಗಾಗಿ ವಿ ಸೋಮಣ್ಣ ಭಾರೀ ಲಾಬಿ: ತುಮಕೂರು ಸಿದ್ದಗಂಗಾ ಮಠಕ್ಕೆ ಭೇಟಿ- ಗುಬ್ಬಿ ಕ್ಷೇತ್ರದ ಬಗ್ಗೆ ಚರ್ಚೆ?
ತುಮಕೂರು, ಏಪ್ರಿಲ್ 11: ವಸತಿ ಸಚಿವ ವಿ. ಸೋಮಣ್ಣ ಮತ್ತು ಅವರ ಪುತ್ರ ಡಾ. ಅರುಣ್ ಸೋಮವಾರ ಇಲ್ಲಿನ ಸಿದ್ದಗಂಗಾ ಮಠದ ಪೀಠಾಧಿಪತಿ ಶ್ರೀ ಸಿದ್ದಲಿಂಗ ಸ್ವಾಮಿಗಳನ್ನು ಭೇಟಿ ಮಾಡಿ ಮಾತನಾಡಿದರು. ಸೋಮಣ್ಣ ಅವರು ಶಾಸಕರಾಗಿ ಪ್ರತಿನಿಧಿಸುವ ಬೆಂಗಳೂರಿನ ಗೋವಿಂದರಾಜನಗರದಿಂದ ಸ್ಪರ್ಧಿಸಲು ಬಯಸಿದ್ದು, ಈ ವಿಚಾರವಾಗಿ ಶ್ರೀ ಸಿದ್ದಲಿಂಗ ಸ್ವಾಮಿ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ತಮ್ಮ ಮಗನಿಗೆ ಗುಬ್ಬಿಯಿಂದ ಬಿಜೆಪಿ ಟಿಕೆಟ್ ಕೇಳಿರುವುದನ್ನು ಸಚಿವರು ಒಪ್ಪಿಕೊಂಡಿದ್ದಾರೆ. ಗೋವಿಂದ ಕಾರಜೋಳ ಮತ್ತು ಎಂಟಿಬಿ ನಾಗರಾಜ್ ಅವರಂತೆ ನನಗೆ ಮತ್ತು ನನ್ನ ಮಗನಿಗೆ ಟಿಕೆಟ್ ನೀಡುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಸೋಮಣ್ಣ ತಿಳಿಸಿದ್ದಾರೆ.

ತಮ್ಮ ಪುತ್ರನಿಗೆ ಟಿಕೆಟ್ ನೀಡುವಂತೆ ಹೈಕಮಾಂಡ್‌ಗೆ ಮನವಿ ಮಾಡಿದ್ದೇವೆ ಎಂದಿದ್ದಾರೆ. ಮೈಸೂರಿನಲ್ಲಿ ವರುಣಾದಿಂದ ಕಣಕ್ಕಿಳಿಯುವ ಬಗ್ಗೆ ಮಾತನಾಡಿದ ಸೋಮಣ್ಣ, ಇದೆಲ್ಲವೂ ವದಂತಿ ಎಂದು ಹೇಳಿದ್ದಾರೆ.
ಬಿಜೆಪಿ ಮೊದಲ ಪಟ್ಟಿಗೆ ಕ್ಷಣಗಣನೆ
ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಹೇಳಿದ್ದಾರೆ.
ಪಟ್ಟಿ ಅಂತಿಮಗೊಳಿಸುವ ಬಗ್ಗೆ ಯಾವುದೇ ಗೊಂದಲವಿಲ್ಲ ಎಂದು ಇದೇ ವೇಳೆ ತಿಳಿಸಿದ್ದಾರೆ. 'ಬಹುಶಃ ಮೊದಲ ಪಟ್ಟಿಯನ್ನು ನಾಳೆ ಅಥವಾ ನಾಡಿದ್ದು ಬಿಡುಗಡೆ ಮಾಡಲಾಗುವುದು' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಟ್ಟಿಯನ್ನು ಸೋಮವಾರ ಸಂಜೆ ಬಿಡುಗಡೆ ಮಾಡುವ ಸಾಧ್ಯತೆ ಇತ್ತು. ಆದರೆ ಹೆಚ್ಚಿನ ಚರ್ಚೆಗಳು ನಡೆಯಬೇಕಾಗಿರುವುದರಿಂದ ಮಂಗಳವಾರ ಅಥವಾ ಬುಧವಾರ ಬಿಡುಗಡೆ ಮಾಡಬಹುದು ಎಂದು ಬೊಮ್ಮಾಯಿ ದೆಹಲಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು.
'ಕೆಲವು ಅಭ್ಯರ್ಥಿಗಳ ಬಗ್ಗೆ ಹೆಚ್ಚಿನ ಗ್ರೌಂಡ್ ರಿಪೋರ್ಟ್ ಸಂಗ್ರಹಿಸಬೇಕಾಗಿದೆ. ಅವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕಬೇಕಿದೆ. ಹೊಸ ಅಭ್ಯರ್ಥಿಗಳ ಬಗ್ಗೆ ಚರ್ಚೆ ನಡೆಯಬೇಕಿದೆ' ಎಂದು ಮುಖ್ಯಮಂತ್ರಿ ಹೇಳಿದರು.
ದೆಹಲಿಯಲ್ಲಿ ಬಹುಸುತ್ತಿನ ಚರ್ಚೆ
ಕರ್ನಾಟಕ ವಿಧಾನಸಭಾ ಚುನಾವಣೆಗೆ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೋಮವಾರ ಬಹು ಸುತ್ತಿನ ಸಭೆಗಳನ್ನು ನಡೆಸಿತು. ಆದರೆ, ನಾಯಕರು ಒಮ್ಮತಕ್ಕೆ ಬರದ ಕಾರಣ ಎಲ್ಲವೂ ವ್ಯರ್ಥವಾಯಿತು ಎಂದು ಮೂಲಗಳು ತಿಳಿಸಿವೆ.

ಅಚ್ಚರಿಯ ಸಂಗತಿಯೆಂದರೆ, ಕರ್ನಾಟಕದ ಬಿಜೆಪಿ ನಾಯಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದಾಗ, ಆ ಸಭೆಯಲ್ಲಿ ಹಿರಿಯ ನಾಯಕ ಬಿಎಸ್ ಯಡಿಯೂರಪ್ಪ ಇರಲಿಲ್ಲ. ಸಭೆ ಮುಗಿದ ತಕ್ಷಣ ಯಡಿಯೂರಪ್ಪ ಶಾ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಸ್ಥಳಕ್ಕೆ ಬಂದರು.
ಈ ಸಭೆ ಮುಗಿದ ಕೂಡಲೇ ಬಿಜೆಪಿ ನಾಯಕರು ಯಡಿಯೂರಪ್ಪ ಇಲ್ಲದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ನಿವಾಸಕ್ಕೆ ಆಗಮಿಸಿದರು. ನಡ್ಡಾ ಅವರನ್ನು ಮಾಜಿ ಸಿಎಂ ಪ್ರತ್ಯೇಕವಾಗಿ ಭೇಟಿಯಾದರು.
ಮೂಲಗಳ ಪ್ರಕಾರ, ಯಡಿಯೂರಪ್ಪ ಅವರು ಸ್ಥಾನಗಳ ಸಂಖ್ಯೆಯ ಬಗ್ಗೆ ಅಚಲವಾಗಿದ್ದು, ತಮ್ಮ ನಿಲುವನ್ನು ಮೃದುಗೊಳಿಸಲು ಸಿದ್ಧರಿಲ್ಲ. ಕರ್ನಾಟಕ ಸರ್ಕಾರದ ಕೆಲವು ಉನ್ನತ ಮಂತ್ರಿಗಳು ತಮ್ಮ ಪುತ್ರರು ಅಥವಾ ಕುಟುಂಬದ ಸದಸ್ಯರಿಗೆ ಟಿಕೆಟ್ ಕೇಳುತ್ತಿದ್ದಾರೆ ಮತ್ತು ಕೆಲವರು ತಮ್ಮ ಕ್ಷೇತ್ರಗಳನ್ನು ಬದಲಾಯಿಸಲು ಕೇಳಿಕೊಂಡಿದ್ದಾರೆ.
ಜೆಪಿ ನಡ್ಡಾ ಅವರ ನೇತೃತ್ವದಲ್ಲಿ ನಡೆದ ಎರಡು ಸಭೆಗಳಲ್ಲಿ ಬಿಎಸ್ ಯಡಿಯೂರಪ್ಪ ಮೂರು ದಿನಗಳ ಕಾಲ ಅಲ್ಲಿದ್ದರು. ಸಂಸದೀಯ ಮಂಡಳಿ ಸಭೆಯಲ್ಲೂ ಪಾಲ್ಗೊಂಡಿದ್ದರು ಎಂದು ಬೊಮ್ಮಾಯಿ ಸಮಜಾಯಿಷಿ ನೀಡಿದ್ದಾರೆ.












Click it and Unblock the Notifications